ಶಿಕಾರಿಪುರ: ಯುವ ಸಂಘಟನೆಯಲ್ಲಿ ಅಗಾಧವಾದ ಶಕ್ತಿಯಿದ್ದು, ಇಂಥ ಶಕ್ತಿಯ ದುರ್ಬಳಕೆ ತಡೆದು ದೇಶದ ಪ್ರಗತಿಗೆ ಪೂರಕವಾಗಿ ಬಳಸಿಕೊಂಡಲ್ಲಿ ಸದೃಡ ದೇಶ ನಿರ್ಮಾಣ ಕಾರ್ಯ ಅತ್ಯಂತ ಸುಲಭವಾಗಲಿದೆ ಎಂದು ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಿನ್ನಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಕಾನೂರು ಆರ್ಕೇಡ್ನಲ್ಲಿ ಜೇಸಿಐ ಶಿಕಾರಿಪುರ ಚಂದನ್ ಆತಿಥ್ಯದಲ್ಲಿ ನಡೆದ ಜೇಸಿಐ ವಲಯ 24 ರ ರಿವ್ಯೂ ಟು ರಿಯಾಕ್ಟ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವಪೀಳಿಗೆಯನ್ನು ಸಂಘಟಿಸಿ ಶಿಸ್ತು ಹಾಗೂ ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಗುಣಮಟ್ಟದ ಸಮಾಜ ನಿರ್ಮಿಸುವಲ್ಲಿ ಜೇಸಿಐ ಪಾತ್ರ ಬಹು ಮಹತ್ವದ್ದಾಗಿದೆ. ವಿವಿಧ ರೀತಿಯ ತರಬೇತಿ ಮೂಲಕ ಸದಸ್ಯರನ್ನು ಉತ್ತಮ ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಹೆಮ್ಮೆಯನ್ನು ಜೇಸಿಐ ಹೊಂದಿದೆ ಎಂದರು. ಜೇಸಿಐ ಯುವಪೀಳಿಗೆಯನ್ನು ಮುಖ್ಯವಾಹಿನಿಗೆ ತರುವಲ್ಲಿ ರೂಪಿಸುವ ಎಲ್ಲಾ ಕಾರ್ಯಕ್ರಮಗಳಿಗೆ ತಾ.ರಾಜ್ಯ ಸರ್ಕಾರಿ ನೌಕರರ ಸಂಘ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲು ಸಿದ್ಧವಿದ್ದು ಸೂಕ್ತವಾಗಿ ಬಳಸಿಕೊಳ್ಳಲು ತಿಳಿಸಿದರು.
ಜೇಸಿಐ ವಲಯ ಪೂರ್ವಾಧ್ಯಕ್ಷ ಮಲ್ಲಿಕಾರ್ಜುನ್ ಕಾನೂರು ಮಾತನಾಡಿ, ಇತ್ತೀಚಿನ ದಿನದಲ್ಲಿ ಮಾನವೀಯ ಮೌಲ್ಯಗಳ ಕುಸಿತದಿಂದಾಗಿ ಅಶಾಂತಿ, ಜಗಳ, ಮಾನಸಿಕ ಅಸ್ವಸ್ಥತೆ, ದ್ವೇಷ ಅಸೂಯೆ ತಾಂಡವವಾಡುತ್ತಿದ್ದು ಇವುಗಳನ್ನು ಹೋಗಲಾಡಿಸಲು ಪ್ರತಿಯೊಬ್ಬರೂ ಮಾನವೀಯ ಮೌಲ್ಯಗಳನ್ನು ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು. ತರಬೇತಿಗಳು ಜೇಸಿಐ ಜೀವಾಳವಾಗಿದ್ದು ಯುವಪಡೆಯನ್ನು ಜಾಗೃತಗೊಳಿಸುವಲ್ಲಿ ವ್ಯಕ್ತಿತ್ವ ವಿಕಸನ, ಸುಖೀ ದಾಂಪತ್ಯ ಜೀವನ, ಮಹಿಳೆ ಒಂದು ಶಕ್ತಿ ಮತ್ತಿತರ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳುವಂತೆ ಅವರು ಆಗಮಿಸಿದ್ದ 13 ಜಿಲ್ಲೆಯ 42 ಘಟಕಗಳ ಅಧ್ಯಕ್ಷ, ಸದಸ್ಯರಿಗೆ ಸೂಚನೆ ನೀಡಿದರು. ಜೇಸಿಐ ಸೆನೆಟರ್ ರಾಜಾಭಕ್ಷಿ ಅಧ್ಯಕ್ಷತೆ ವಹಿಸಿದ್ದರು. ವಲಯದ ನಿಕಟಪೂರ್ವ ಅಧ್ಯಕ್ಷ ಜೆಎಫ್ಡಿ ಸಿದ್ರಾಮಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಶಿಕಾರಿಪುರ ಘಟಕಾಧ್ಯಕ್ಷ ಧನಂಜಯಾಚಾರ್, ಕಾರ್ಯದರ್ಶಿ ಎನ್.ವಿ ಸುರೇಶ್ ಶೆಟ್ಟಿ, ರಾಜೇಂದ್ರ ಮತ್ತಿತರರು ಉಪಸ್ಥಿತರಿದ್ದರು. ವೈಷ್ಣವಿ, ಹರ್ಷ ಜೇಸಿವಾಣಿ ವಾಚಿಸಿದರು. ದಿನೇಶ್ ಸ್ವಾಗತಿಸಿ, ಗಣಪತಿ ಭಟ್ ವಂದಿಸಿದರು.