ಹೊನ್ನಾಳಿ: ಪಟ್ಟಣ ಹಾಗೂ ಗೊಲ್ಲರಹಳ್ಳಿಯಲ್ಲಿ ಅಕ್ರಮ ಮರಳು ಸಂಗ್ರಹ ಸ್ಥಳದ ಮೇಲೆ ದಾಳಿ ನಡೆಸಿ ಸುಮಾರು 40 ಲಕ್ಷದ ಮೌಲ್ಯದ 490 ಟ್ರ್ಯಾಕ್ಟರ್, 70 ಲಾರಿ ಲೋಡ್ ಮರಳನ್ನು ತಹಸೀಲ್ದಾರ್ ಗೋಪಿನಾಥ್ ಹಾಗೂ ಸಿಪಿಐ ನಾಗರಾಜ್ ಮಾಡಳ್ಳಿ ನೇತೃತ್ವದ ತಂಡ ವಶಪಡಿಸಿಕೊಂಡಿದೆ. ಕಳೆದ ಎರಡು ದಿನಗಳ ಹಿಂದಷ್ಟೆ ದಾವಣಗೆರೆ ಲೋಕಾಯುಕ್ತರು ತಾಲೂಕಿನ ತುಂಗಾ ನದಿ ಪಾತ್ರದಲ್ಲರುವ ಸಾಸ್ವೇಹಳ್ಳಿ ಭಾಗದ ಕುಳಗಟ್ಟೆ, ಕ್ಯಾಸಿನಕೆರೆ, ಹನುಮನಹಳ್ಳಿ, ಲಿಂಗಾಪುರ, ರಾಂಪುರ, ಬುಳ್ಳಾಪುರ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಬೀರಗೊಂಡನಹಳ್ಳಿ ಗ್ರಾಮದಲ್ಲಿ ಅಕ್ರಮ ಮರಳು ದಾಸ್ತಾನು ವಶಪಡಿಸಿಕೊಂಡಿದ್ದರು.
ಈಗ ಇದರ ಬೆನ್ನಲ್ಲೇ ಹೊನ್ನಾಳಿ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಯ ಗೊಲ್ಲರಹಳ್ಳಿ ಹಾಗೂ ಹೊನ್ನಾಳಿ ಪಟ್ಟಣದಲ್ಲಿ ದಾಳಿ ನಡೆಸಿ ಅಕ್ರಮವಾಗಿ ಸಾಗಣೆ ಮಾಡಿ ಸಂಗ್ರಹಿಸಿಟ್ಟಿದ್ದ ಮರಳನ್ನು ವಶಪಡಿಸಿಕೊಂಡಿದ್ದಾರೆ. ತಾಲೂಕಿನಲ್ಲಿ ಎಲ್ಲೆಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಮಾಡಿದ್ದಾರೋ ಅಲ್ಲಿಯ ಮಾಹಿತಿ ಈಗಾಗಲೇ ಬಂದಿದ್ದು, ಈ ದಾಳಿಯನ್ನು ಇನ್ನು ಎರಡು ದಿನ ಮುಂದುವರಿಸುತ್ತೇವೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ. ಮೆಚ್ಚುಗೆ: ಹೊನ್ನಾಳಿ ತಾಲೂಕಿನಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ಸ್ಥಳಗಳಿಗೆ ದಾಳಿ ನಡೆಸಿ ಪರಿಸರವನ್ನು ಕಾಪಾಡಲು ಹೊರಟಿರುವ ಲೋಕಾಯುಕ್ತ ಹಾಗೂ ಹೊನ್ನಾಳಿ ತಹಸೀಲ್ದಾರ್ ಮತ್ತು ಸಿಪಿಐ ಬಗ್ಗೆ ಹಲವು ಪರಿಸರ ಪ್ರೇಮಿಗಳು ಹಾಗೂ ಪ್ರಜ್ಞಾವಂತ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಕ್ರಮ ಮರಳು ಸಾಗಣೆಗೆ ತಡೆಯೊಡ್ಡದಿರಿ: ರೇಣುಕಾಚಾರ್ಯ
