ದಾವಣಗೆರೆ: ಅವಧಿಪೂರ್ವ ಜನಿಸುವ ಶಿಶುಗಳ ಜೀವ ಸಂರಕ್ಷಣೆ ವೈದ್ಯಕೀಯ ಕ್ಷೇತ್ರಕ್ಕೆ ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಜೀವ ವೈದ್ಯಕೀಯ ಮಾಪನ ಉಪಕರಣಗಳ ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ ಎಂದು ಬಾಪೂಜಿ ಮಕ್ಕಳ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ, ಮಕ್ಕಳ ತಜ್ಞ ಡಾ.ಜಿ.ಗುರುಪ್ರಸಾದ್ ಹೇಳಿದರು.
ನಗರದ ಯುಬಿಡಿಟಿ ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಇನ್ಸ್ಟ್ರುಮೆಂಟೇಷನ್ ತಂತ್ರಜ್ಞಾನ ವಿಭಾಗದಲ್ಲಿ ಬುಧವಾರ ವಿಟಿಯು, ರಾಜ್ಯ ವಿಜ್ಞಾನ, ತಂತ್ರಜ್ಞಾನ ದೃಷ್ಟಿ ಸಮೂಹದಿಂದ ಏರ್ಪಡಿಸಿದ್ದ ಗುಣಮಟ್ಟದ ಆರೋಗ್ಯ ರಕ್ಷಣೆಗಾಗಿ ಜೀವ ವೈದ್ಯಕೀಯ ಮಾಪಕ ಉಪಕರಣಗಳಲ್ಲಿ ಸುಧಾರಣೆ ವಿಷಯದ ಕುರಿತ 3 ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಅವಧಿಗೆ ಮುನ್ನ ಜನಿಸಿದ ಶಿಶುಗಳ ಸಂರಕ್ಷಣೆಗೆ ಪೂರಕವಾಗಿ ವೈದ್ಯಕೀಯ ಸಂಶೋಧನೆಗಳು ಹೆಚ್ಚಬೇಕಿದೆ ಎಂದರು. ದೇಶದಲ್ಲಿ ಶಿಶು ಮರಣ ಸಂಖ್ಯೆ ಹೆಚ್ಚಲು ಅವಧಿಪೂರ್ವ, ಅಪಕ್ವ ಶಿಶು ಜನನವೇ ಕಾರಣ. ಇನ್ ಕ್ಯುಬಿಲೇಟರ್ ಮತ್ತು ವೆಂಟಿಲೇಟರ್ಗಳು ಈ ಸಮಸ್ಯೆಗೆ ನಿವಾರಣೆಯ ಸಾಧನಗಳಾಗಿವೆ. ಇವು ತಾಂತ್ರಿಕ ಮತ್ತು ತಂತ್ರಜ್ಞಾನ ಕ್ಷೇತ್ರದ ಕೊಡುಗೆಗಳು. ಇಂತಹ ಸಾಧನಗಳ ಗುಣಮಟ್ಟ, ಕಾರ್ಯಕ್ಷಮತೆ ಮತ್ತಷ್ಟು ಸುಧಾರಿಸಲು, ಪರಿಣಾಮಕಾರಿ ಆಗಿಸುವ ಸಂಶೋಧನೆ ನಡೆಯಬೇಕಿದೆ ಎಂದರು.
