ನೀರಿನ ಸಮಸ್ಯೆಗೆ ನಾವೇ ಕಾರಣ

Updated on: 

ಕ.ಪ್ರ.ವಾರ್ತೆ, ದಾವಣಗೆರೆ, ಜು.24
ದಾವಣಗೆರೆಯಲ್ಲಿ ನೀರಿನ ಸಮಸ್ಯೆಗೆ ಕೃತಕವಾಗಿ ನಾವೇ ಕಾರಣರಾಗಿದ್ದು, ಜೂನ್ ತಿಂಗಳಿನಲ್ಲಿ ಮಳೆಯಾಗುವ ನಿರೀಕ್ಷೆಯೊಂದಿಗೆ ಕೆರೆ ಕಾಮಗಾರಿ ಕೈಗೊಂಡಿದ್ದೆವಾದರೂ ನಿರೀಕ್ಷೆಯಂತೆ ಮಳೆಯಾಗಲಿಲ್ಲ ಎಂದು ಜಿಲ್ಲಾಧಿಕಾರಿ ಎಸ್.ಟಿ. ಅಂಜನಕುಮಾರ ತಿಳಿಸಿದರು.
ನಗರದ ಎಸ್ಪಿ ಕಚೇರಿಯಲ್ಲಿ ಗುರುವಾರ ರಂಜಾನ್ ಹಾಗೂ ನಾಗರ ಪಂಚಮಿ ಅಂಗವಾಗಿ ಹಮ್ಮಿಕೊಂಡಿದ್ದ ನಾಗರಿಕ ಸೌಹಾರ್ದ ಸಭೆಯಲ್ಲಿ ಮಾತನಾಡಿ, ಜೂನ್‌ನಲ್ಲಿ ಮಳೆ ಆಗುತ್ತದೆಂಬ ವಿಶ್ವಾಸದೊಂದಿಗೆ ಕೆರೆ ಕಾಮಗಾರಿ ಕೈಗೊಂಡಿದ್ದು, ಮಳೆ ಕೈಕೊಟ್ಟಿದ್ದರಿಂದಾಗಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ ಎಂದರು.ನಗರಕ್ಕೆ 28 ಟ್ಯಾಂಕರ್ ಮೂಲಕ ನೀರು ನೀಡಲಾಗುತ್ತಿದೆ. ಹೆಚ್ಚುವರಿಯಾಗಿ ಇನ್ನೂ 12 ಟ್ಯಾಂಕರ್ ಬಾಡಿಗೆ ಪಡೆದು, ನೀರು ಪೂರೈಸಲಾಗುವುದು. ಬಾಡಿಗೆ ಹಣದ ಸಮಸ್ಯೆ ಪರಿಹರಿಸಲಾಗುವುದು. ರಂಜಾನ್, ನಾಗರ ಪಂಚಮಿ ಹಬ್ಬಗಳ ಹಿನ್ನೆಲೆ ಶುಕ್ರವಾರದಿಂದ ಒಟ್ಟು 40 ಟ್ಯಾಂಕರ್ ಮೂಲಕ ನೀರೊದಗಿಸಲಿದ್ದು, ನೀರಿನ ವಿಚಾರದಲ್ಲಿ ಆತಂಕ ಬೇಡ. ಜು. 26ರಂದು ಭದ್ರಾ ಕಾಡಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು, ನೀರಿನ ಸಮಸ್ಯೆ ಬಗ್ಗೆ ಸಮಿತಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಪ್ರಕಾಶ ಮಾತನಾಡಿ, ರಂಜಾನ್ ಹಬ್ಬದ ವೇಳೆ ಶಾಂತಿಭಂಗಕ್ಕೆ ಯಾರೇ ಪ್ರಯತ್ನಿಸಿದರೂ ಪೊಲೀಸ್ ಇಲಾಖೆ ಸಹಿಸದು. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ, ವೀಡಿಯೋ ಅಳವಡಿಸಲಾಗುವುದು ಎಂದರು.
ಮುಖಂಡ ವೈ. ಮಲ್ಲೇಶ ಮಾತನಾಡಿ, ಕೆಲ ಹಬ್ಬಗಳಲ್ಲಿ ಡಿಜೆ ಸೌಂಡ್ ಸಿಸ್ಟ್‌ಂ ಬಳಸುವ ಬಗ್ಗೆ ಪೊಲೀಸ್ ಇಲಾಖೆ ತಾರತಮ್ಯ ನೀತಿ ಅನುಸರಿಸುವುದನ್ನು ಕೈ ಬಿಡಬೇಕು. ಸಾಮಾನ್ಯ ನೀತಿಯನ್ನೆ ಎಲ್ಲರಿಗೂ ಜಾರಿಗೊಳಿಸಲಿ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಮನಹರಿಸಬೇಕು ಎಂದು ಮನವಿ ಮಾಡಿದರು. ಹಿರಿಯ ಮುಖಂಡ ಎಚ್.ಕೆ. ರಾಮಚಂದ್ರಪ್ಪ, ಕೆ.ಬಿ. ಶಂಕರ ನಾರಾಯಣ, ಪಾಲಿಕೆ ಸದಸ್ಯರಾದ ಆವರಗೆರೆ ಎಚ್.ಜಿ. ಉಮೇಶ, ಚಮನ್‌ಸಾಬ್, ತಂಜಿಂ ಸಮಿತಿ ಮುಖಂಡ ಅಮಾನುಲ್ಲಾ ಖಾನ್, ವಕೀಲ ಅನೀಸ್ ಪಾಷಾ, ಎನ್. ನೀಲಗಿರಿಯಪ್ಪ, ಎಲ್.ಡಿ. ಗೋಣೆಪ್ಪ, ಹುಚ್ಚವ್ವನಹಳ್ಳಿ ಅಜ್ಜಯ್ಯ, ಟಿ. ಅಸ್ಗರ್, ವಿನೋಬನಗರ ರವಿ, ರುದ್ರಪ್ಪ, ಮಟ್ಟಿಕಲ್ಲು ಪ್ರದೀಪ ಸೇರಿದಂತೆ ಅನೇಕ ಮುಖಂಡರು, ಪೊಲೀಸ್ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.


ನಗರಕ್ಕೆ 28 ಟ್ಯಾಂಕರ್ ಮೂಲಕ ನೀರು ನೀಡಲಾಗುತ್ತಿದೆ. ಹೆಚ್ಚುವರಿಯಾಗಿ ಇನ್ನೂ 12 ಟ್ಯಾಂಕರ್ ಬಾಡಿಗೆ ಪಡೆದು, ನೀರು ಪೂರೈಸಲಾಗುವುದು. ಬಾಡಿಗೆ ಹಣದ ಸಮಸ್ಯೆ ಪರಿಹರಿಸಲಾಗುವುದು. ರಂಜಾನ್, ನಾಗರ ಪಂಚಮಿ ಹಬ್ಬಗಳ ಹಿನ್ನೆಲೆ ಶುಕ್ರವಾರದಿಂದ ಒಟ್ಟು 40 ಟ್ಯಾಂಕರ್ ಮೂಲಕ ನೀರೊದಗಿಸಲಿದ್ದು, ನೀರಿನ ವಿಚಾರದಲ್ಲಿ ಆತಂಕ ಬೇಡ.
 ಎಸ್.ಟಿ. ಅಂಜನಕುಮಾರ
ಜಿಲ್ಲಾಧಿಕಾರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com