ಹೊನ್ನಾಳಿ: ಸರ್ಕಾರದ ನೀತಿ ಅನುಸಾರವಾಗಿ ಮನೆ ಕಟ್ಟಲು ತುಂಗಾಭದ್ರಾ ನದಿಯಿಂದ ಮರಳು ಸಾಗಣೆ ಮಾಡಿ ಸಂಗ್ರಹಿಸಿದರೆ ಪೊಲೀಸರು ಹಾಗೂ ತಹಸೀಲ್ದಾರ್ ದಾಳಿ ನಡೆಸಿ ಮರಳನ್ನು ವಶಪಡಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲೂಕು ಕಚೇರಿಯಲ್ಲಿ ಸೋಮವಾರ ತಹಸೀಲ್ದಾರ್ ಹಾಗೂ ಪೊಲೀಸರ ಜತೆ ಮರಳು ವಶಪಡಿಸಿಕೊಂಡಿದ್ದರ ಬಗ್ಗೆ ಚರ್ಚೆ ನಡೆಸಿದ ಮಾಜಿ ಸಚಿವರು, ಅಕ್ರಮವಾಗಿ ಮರಳು ಸಾಗಣೆ, ಸಂಗ್ರಹಿಸಿದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ. ಆದರೆ, ತಾಲೂಕಿನ ಜನತೆ ಮನೆ ಕಟ್ಟಲು ಕಾನೂನಿನ ರೀತಿಯಲ್ಲಿ ರಾಯಲ್ಟಿ ಹಣ 900 ಹಾಗೂ ಜಿಪಿಎಸ್ಗೆ ತಿಂಗಳ ಬಾಡಿಗೆ 500 ಕಟ್ಟಬೇಕು. ಪ್ರತಿವರ್ಷ 15 ಸಾವಿರ ಕಟ್ಟುವುದರ ಜತೆಗೆ ನವೀಕರಣಕ್ಕೆ 3500 ಹಾಗೂ ರಸ್ತೆ ರಹದಾರಿಗೆ 650 ಕಟ್ಟುತ್ತಾರೆ. ತುಂಗಾಭದ್ರಾ ನದಿಯಿಂದ ಮರಳು ಸಾಗಣೆ ಮಾಡಿ ಮನೆ ಕಟ್ಟಲು ಬಳಕೆ ಮಾಡಲು ಮರಳು ಸಂಗ್ರಹಿಸುತ್ತಿದ್ದಾರೆ. ಇದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ ಮರಳು ವಶ ಪಡಿಸಿಕೊಳ್ಳುತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಹಸೀಲ್ದಾರ್ ಟಿ. ಗೋಪಿನಾಥ್ ಮಾತನಾಡಿ, ಅಕ್ರಮವಾಗಿ ಮರಳು ಸಂಗ್ರಹಿಸಿದರೆ ಅದನ್ನು ವಶಪಡಿಸಿಕೊಳ್ಳುತ್ತೇವೆ ಹಾಗೂ ಯಾವುದೆ ಕಾರಣಕ್ಕೂ ಸಕ್ರಮವಾಗಿ ತಂದರೂ ಮರಳನ್ನು ಸಂಗ್ರಹಿಸುವ ವ್ಯವಸ್ಥೆ ಸರ್ಕಾರದ ನಿಯಮಾವಳಿಯಲ್ಲಿ ಇಲ್ಲದೆ ಇರುವುದರಿಂದ ತಂದ ಮರಳನ್ನು ಕಟ್ಟಣ ನಿರ್ಮಾಕ್ಕೆ ಉಪಯೋಗಿಸಿಕೊಳ್ಳಬೇಕು. ಅದರೆ, ಕೆಲವೆಡೆ ಕಟ್ಟಡ ನಿರ್ಮಾಣಕ್ಕೆ ಬೇಕಾಗಿರುವ ಮರಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹ ಮಾಡಲಾಗಿದೆ ಎಂದರು.ಕಾನೂನಿನ ರೀತಿಯಲ್ಲಿ ಮರಳನ್ನು ತಂದಿದ್ದೆ ಆದಲ್ಲಿ ಅಗತ್ಯ ದಾಖಲೆಗಳನ್ನು ಲೋಕೋಪಯೋಗಿ ಇಲಾಖೆಗೆ ಒದಗಿಸಿದರೆ ನಂತರ ವಶಪಡಿಸಿಕೊಂಡ ಮರಳನ್ನು ಪಡೆಯಬಹುದು ಎಂದರು. ಪೊಲೀಸ್ ಸರ್ಕಲ್ ಇನ್ಸಪೆಕ್ಟರ್ ನಾಗರಾಜ್ ಎಂ. ಮಾಡಳ್ಳಿ, ಸಬ್ ಇನ್ಸಪೆಕ್ಟರ್ ಸುನೀಲ್ಕುಮಾರ್, ನ್ಯಾಮತಿ ಪಿಎಸೈ ರಾಘವೇಂದ್ರ ಕಾಂಡಿಕೆ ತಾಪಂ ಸದಸ್ಯ ಸುರೇಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.