ಬಿಐಇಟಿ ಕಾಲೇಜು ಪ್ರಾಚಾರ್ಯ ಡಾ. ಕೆ.ಎಸ್. ಬಸವರಾಜಪ್ಪ ಮಾತನಾಡಿ, ಕಾಯಿಲೆಗಳ ತಪಾಸಣೆಯಲ್ಲಿ ಗಣಿತಶಾಸ್ತ್ರದ ಪಾತ್ರವೂ ಮಹತ್ವದ್ದಾಗಿದೆ. ರೋಗಿಗಳ ದೈಹಿಕ ಸ್ಥಿತಿಗೆ ಹೊಂದಬಹುದಾದ ಆಹಾರ ಪೂರೈಕೆಯಲ್ಲೂ ಪೌಷ್ಟಿಕಾಂಶ, ಅನ್ನಾಂಗ, ಕಾರ್ಬೋಹೈಡ್ರೇಟ್ಗಳ ಪ್ರಮಾಣದ ಲೆಕ್ಕಾಚಾರವೂ ಗಣಿತ ಆಧಾರಿತವಾಗಿರುತ್ತದೆ. ಇವುಗಳ ನಿರ್ಧಿಷ್ಟತೆ ಮತ್ತು ನಿಖರತೆಗೆ ಪೂರಕವಾದ ಸಾಧನಗಳ ಆವಿಷ್ಕಾರವೂ ಇನ್ಸ್ಟ್ರುಮೆಂಟೇಷನ್ ತಂತ್ರಜ್ಞಾನದಿಂದಲೇ ಸಿಗುತ್ತದೆ ಎಂದು ಹೇಳಿದರು.
ಯುಬಿಡಿಟಿ ಕಾಲೇಜು ಪ್ರಾಚಾರ್ಯ ಡಾ.ಶಿವಪ್ರಸಾದ್. ದಂಡಗಿ ಅಧ್ಯಕ್ಷತೆ ವಹಿಸಿದ್ದರು.
ವಿಭಾಗದ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ ಹೊಳಿ, ಪ್ರೊ. ಟಿ.ಡಿ. ವಿಷ್ಣುಮೂರ್ತಿ, ಪ್ರೊ. ಎಸ್.ಮಧುಸೂದನ್, ಪ್ರೊ.ಕುಮಾರ ಗಣಪತಿ ಅಡಿ, ಡಾ. ಎಸ್.ಎಲ್. ಸುನೀತಾ, ಡಿ.ಆರ್. ಸಂತೋಷ ಕುಮಾರ, ಎಸ್.ಎ. ಪುಷ್ಪಾ, ಎಚ್.ಟಿ. ಫರೀದಾ, ಲತಾಶ್ರೀ ದೀಕ್ಷಿತ್, ರೇಖಾ ಪದಕಿ ಇತರರು ಇದ್ದರು.
ಮೂರು ದಿನಗಳ ಕಾರ್ಯಾಗಾರದಲ್ಲಿ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳ ತಾಂತ್ರಿಕ ಮಹಾ ವಿದ್ಯಾಲಯಗಳ ಪ್ರಾಧ್ಯಾಪಕರು, ತಜ್ಞರು ಪಾಲ್ಗೊಂಡಿದ್ದಾರೆ.
ದೇಶದಲ್ಲಿ ಶಿಶು ಮರಣ ಸಂಖ್ಯೆ ಹೆಚ್ಚಲು ಅವಧಿಪೂರ್ವ, ಅಪಕ್ವ ಶಿಶು ಜನನವೇ ಕಾರಣ. ಇನ್ ಕ್ಯುಬಿಲೇಟರ್ ಮತ್ತು ವೆಂಟಿಲೇಟರ್ಗಳು ಈ ಸಮಸ್ಯೆಗೆ ನಿವಾರಣೆಯ ಸಾಧನಗಳಾಗಿವೆ. ಇವು ತಾಂತ್ರಿಕ ಮತ್ತು ತಂತ್ರಜ್ಞಾನ ಕ್ಷೇತ್ರದ ಕೊಡುಗೆಗಳು. ಇಂತಹ ಸಾಧನಗಳ ಗುಣಮಟ್ಟ, ಕಾರ್ಯಕ್ಷಮತೆ ಮತ್ತಷ್ಟು ಸುಧಾರಿಸಲು, ಪರಿಣಾಮಕಾರಿ ಆಗಿಸುವ ಸಂಶೋಧನೆ ನಡೆಯಬೇಕಿದೆ
ಡಾ.ಜಿ.ಗುರುಪ್ರಸಾದ್