ಹರಪನಹಳ್ಳಿ: ತಾಲೂಕಿನ ವಿವಿಧೆಡೆ ಅಕ್ರಮ ಮದ್ಯದ ಅಂಗಡಿಗಳು ತಲೆ ಎತ್ತಿದ್ದು, ಆ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಲೋಕಾಯುಕ್ತ ಇನ್ಸ್ಪೆಕ್ಟರ್ ಅವರಿಗೆ ಸಾರ್ವಜನಿಕರು ಬುಧವಾರ ದೂರು ಸಲ್ಲಿಸಿದರು.
ಸಾರ್ವಜನಿಕರ ದೂರು, ದುಮ್ಮಾನ ಆಲಿಸಲು ಪಟ್ಟಣದ ಪ್ರವಾಸಿ ಮಂದಿರಕ್ಕೆ ದಾವಣಗೆರೆ ಲೋಕಾಯುಕ್ತ ಇನ್ಸ್ಪೆಕ್ಟರ್ ಎಂ.ಕೆ. ಗಂಗಲ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘಟವನೆ ಅಧ್ಯಕ್ಷ ಕೆ. ಮೈಲಪ್ಪ ಹಾಗೂ ಜಿಲ್ಲಾ ಉಪಾಧ್ಯಕ್ಷ ಎಚ್.ಬರ್ಮಪ್ಪ ಅವರು ಹುಲ್ಲಿಕಟ್ಟಿ, ಜಿ.ದಾದಾಪುರ ಮುಂತಾದ ಗ್ರಾಮಗಳಲ್ಲಿ ಅಕ್ರಮ ಬ್ರಾಂಡಿ ಅಂಗಡಿಗಳು ಇದ್ದು, ಅವುಗಳನ್ನು ತಡೆಗಟ್ಟಲು ಇಲ್ಲಿಯ ಅಬಕಾರಿ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಕ್ರಮ ಕೈಗೊಳ್ಳಿ: ತಾಲೂಕಿನಾದ್ಯಂತ ಇರುವ ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ವಿಫಲವಾದ ಸ್ಥಳೀಯ ಅಬಕಾರಿ ಇನ್ಸ್ಪೆಕ್ಟರ್ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದರು.
ಬಸವ ವಸತಿ ಯೋಜನೆಯಲ್ಲಿ ಮಂಜೂರಾದ ಮನೆ ನಿರ್ಮಿಸಿಕೊಂಡಿದ್ದರೂ, ಹಣ ನೀಡಿಲ್ಲ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ ಪಲಾನುಭವಿ ಅರಸಿಕೇರಿಯ ಹಿಕ್ಕಿಂಗೇರಿ ಚೆನ್ನಬಸಮ್ಮ ಅವರಿಗೆ ಸ್ಪಂದಿಸಿದ ಲೋಕಾಯುಕ್ತ ಇನ್ಸೆಪೆಕ್ಟರ್ ಅವರು ತಾಪಂ ವ್ಯವಸ್ಥಾಪಕರನ್ನು ಕರೆಸಿ ವಿಚಾರಿಸಿದರು.
ಅಧಿಕಾರಿಗೆ ತಾಕೀತು: ಶೀಘ್ರ ಆ ಬಡ ಪಲಾನುಭವಿ ಹಿಕಿಂಗೇರಿ ಚೆನ್ನಬಸಮ್ಮ ಅವರಿಗೆ ನಿಗದಿತ ಹಣ ನೀಡಲು ಕ್ರಮ ಕೈಗೊಳ್ಳಬೇಕು ಎಂದು ದೂರವಾಣಿಯಲ್ಲಿ ಸಂಬಂಧ ಪಟ್ಟ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ತಾಕೀತು ಮಾಡಿದರು. ಹಲುವಾಗಲು ಪಾರ್ವತಮ್ಮ ಎಂಬುವವರ ಜಮೀನನ್ನು 50 ದಿನ ಕಳೆದರೂ ಸರ್ವೆ ಮಾಡಿ ಕೊಡದೇ ಸತಾಯಿಸುತ್ತಿದ್ದಾರೆ ಎಂದು ಅವರ ಪುತ್ರ ಮಂಜುನಾಥ ದೂರು ಸಲ್ಲಿಸಿದರು.