ಬಾಳು ಅರಿತರೆ ಬಂಗಾರ, ಮರೆತರೆ ಅದೇ ಬಂಧನ

Updated on: 

ದಾವಣಗೆರೆ:   ವೀರಶೈವ ಧರ್ಮಗ್ರಂಥದಲ್ಲಿ ಉದಾತ್ತ ಮಾನವೀಯ ಮೌಲ್ಯಗಳನ್ನು ಜಗದ್ಗುರು ರೇಣುಕಾಚಾರ್ಯರು ಸರ್ವ ಸಮುದಾಯಕ್ಕೆ ಅನ್ವಯಿಸುವಂತಹ ಸಂದೇಶ ನೀಡಿದ್ದನ್ನು ಯಾರೂ ಮರೆಯಬಾರದು ಎಂದು ರಂಭಾಪುರಿ ಪೀಠದ ಪ್ರಸನ್ನರೇಣುಕ ವೀರಸೋಮೇಶ್ವರ ರಾಜದೇಶೀ ಕೇಂದ್ರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.
ನಗರದ ರೇಣುಕಾ ಮಂದಿರದಲ್ಲಿ ಗುರುವಾರ ರಂಭಾಪುರಿ ಜಗದ್ಗುರುಗಳ 19ನೇ ವರ್ಷದ ಆಷಾಢ ಮಾಸದ ಇಷ್ಟಲಿಂಗ ಪೂಜಾನುಷ್ಠಾನ, ಜನಜಾಗೃತಿ ಧರ್ಮೋತ್ತೇಜಕ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನದಿ, ಸಮುದ್ರದ ಮೇಲೆ ಸೇತುವೆ, ಬೆಟ್ಟ-ಗುಡ್ಡಗಳಲ್ಲಿ ಸುರಂಗ ಮಾರ್ಗ ನಿರ್ಮಿಸಬಹುದು. ಆದರೆ, ಮನದಲ್ಲಿ ಕಟ್ಟಿಕೊಂಡ ತಡೆಗೋಡೆ ದಾಟುವುದು ಮನುಷ್ಯನಿಗೆ ಬಲುಕಷ್ಟ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದರು.
ಬದುಕು ಭಗವಂತನು ಕೊಟ್ಟ ಅಮೂಲ್ಯ ಕೊಡುಗೆ. ಅರಿತು ಬಾಳಿದರೆ ಬಾಳು ಬಂಗಾರ, ಮರೆತು ಮಲಗಿದರೆ ಬದುಕೇ ಬಂಧನ. ಮನುಷ್ಯ ಸಂಪತ್ತನ್ನು ಗಳಿಸುವುದನ್ನು ಕಲಿತ. ಆದರೆ, ಯಾವ ರೀತಿಯಿಂದ ಬದುಕಬೇಕೆಂಬುದನ್ನೇ ಇಂದಿಗೂ ಕಲಿತಿಲ್ಲ. ಇನ್ನಾದರೂ ಮನುಷ್ಯ ಮನುಷ್ಯನಾಗಿ ಬಾಳುವುದನ್ನು ಕಲಿಯುವ ಮೂಲಕ ಎಲ್ಲರೊಂದಿಗೆ ಸಾಮರಸ್ಯದ ಬಾಳನ್ನು ಬಾಳಬೇಕು ಎಂದು ಅವರು ತಿಳಿಸಿದರು.
ನೀರಿನಲ್ಲಿ ಹಡಗು ಇದ್ದರೆ ಭಯವಿಲ್ಲ. ಆದರೆ, ಹಡಗಿನೊಳಗೆ ನೀರು ಬಂದರೆ ಅಪಾಯ. ಧರ್ಮ ದಾರಿಯಲ್ಲಿ ನಾವು ನಡೆದರೆ ಯಾವುದೇ ಭಯವೂ ಇಲ್ಲ. ಆದರ್ಶ ದಾರಿ ತೋರಲೆಂದೇ ಧರ್ಮ ಪೀಠಗಳು ಮತ್ತು ಆಧ್ಯಾತ್ಮದ ಕೇಂದ್ರಗಳಿವೆ. ಭೌತಿಕ ಬದುಕಿನಲ್ಲಿ ಶಾಂತಿ, ನೆಮ್ಮದಿ ಕಾಣಲು ಆಧ್ಯಾತ್ಮದ ಅನುಸಂಧಾನ ಅಗತ್ಯ ಎಂದರು.
ಕಣ್ವಕುಪ್ಪಿ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನೆಮ್ಮದಿ, ಸುಖದ ಬದುಕಿಗೆ ಗುರುಬೋಧ ಅವಶ್ಯಕ. ಪ್ರತಿಯೊಬ್ಬರೂ ಧರ್ಮದ ಹಾದಿಯಲ್ಲಿ ಸಾಗುವ ಮೂಲಕ ನೆಮ್ಮದಿಯ, ಸುಖದ ಬದುಕನ್ನು ತಮ್ಮದಾಗಿಸಿಕೊಳ್ಳಬೇಕು ಎಂದರು.
ಮಳಲಿಮಠದ ನಾಗಭೂಷಣ ಶಿವಾಚಾರ್ಯಶ್ರೀ, ಕೊಟ್ಟೂರಿನ ಯೋಗಿ ರಾಜೇಂದ್ರ ಶಿವಾಚಾರ್ಯಶ್ರೀ ಉಪದೇಶಾಮೃತ ನೀಡಿದರು. ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯಶ್ರೀ, ವಿಧಾನ ಪರಿಷತ್ ಪಕ್ಷದ ಮಾಜಿ ಮುಖ್ಯ ಸಚೇತಕ, ಬಿಜೆಪಿ ನಾಯಕ ಡಾ. ಎ.ಎಚ್. ಶಿವಯೋಗಿಸ್ವಾವು, ಎಪಿಎಂಸಿ ನಿರ್ದೇಶಕ ಎನ್.ಜಿ. ಪುಟ್ಟಸ್ವಾಮಿ, ಶ್ರೀ ಮದ್ವೀರಶೈವ ಸದ್ಬೋಧನಾ ಸಮಿತಿ ಅಧ್ಯಕ್ಷ ದೇವರಮನಿ ಶಿವಕುಮಾರ, ಎಸ್‌ಜೆವಿಪಿ ಕಾಲೇಜಿನ ಉಪಾಧ್ಯಕ್ಷ ಡಿ.ಎಂ. ಹಾಲಸ್ವಾಮಿ ಇತರರು ಇದ್ದರು.
ಡಾ. ಟಿ.ಜಿ. ನಿರಂಜನ ಪರವಾಗಿ ಶೀಲಾ ಡಾ. ನಿರಂಜನ ವೈದ್ಯ ಶಿರೋಮಣಿ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com