ನಗರದಲ್ಲಿ ನೀರು ಮಹಾಬರ

Updated on: 

ದಾವಣಗೆರೆ: ಭದ್ರಾ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹಣೆ ಇಲ್ಲದ್ದರಿಂದ ಭದ್ರಾ ನಾಲೆಗೆ ನೀರು ಹರಿಸುವ ದಿನಾಂಕ ನಿಗದಿಪಡಿಸದ ಹಿನ್ನೆಲೆಯಲ್ಲಿ ದಾವಣಗೆರೆ ಮಹಾನಗರದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪಾಲಿಕೆ ಆಯುಕ್ತ ಬಿ.ಎಚ್. ನಾರಾಯಣಪ್ಪ ತಿಳಿಸಿದ್ದಾರೆ.
ಭದ್ರಾ ನಾಲೆಗೆ ನೀರು ಬಿಡುವ ಕುರಿತಂತೆ ಜು.26ರಂದು ಭದ್ರಾ ಕಾಡಾ ಸಮಿತಿ ಸಭೆ ಕರೆದು, ನಿರ್ಧಾರ ಕೈಗೊಳ್ಳುವುದಾಗಿ ಸಮಿತಿ ಹೇಳಿದೆ. ಮೇಯರ್ ರೇಣುಕಾಬಾಯಿ ವೆಂಕಟೇಶನಾಯ್ಕ ಸಭೆಯಲ್ಲಿ ಹಾಜರಾಗಿ, ದಾವಣಗೆರೆ ಮಹಾ ನಗರದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಮಿತಿ ಗಮನಕ್ಕೆ ತಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಮೇ 25ರಿಂದಲೇ ಭದ್ರಾ ನಾಲೆಗೆ ನೀರಿನ ಹರಿವು ಸಂಪೂರ್ಣ ನಿಂತಿದ್ದು, ದಾವಣಗೆರೆ 1ನೇ ಹಂತದ ಸಮಗ್ರ ನೀರು ಸರಬರಾಜು ಕೇಂದ್ರದ ಟಿವಿ ಸ್ಟೇಷನ್ ಕೆರೆಯ ನೀರಿನ ಸಂಗ್ರಹಣಾ ಸಾಮರ್ಥ್ಯ 45 ದಿನವಿದ್ದು, ಈಗಾಗಲೇ 42 ದಿನಗಳ ಕಾಲ ನೀರು ಪೂರೈಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಉಳಿದಿರುವ ಅಲ್ಪಪ್ರಮಾಣದ ನೀರನ್ನು ಭದ್ರಾ ನಾಲೆಗೆ ನೀರು ಹರಿದು ಬರುವವರೆಗೂ ಬಳಸಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜು.10ರಂದು ನೀರು ಸರಬರಾಜು ಮಾಡಬೇಕಾದ ಪ್ರದೇಶಕ್ಕೆ ಜು.13ರಂದು ನೀರು ಬಿಡಲಾಗುವುದು. ಅದೇ ರೀತಿ ಉಳಿದ ಪ್ರದೇಶಕ್ಕೂ ನೀರು ವಿತರಣೆ ದಿನಗಳು ಮುಂದಕ್ಕೆ ಹೋಗುತ್ತದೆ. ಪ್ರತಿ ಮಾರ್ಗಕ್ಕೆ ಈಗ ಹಾಲಿ 1 ಗಂಟೆ 15 ನಿಮಿಷ ಕಾಲ ನೀರು ಬಿಡುತ್ತಿದ್ದು, ಇನ್ನು ಮುಂದೆ ಕೇವಲ 30 ನಿಮಿಷ ಮಾತ್ರ ನೀರು ಪೂರೈಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಹಾ ನಗರ ಪಾಲಿಕೆ ಪೂರೈಸುವ ಕೆರೆ ನೀರನ್ನು ಕೇವಲ ಕುಡಿಯುವುದಕ್ಕೆ ಮಾತ್ರ ಬಳಸಬೇಕು. ಉಳಿದ ಕಾರ್ಯಕ್ಕೆ ಸಮೀಪದ ಬೋರ್‌ಲ್ ನೀರನ್ನು ಬಳಸಲು ಮಹಾ ನಗರದ ಜನತೆ ಮುಂದಾಗಬೇಕು. ಭದ್ರಾ ನಾಲೆಯಲ್ಲಿ ನೀರು ಹರಿದು ಬರುವ ತನಕ ಸಾರ್ವಜನಿಕರು ಪಾಲಿಕೆಯೊಂದಿಗೆ ಸಹಕರಿಸಬೇಕು ಎಂದು ಪಾಲಿಕೆ ಆಯುಕ್ತ ಬಿ.ಎಚ್. ನಾರಾಯಣಪ್ಪ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com