ಕ.ಪ್ರ.ವಾರ್ತೆ ಹರಿಹರ ಜು.17
ಹಿಂದೂಗಳಿಗೆ ಆಷಾಢ ಮಾಸವನ್ನು ಹೊರತು ಪಡಿಸಿದರೆ, ಪ್ರತಿ ತಿಂಗಳೂ ಹಬ್ಬಗಳು ಇದ್ದೇ ಇರುತ್ತವೆ ಎಂಬುದು ವಾಡಿಕೆ. ನಿಜಾಂಶವೆಂದರೆ, ಆಷಾಢ ಮಾಸದಲ್ಲೂ ಹಿಂದೂಗಳು ಮೂರು ಹಬ್ಬವನ್ನು ಆಚರಿಸುತ್ತಾರೆ. ಮಣ್ಣೆತ್ತಿನ ಅಮವಾಸ್ಯೆ, ಗುರು ಪೌರ್ಣಿಮೆ ಹಾಗೂ ಭಾಗೀರಥಿ.
ಇವುಗಳಲ್ಲಿ ಮಹಿಳೆಯರಿಗೆ ಅತ್ಯಂತ ಪ್ರಿಯವಾದ ಹಬ್ಬ, ಭಾಗೀರಥಿ. ಆಷಾಡದಲ್ಲಿ ತುಂಗಭದ್ರೆ ಮೈದುಂಬಿ ಹರಿಯುತ್ತಾಳೆ. ಆಷಾಢ ಮಾಸದ ಜಿಟಿ ಜಿಟಿ ಮಳೆಯಲ್ಲಿ ಮೈದುಂಬಿ ಹರಿಯವ ತುಂಗಭದ್ರೆ ಗಾಂಭೀರ್ಯತೆ ವೀಕ್ಷಿಸುವುದೇ ಕಣ್ಣಿಗೆ ಹಬ್ಬ. ಪ್ರಕೃತಿಯನ್ನು ಆರಾಧಿಸುತ್ತಾ, ಪೂಜಿಸುವುದೇ ಭಾಗೀರಥಿ ಹಬ್ಬದ ಸೊಬಗು.
ಈ ಹಬ್ಬದ ಪ್ರಮುಖ ಆಕರ್ಷಣೆ ಗಂಗಾ ಪೂಜೆ. ಹಬ್ಬದ ದಿನ ಆಸ್ತಿಕ ಮಹಿಳೆಯರು ಮಡಿಯುಡಿಗೆ ತೊಟ್ಟು ಗಂಗಾ ಪೂಜೆಗಾಗಿ ನಗರದ ತುಂಗಭದ್ರೆ ದಡಕ್ಕೆ ತೆರಳುತ್ತಾರೆ. ನದಿ ದಡದಲ್ಲಿ ಗಂಗಾ ಕಳಸ ಸ್ಥಾಪನೆ ಮಾಡಿ, ಅದಕ್ಕೆ ಅರಿಶಿಣ, ಕುಂಕುಮ ಹೂಗಳಿಂದ ಅಲಂಕಾರ ಮಾಡುತ್ತಾರೆ. ಕಳಸದ ಮುಂಭಾಗದಲ್ಲಿ ಜೋಡೆಲೆಯಲ್ಲಿ ಅಡಿಕೆ ಹಣ್ಣುಗಳಿಂದ ಕೂಡಿದ ಐದು ಉಡಿಗಳನ್ನು ಇರಿಸಿ, ಕಳಸಕ್ಕೆ ಸೀರೆ-ಕುಪ್ಪಸ ಏರಿಸಿ ಭಕ್ತಿಭಾವದಿಂದ ಪೂಜೆ ಸಲ್ಲಿಸುತ್ತಾರೆ.
ಹೊಸದಾಗಿ ಮದುವೆಯಾದ ಮಹಿಳೆಯರು ಆಷಾಢ ಮಾಸದಲ್ಲಿ ತವರು ಮನೆಗೆ ಬಂದಿರುತ್ತಾರೆ. ಅವರೂ ಸಹ ಸಡಗರದಿಂದ ಹಬ್ಬ ಆಚರಿಸುತ್ತಾರೆ. ಆಷಾಢದಲ್ಲಿ ತವರು ಮನೆಗೆ ಬರುವ ಮಹಿಳೆಯರು ಶ್ರಾವಣದ ಪಂಚಮಿ ಹಬ್ಬವನ್ನು ಮುಗಿಸಿಕೊಂಡೇ ಗಂಡನ ಮನೆಗೆ ಹೋಗುವುದು. ಆಷಾಢ ಮಾಸದ ಜಿಟಿಜಿಟಿ ಮಳೆಯಲ್ಲೂ ರೇಷ್ಮೆ ಸೀರೆಯುಟ್ಟು ನದಿಗೆ ಪೂಜೆ ಸಲ್ಲಿಸುವ ಮುತ್ತೈದೆಯರ ಸಂಭ್ರಮ ವರ್ಣಿಸಲಸಾಧ್ಯ.
ಮೊದಲೆಲ್ಲ ಪೂಜೆ ಬಳಿಕ ಕುಟುಂಬ ಸಮೇತರಾಗಿ ವಿವಿಧ ಭಕ್ಷ್ಯ ಭೋಜನಗಳನ್ನು ನದಿ ದಡದಲ್ಲಿ ಸೇವಿಸುತ್ತಿದ್ದರು. ಆದರೆ ತುಂಬಿದ ಹೊಳೆ, ಮಳೆಯಿಂದಾಗಿ ಇತ್ತೀಚೆಗೆ ಮನೆಗೆ ತೆರಳಿ ಮನೆಯಲ್ಲಿಯೇ ಹಬ್ಬದೂಟ ಸವಿಯುತ್ತಾರೆ.