ಹರಪನಹಳ್ಳಿ: ತಾಲೂಕಿನಾದ್ಯಂತ ನಾಗರ ಹುತ್ತ, ಮೂರ್ತಿಗಳಿಗೆ ಹಾಲು ಹಾಕುವುದರ ಮೂಲಕ ನಾಗರ ಪಂಚಮಿ ಹಬ್ಬವನ್ನು ಅತ್ಯಂತ ಸಡಗರ, ಸಂಭ್ರಮ, ಶ್ರದ್ಧೆ- ಭಕ್ತಿಯಿಂದ ಗುರುವಾರ ಆಚರಿಸಲಾಯಿತು.
ಪುರುಷರು, ಮಹಿಳೆಯರು ಮಕ್ಕಳು ಮನೆಯಲ್ಲಿ ಪೂಜೆ ಸಲ್ಲಿಸಿ ತಮಗೆ ಸಮೀಪ ಇರುವ ನಾಗರ ಹುತ್ತಗಳಿಗೆ, ನಾಗದೇವರ ದೇವಸ್ಥಾನಗಳಿಗೆ ವಿವಿಧ ಭಕ್ಷ್ಯ, ಪೂಜಾ ಸಾಮಗ್ರಿಗಳೊಂದಿಗೆ ತೆರಳಿ ನಾಗದೇವರಿಗೆ ಹಾಲನ್ನು ಹಾಕಿದರು.
ಜಿಟಿ ಜಿಟಿ ಮಳೆಯ ನಡುವೆ ಮರದ ಜೋಕಾಲಿಯಲ್ಲಿ ಆಟವಾಡಿದರೆ ಮಕ್ಕಳು ಮನೆಯಲ್ಲಿಯೇ ಕಟ್ಟಿದ ಜೋಕಾಲಿಗಳಲ್ಲಿ ವಿವಿಧ ಬಗೆಯ ಉಂಡಿಗಳನ್ನು ಕೈಯಲ್ಲಿ ಹಿಡಿದು ಜೋಕಾಲಿಯಲ್ಲಿ ಜೀಕಿದರು. ಉತ್ತಮ ಮಳೆ ಬೀಳುತ್ತಿರುವುದರಿಂದ ರೈತರು ಸಹ ಖುಷಿಯಿಂದ ನಾಗರ ಪಂಚಮಿ ಹಬ್ಬ ಆಚರಿಸಿದರು.
ಕೆಲವರು ಗುರುವಾರ ಚೌತಿಗೆ ಹಾಲೆರೆದರೆ, ಇನ್ನೂ ಕೆಲವರು ಶುಕ್ರವಾರ ಪಂಚಮಿಗೆ ಹಾಲು ಹಾಕುತ್ತಾರೆ.