ಸ್ಮಾರಕ ಸಂರಕ್ಷಣೆಗೆ ಮುಂದಾಗಿ: ಸಹನಾ

Updated on: 

ದಾವಣಗೆರೆ: ರಾಜ್ಯ, ರಾಷ್ಟ್ರೀಯ ಪುರಾತನ ಸ್ಮಾರಕಗಳು ಸಮರ್ಪಕ ನಿರ್ವಹಣೆ ಇಲ್ಲದ್ದರಿಂದ ಸಂಪೂರ್ಣ ಶಿಥಿಲಾವಸ್ಥೆ ತಲುಪುತ್ತಿರುವ ಹಿನ್ನೆಲೆಯಲ್ಲಿ ಅವುಗಳಿಗೆ ಕಾಯಕಲ್ಪ ನೀಡುವ ಕೆಲಸವನ್ನು ಪುರಾತತ್ವ ಇಲಾಖೆ ಮಾಡಬೇಕು. ಮುಂದಿನ ಜಿಪಂ ಸಭೆಗಳಿಗೆ ಪುರಾತತ್ವ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು ಎಂದು ಜಿಪಂ ಅಧ್ಯಕ್ಷೆ ಸಹನಾ ರವಿ ಆದೇಶಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುರಾತತ್ವ ಇಲಾಖೆ ವ್ಯಾಪ್ತಿಗೊಳಪಡುವ ರಾಜ್ಯ, ರಾಷ್ಟ್ರೀಯ ಪುರಾತನ ಸ್ಮಾರಕಗಳು ಸರಿಯಾದ ನಿರ್ವಹಣೆಯೇ ಇಲ್ಲದೆ, ಶಿಥಿಲಾವಸ್ಥೆ ತಲುಪುತ್ತಿದ್ದು, ಅವುಗಳ ಸಂರಕ್ಷಣೆಗೆ ಸಬಂಧಿಸಿದ ಇಲಾಖೆ ಗಮನಹರಿಸಲಿ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶಿವರುದ್ರಪ್ಪ ಮಾತನಾಡಿ, ಸರ್ಕಾರದ ಸೂಚನೆಯಂತೆ ರಾಜ್ಯ, ರಾಷ್ಟ್ರೀಯ ಸ್ಮಾರಕಗಳ ಸುತ್ತಲೂ ತಂತಿ ಬೇಲಿ ಹಾಕಿ, ಸಂರಕ್ಷಿಸಲಾಗುತ್ತಿದೆ. ಜಿಲ್ಲೆಯಲ್ಲಿ 7 ರಾಜ್ಯ, 9 ರಾಷ್ಟ್ರೀಯ ಸ್ಮಾರಕಗಳಿವೆ. ರಾಜ್ಯ ಸ್ಮಾರಕಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ, ರಾಷ್ಟ್ರೀಯ ಸ್ಮಾರಕಗಳು ಪುರಾತ್ವ ಇಲಾಖೆಗೆ ಒಳಪಡುತ್ತವೆ. ಪುರಾತತ್ವ ಇಲಾಖೆ ಹೊಸದಾಗಿ ಕಚೇರಿಯನ್ನು ಜಿಲ್ಲೆಯಲ್ಲಿ ಆರಂಭಿಸಿದೆ ಎಂದರು.
ಚನ್ನಗಿರಿ ತಾ. ಹೊದಿಗೆರೆಯಲ್ಲಿ ಛತ್ರಪತಿ ಶಿವಾಜಿ ತಂದೆ ಷಹಾಜಿ ಸಮಾಧಿ, ಸಂತೇಬೆನ್ನೂರಿನ ಪುಷ್ಕರಣಿ, ನೀಲಗುಂದ, ಕುರುವತ್ತಿ, ಉಚ್ಚಂಗಿದುರ್ಗ, ಮತ್ತಿ ತಿಮ್ಮಣ್ಣ ನಾಯಕರ ಸಮಾಧಿ, ಚನ್ನಗಿರಿ ಕಲ್ಲೇಶ್ವರ ದೇವಾಲಯ, ಆನೆಕೊಂಡದ ಈಶ್ವರ ದೇವಸ್ಥಾನ ಇತರೆ ಸ್ಮಾರಕಗಳ ಸಂರಕ್ಷಣೆ ಕಾರ್ಯ ಸಾಗಿದೆ ಎಂದ ಅವರು, ಜಿಲ್ಲೆಯಲ್ಲಿ 54 ಇಲಾಖೆಗಳ ಪೈಕಿ 8 ಇಲಾಖೆಯಲ್ಲಿ ಶೇ. 100ರಷ್ಟು ಕನ್ನಡ ಬಳಕೆಯಾಗುತ್ತಿಲ್ಲ. ಇನ್ನುಳಿದ 48 ಇಲಾಖೆಯಲ್ಲಿ ಕನ್ನಡ ಬಳಕೆಯಾಗುತ್ತಿದೆ ಎಂದರು.
ಸ್ಥಿತಿಗತಿ ಪರಿಶೀಲಿಸಿ: ಜಿಪಂ ಅಧ್ಯಕ್ಷೆ ಸಹನಾ ರವಿ ಮಾತನಾಡಿ, ಕೃಷಿ ಇಲಾಖೆ ಅಧಿಕಾರಿಗಳು ಕೇವಲ ಕಚೇರಿಯಲ್ಲಿ ಕುಳಿತು ಸಮೀಕ್ಷೆ ಮಾಡುವುದನ್ನು ಕೈಬಿಟ್ಟು, ಕ್ಷೇತ್ರಕ್ಕೆ ತೆರಳಿ ಆಯಾ ಪ್ರದೇಶದ ಸ್ಥಿತಿಗತಿ ಪರಿಶೀಲಿಸಬೇಕು. ಮಳೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕು. ಮಳೆ ಕೊರತೆ ಮಧ್ಯೆ ಪರ್ಯಾಯ ಬೆಳೆ ಬಗ್ಗೆ ಮಾರ್ಗದರ್ಶನ ನೀಡಿ, ರೈತರನ್ನು ಸಂಕಷ್ಟದಿಂದ ಪಾರು ಮಾಡಿ ಎಂದು ಸೂಚಿಸಿದರು. ಸಿಇತಿ ಹೇಮಚಂದ್ರ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಶುದ್ಧ ನೀರು ಪೂರೈಸಲು ಒತ್ತು ನೀಡಬೇಕು. ನೀರಿನ ಘಟಕಗಳ ಸ್ಥಾಪನೆ ಕುರಿತಂತೆ ಯಾವುದೇ ನಿರ್ಲಕ್ಷ್ಯ ತೋರಬೇಡಿ. ಅಧಿಕಾರಿಗಳ ಜತೆ ಚರ್ಚಿಸಿ, ಬದ್ಧತೆಯಿಂದ ಕೆಲಸ ಮಾಡಿ. ಕುಡಿಯುವ ನೀರನ್ನು ಪೂರೈಸುವ ಬಗ್ಗೆ ಯಾವುದೇ ನಿರ್ಲಕ್ಷ್ಯ ಬೇಡ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com