ಹೊನ್ನಾಳಿ: ತಾಲೂಕಿನ ಕಮ್ಮಾರಗಟ್ಟೆ ಗ್ರಾಪಂ ನೂತನ ಅಧ್ಯಕ್ಷರಾಗಿ ಶಿವಕುಮಾರ ನಾಯ್ಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿಕಟಪೂರ್ವ ಅಧ್ಯಕ್ಷ ವಿಠಲನಾಯ್ಕ ಅವರ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದು ಶಿವಕುಮಾರ ನಾಯ್ಕ ಆಯ್ಕೆಗೊಂಡಿದ್ದು, ಈ ಗ್ರಾಪಂನಲ್ಲಿ ಒಟ್ಟು 9 ಜನ ಸದಸ್ಯ ಬಲವಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಚುನಾವಣಾ ಪ್ರಕ್ರಿಯೆ ಮುಗಿದು ನೂತನ ಅಧ್ಯಕ್ಷರ ಘೋಷಣೆಯಾದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ನೂತನ ಅಧ್ಯಕ್ಷರನ್ನು ಅಭಿನಂದಿಸಿ ಸಹಸದಸ್ಯರ ಬೆಂಬಲ ಪಡೆದು ಉತ್ತಮ ಕೆಲಸ ನಿರ್ವಹಿಸಲು ಹೇಳಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಜಯಶೀಲಾ ಸುರೇಶ್ ,ರುದ್ರಾನಾಯ್ಕ, ನಾಗೀಬಾಯಿ, ಶಬೀನಾಬಾನು,ಫಾಲಾಕ್ಷಪ್ಪ, ನಾಗರತ್ನ, ಮಾಜಿ ಅಧ್ಯಕ್ಷ ಮಾರುತಿನಾಯ್ಕ, ತಾಪಂ ಮಾಜಿ ಅಧ್ಯಕ್ಷೆ ಪ್ರೇಮಾಬಾಯಿ ಜುಂಜಾನಾಯ್ಕ, ಹೊನ್ನಾಳಿ ಪಪಂ ಉಪಾಧ್ಯಕ್ಷ ಮಂಜು ಸರಳಿನ ಮನೆ, ಸದಸ್ಯ ಹೊಸಕೇರಿ ಸುರೇಶ್ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.