ಸರಣಿ ಅಪಘಾತ: ಬೈಕ್ ಸವಾರರಿಬ್ಬರ ಸಾವು

Updated on: 

ಹರಿಹರ: ಸಮೀಪದ ಗುತ್ತೂರು ಗ್ರಾಮದ ರಸ್ತೆಯ ಬಳಿ ಇರುವ ಲಕ್ಷ್ಮಿ ಫೌಂಡ್ರಿ ಸಮೀಪ ನಡೆದ ಸರಣಿ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ.ಗುತ್ತೂರು ಗ್ರಾಮದ ಶಿವು(26) ಹಾಗೂ ಆನಂದ (23) ಮೃತಪಟ್ಟ ದುರ್ದೈವಿಗಳು. ಹರಪನಹಳ್ಳಿ ತಾಲೂಕಿನ ತಿಮ್ಮೇಶ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಕೂಲಿ ಕೆಲಸ ಮಾಡುತ್ತಿದ್ದ ಶಿವು ಹಾಗೂ ಆನಂದ ಕಾರ್ಯ ನಿಮಿತ್ತ ಬೈಕ್‌ನಲ್ಲಿ ಹರಿಹರಕ್ಕೆ ತೆರಳುತ್ತಿದ್ದಾಗ ಎದುರಿನಿಂದ ಆಗಮಿಸಿದ ಟಾಟಾ ಎಸಿ ವಾಹನ ಮುಖಾಮುಖಿ ಡಿಕ್ಕಿ ಹೊಡೆದಿದೆ. ಇದೇ ಸಂದರ್ಭದಲ್ಲಿ ವೇಗವಾಗಿ ಆಗಮಿಸುತ್ತಿದ್ದ ಲಾರಿಯು ಟಾಟಾ ಎಸಿ ಹಾಗೂ ಬೈಕ್‌ಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಬಾಬಾ ಸಾಹೇಬ್ ನಿಮೆಗೌಡ, ಸಿಪಿಐ ಪಂಪನಗೌಡ ಹಾಗೂ ನಗರ ಠಾಣೆ ಪಿಎಸ್‌ಐ ಮೇಘರಾಜ್ ಹಾಗೂ ಗ್ರಾಮಾಂತರ ಪಿಎಸ್‌ಐ ಸುನಿಲ್‌ಕುಮಾರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ವಿದ್ಯುತ್ ವ್ಯತ್ಯಯ ಇಂದು
ದಾವಣಗೆರೆ 11 ಕೆ.ವಿ. ವಿದ್ಯಾನಗರ ವಿದ್ಯುತ್ ಮಾರ್ಗದ ಮೇಲೆ ತುರ್ತು ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಜು.24ರಂದು ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಅಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ಇಲ್ಲಿನ ವಿದ್ಯಾನಗರ, ತರಳಬಾಳು ಬಡಾವಣೆ, ಶಿವಕುಮಾರ ಸ್ವಾಮಿ ಬಡಾವಣೆ 1 ಮತ್ತು 2ನೇ ಹಂತ ಹಾಗೂ ಸರ್ಕಾರಿ ಐಟಿಐ ಕಾಲೇಜು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು, ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ನಗರ ಉಪ ವಿಭಾಗ- 1ರ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಎ.ಕೆ. ತಿಪ್ಪೇಸ್ವಾಮಿ ಕೋರಿದ್ದಾರೆ.
ನಿರಂಜನಗೆ ಪ್ರತಿಭಾ ಪುರಸ್ಕಾರ
ದಾವಣಗೆರೆಯ ಚಿಕ್ಕನಹಳ್ಳಿ ದೊಡ್ಡಪ್ಪ ಪ್ರೌಢಶಾಲೆ ವಿಶೇಷ ವಿದ್ಯಾರ್ಥಿ ಎಂ.ಜಿ. ನಿರಂಜನಕುಮಾರ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 68.47 ಅಂಕಗಳಿಸಿ, ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾದ ಹಿನ್ನೆಲೆಯಲ್ಲಿ ಬೆಂಗಳೂರಿನ ನಯನ ಸಭಾಂಗಣದಲ್ಲಿ ಜು.24ರಂದು ನಡೆಯುವ ಸಮಾರಂಭದಲ್ಲಿ ಶ್ರವಣ ಮಾಂದ್ಯತೆಯ ಮಕ್ಕಳಿಗೆ ನೀಡುವ ಪ್ರತಿಭಾ ಪುರಸ್ಕಾರ ಸ್ವೀಕರಿಸಲಿದ್ದಾನೆ. ಎಂ.ಕೆ. ಗಿರೀಶಕುಮಾರ, ತ್ರಿವೇಣಿ ದಂಪತಿ ಪುತ್ರ ನಿರಂಜನ್‌ಗೆ ಬೆಂಗಳೂರಿನ ಫೌಂಡೇಷನ್ ಫಾರ್ ಆರ್ಟ್ ಅಂಡ್ ಕಲ್ಚರ್ ಫಾರ್ ಡೆಫ್ ಸಂಸ್ಥೆ ಪುರಸ್ಕಾರ ನೀಡಲಿದೆ ಎಂದು ಶಾಲೆ ಪ್ರಕಟಣೆ ತಿಳಿಸಿದೆ.
ಜಯದೇವಗೆ ಮಾಗನೂರು ಬಸಪ್ಪ ಪ್ರಶಸ್ತಿ ಪ್ರದಾನ 28ಕ್ಕೆ
ದಾವಣಗೆರೆ:  ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಜು.28ರಂದು ಬೆಳಗ್ಗೆ 11 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕವು ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದಿಂದ ನೀಡುವ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿಯನ್ನು ಬಿಳಿಗಿರಿರಂಗನಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಸಂಸ್ಥಾಪಕ ಸದಸ್ಯ ಜಿ.ಎಸ್. ಜಯದೇವ್ ಅವರಿಗೆ ಪ್ರದಾನ ಮಾಡಲಿದೆ ಎಂದು ಪರಿಷತ್ ಜಿಲ್ಲಾಧ್ಯಕ್ಷ ಕೆ.ಆರ್. ಉಜ್ಜಿನಪ್ಪ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮೈಸೂರಿನ ನಿವೃತ್ತ ಪ್ರಾಚಾರ್ಯ ಪ್ರೊ. ಕೆ.ಬಿ. ಪ್ರಭುಪ್ರಸಾದ್ ಸಮಾಜ ಸೇವಕ, ದೀನಬಂಧು ಜಿ.ಎಸ್. ಜಯದೇವ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು. ಪ್ರತಿಷ್ಠಾನದ ಅಧ್ಯಕ್ಷ ಮಾಗನೂರು ಸಂಗಮೇಶ್ವರಗೌಡ, ಕಸಾಪ ಜಿಲ್ಲಾಧ್ಯಕ್ಷ ಎ.ಆರ್. ಉಜ್ಜಿನಪ್ಪ ಭಾಗವಹಿಸುವರುನಿವೃತ್ತ ಪ್ರಾಚಾರ್ಯ ಪ್ರೊ. ನಾ.ಲೋಕೇಶ ಒಡೆಯರ್, ಕಸಾಪ ಪದಾಧಿಕಾರಿಗಳಾದ ಬಾ.ಮ. ಬಸವರಾಜಯ್ಯ ಇತರರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com