ಆರೋಗ್ಯ ಇಲಾಖೆ ಹುದ್ದೆ ಕಡಿತ ಬೇಡ

Updated on: 

ಕ.ಪ್ರ.  ವಾರ್ತೆ, ದಾವಣಗೆರೆ, ಜು.31
ರಾಜ್ಯಾದ್ಯಂತ ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯರೂ ಸೇರಿದಂತೆ ಶೇ. 30ರಷ್ಟು ಹುದ್ದೆ ಕಡಿತ ಮಾಡಲು ಹೊರಡಿಸಿರುವ ಸುತ್ತೋಲೆಯನ್ನು ಆ. 15ರ ಒಳಗಾಗಿ ವಾಪಸ್ ಪಡೆಯುವಂತೆ ಕರ್ನಾ ಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಘಟಕವು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಜಿ.ಡಿ. ರಾಘವನ್, ಐಪಿಎಚ್‌ಎಸ್ ಪ್ರಕಾರ ಇರಬೇಕಾದ ಹುದ್ದೆಗಳ ಅರ್ಧದಷ್ಟು ಇಲ್ಲದಿದ್ದರೂ, ಹಾಲಿ ಇರುವ ಹುದ್ದೆಗಳಲ್ಲೇ ಶೇ. 30ರಷ್ಟು ಕಡಿತ ಮಾಡಲು ಹೊರಟಿರುವ ಸರ್ಕಾರದ ಕ್ರಮ ಮಾರಕವಾಗಿ ಪರಿಣಮಿಸಲಿದೆ ಎಂದರು.
ಕಷ್ಟ ಸಾಧ್ಯ: ನೂರು ಹಾಸಿಗೆ ಮೇಲಿನ ಆಸ್ಪತ್ರೆಗಳಲ್ಲಿ ಹುದ್ದೆ ಕಡಿತಕ್ಕೆ ಸುತ್ತೋಲೆಯಲ್ಲಿ ಪ್ರಸ್ತಾಪಿಸಿದೆ. ತಜ್ಞ ವೈದ್ಯರೂ ಸೇರಿದಂತೆ ಶೇ. 60 ಹುದ್ದೆ ಕೊರತೆ ಇದ್ದು, ಒಬ್ಬ ತಜ್ಞರ ಸೇವೆ ಕಡಿತ ಮಾಡಿದರೆ ಮತ್ತೊಬ್ಬರೆ ಕೆಲಸ ನಿರ್ವಹಿಸುವುದು ಕಷ್ಟಸಾಧ್ಯ. ಎಂಎಲ್‌ಸಿ, ಮರಣೋತ್ತರ ಪರೀಕ್ಷೆ, ತುರ್ತು ಚಿಕಿತ್ಸಾ ಘಟಕ, ಕೋರ್ಟ್ ಹೀಗೆ ಎಲ್ಲವನ್ನೂ ಒಬ್ಬರೇ ವೈದ್ಯ ನಿರ್ವಹಿಸುವುದು ಅಸಾಧ್ಯದ ಮಾತು. 150 ಸಿಬ್ಬಂದಿ ಇದ್ದಲ್ಲಿ ಅದನ್ನು 100ಕ್ಕೆ ಇಳಿಸುವ ಚಿಂತನೆ ಸರ್ಕಾರ ಮಾಡಿದೆ ಎಂದು ದೂರಿದರು.
ಗುಣಮಟ್ಟದ ಸೇವೆ ಅಸಾಧ್ಯ: ಸಮಸ್ಯೆ ಬಗೆಹರಿಸಬೇಕಾದ ಸರ್ಕಾರ ಮತ್ತಷ್ಟು ಸಮಸ್ಯೆ ಹೆಚ್ಚಳಕ್ಕೆ ಮುಂದಾಗಿದೆ. ವೈದ್ಯರೂ ಮನುಷ್ಯರೆಂಬುದನ್ನು ಸರ್ಕಾರ ಅರಿಯಲಿ. ಇಲಾಖೆಯಲ್ಲಿ ಶೇ. 60ರಷ್ಟು ವೈದ್ಯರ ಹುದ್ದೆ ಖಾಲಿ ಇವೆ. ಅದನ್ನು ಭರ್ತಿ ಮಾಡಿಕೊಳ್ಳಲು ಸಿದ್ಧವಿಲ್ಲದ ಸರ್ಕಾರ ಇರುವ ಹುದ್ದೆ ಕಡಿತಗೊಳಿಸಲು ಮುಂದಾಗುತ್ತಿದೆ. ಒತ್ತಡದಿಂದಾಗಿ ಎಲ್ಲರಿಗೂ ಗುಣಮಟ್ಟದ ಸೇವೆ ನೀಡಲಾಗದೆ, ವೈದ್ಯರು ಪದೇಪದೇ ಹಲ್ಲೆಗೊಳಗಾಗುತ್ತಿದ್ದು, ಹುದ್ದೆ ಕಡಿತವಾದಲ್ಲಿ ಇಂತಹ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಂಘದ ಕಾರ್ಯದರ್ಶಿ ಡಾ. ಎಸ್. ಮಹೇಶ, ಖಜಾಂಚಿ ಡಾ. ಪಿ.ಕೆ. ವೆಂಕಟೇಶ, ತಾಲೂಕು ವೈದ್ಯಾಧಿಕಾರಿ ಡಾ. ಹರೀಶ್ವರ್, ಡಾ. ಪ್ರಭುಗೌಡ ಪಾಟೀಲ್, ಡಾ. ಸಂತೋಷ, ಡಾ. ಸುಧೀಂದ್ರ, ಡಾ. ಹೇಮಂತಕುಮಾರ, ಡಾ. ಷಣ್ಮುಖಪ್ಪ ಇತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com