ಹುಬ್ಬಳ್ಳಿ: ಬಳ್ಳಾರಿ ಸಮೀಪದ ಮೋಕಾ ಗ್ರಾಮದ ಹತ್ತಿರ ಅವನತಿಯ ಅಂಚಿನಲ್ಲಿರುವ ಅತಿ ವಿರಳವಾದ ಕರ್ಲೀವ್ (ಹೆಗ್ಗೊರವ) ಪಕ್ಷಿಗಳ ಹಿಂಡೊಂದು ಕಾಣಿಸಿಕೊಂಡಿದೆ.
ಇಂತಹ ಅಪರೂಪದ ಪಕ್ಷಿ ಸಂತತಿಯನ್ನು ಡಯಟ್ ಉಪನ್ಯಾಸಕ ಎಚ್.ಆರ್. ಪರಮೇಶಲು, ಪರಿಸರ ತಜ್ಞ ಕೆ.ಎನ್. ನೆಗಳೂರಮಠ ಮತ್ತು ಹವ್ಯಾಸಿ ಛಾಯಾಗ್ರಾಹ ಸಿದ್ಧಲಿಂಗಸ್ವಾಮಿ ಗುರುತಿಸಿ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ಉತ್ತರ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಸಿಲೋನ್ (ಶ್ರೀಲಂಕಾ), ಬರ್ಮಾ ದೇಶಗಳಲ್ಲಿ ಕಾಣಸಿಗುವ ಈ ಕರ್ಲೀವ್ ಪಕ್ಷಿಗಳು ಚಳಿಗಾಲದ ಸಂದರ್ಭದಲ್ಲಿ ದಕ್ಷಿಣ ಭಾರತಕ್ಕೆ ವಲಸೆ ಬರುತ್ತವೆ. ಏಪ್ರಿಲ್‌ನಿಂದ ಜೂನ್ ವರೆಗೆ ಪೂರ್ವ ಯುರೋಪ್ ಮತ್ತು ಸೈಬೀರಿಯಾಗಳಲ್ಲಿ ಸಂತಾನೋತ್ಪತ್ತಿ ಮಾಡಿ ಮತ್ತೆ ತಮ್ಮ ಸ್ಥಳಗಳಿಗೆ ಮರಳುತ್ತವೆ. ಆದರೆ ಇತ್ತೀಚಿನ ಪರಿಸರ ನಾಶದಿಂದ ಈ ಪಕ್ಷಿ ಸಂತತಿ ಉತ್ತರ ಭಾರತದಿಂದಲೂ ಕಣ್ಮರೆಯಾಗುತ್ತಿರುವುದು ಪಕ್ಷಿ ಪ್ರಿಯರಲ್ಲಿ ಆತಂಕ ಉಂಟು ಮಾಡಿದೆ.
ವಿಶೇಷ ಪಕ್ಷಿ: ಗೊರವ ಪಕ್ಷಿಗಳಲ್ಲಿ ಇದು ಅತಿ ದೊಡ್ಡದಾದ ಪಕ್ಷಿ. ಕೋಳಿಂುಷ್ಟೇ ದೊಡ್ಡದಿರುತ್ತದೆ. ಹಾರುವಾಗ ಹೊಟ್ಟೆಂು ಬಿಳಿ ಮತ್ತು ಬಾಲದ ಬಿಳಿ ಬಣ್ಣ ಬಹಳ ಸ್ಪಷ್ಟವಾಗಿ ಕಾಣುತ್ತದೆ. ಇದರ ಕೊಕ್ಕು ಸುಮಾರು ಅರ್ಧ ಅಡಿಂುಷ್ಟು ಉದ್ದವಿದ್ದು, ಕೆಳಗೆ ಬಾಗಿರುತ್ತದೆ. ಹೊಳೆ ತೀರದಲ್ಲಿ, ಕೆರೆಗಳ ಬಳಿ, ಸಮುದ್ರದ ದಂಡೆಯಲ್ಲಿ ಚಿಕ್ಕ ಚಿಕ್ಕ ಗುಂಪುಗಳಲ್ಲಿ ಈ ಪಕ್ಷಿಗಳು ಆಹಾರ ಹುಡುಕುತ್ತಿರುತ್ತವೆ. ಏಡಿ, ಸಿಗಡಿ ಮೊದಲಾದ ಜಲಚರ ಮತ್ತು ಜಲ ಸಸ್ಯಗಳನ್ನು ತಿಂದು ಬದುಕುತ್ತವೆ. ಕೆಲ ವರ್ಷಗಳ ಹಿಂದೆ ನೂರಾರು ಸಂಖ್ಯೆಯಲ್ಲಿ ಬಳ್ಳಾರಿ ಸಮೀಪ ವಲಸೆ ಬರುತ್ತಿದ್ದ ಈ ಹಕ್ಕಿಗಳ ಸಂಖ್ಯೆ 15-20ಕ್ಕೆ ಸೀಮಿತವಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಕಾಣಸಿಗುವ ಅನೇಕ ಅಪರೂಪದ ಪಕ್ಷಿಗಳಾದ ಸೂಜಿ ಬಾಲದ ಬಾತು (ಪಿನ್ ಟೈಲ್ಡ್ ಡಕ್), ಪಟ್ಟೆ ಬಾತು (ಕಾಮನ್ ಟೀಲ್), ಪಟ್ಟೆ ತಲೆ ಬಾತು (ಬಾರ್ ಹೆಡೆಡ್ ಗೂಸ್), ಬ್ರಾಹ್ಮಿಣಿ ಬಾತು ಮತ್ತು ಇತರ ಪಕ್ಷಿಗಳು ಜಲ ಮೂಲ ಪ್ರದೇಶದಲ್ಲಿ ಸಸ್ಯ ಸಂಪತ್ತಿನ ನಾಶ ಹಾಗೂ ಆವಾಸಗಳ ನಾಶದಿಂದಾಗಿ ವಲಸೆ ಬರುತ್ತಿಲ್ಲ ಎಂದು ಎಚ್.ಆರ್. ಪರಮೇಶಲು ತಿಳಿಸುತ್ತಾರೆ. ಆದರೆ ಆಹಾರ ಹುಡುಕಿ ಬಿಸಿಲನಾಡು ಬಳ್ಳಾರಿಗೆ ಈ ಪಕ್ಷಿ ಸಂಕುಲದ ಗುಂಪು ವಲಸೆ ಬಂದಿದ್ದು ಮಾತ್ರ ಸೋಜಿಗ. ಕೆರೆಯ ಪಕ್ಕ, ಹೊಲ, ಗದ್ದೆಗಳಲ್ಲಿ ಆಹಾರ ತಿನ್ನುವುದು, ಜಲಚರ, ಚಿಟ್ಟೆಗಳನ್ನು, ಜಲಸಸ್ಯಗಳನ್ನು ಹಿಡಿಯುವುದನ್ನು ನೋಡುವುದೇ ಒಂದು ಸಂತಸದ ವಿಷಯ. ಇದನ್ನು ದಾರಿಯಲ್ಲಿ ಹೋಗುತ್ತಲೇ ನೋಡುವ ಜನತೆ ಮಾತ್ರ ತಮ್ಮ ನಾಡಿಗೆ ಅನ್ಯ ದೇಶ, ರಾಜ್ಯದ ಪಕ್ಷಿಗಳು ಬಂದು ಇಲ್ಲಿ ವಾಸಿಸಿ ಆಹಾರ ಹುಡುಕುವುದು ಸಂತೋಷ ತರಿಸಿದೆ. ಅಲ್ಲದೇ ತಮ್ಮ ಭಾಗದಲ್ಲಿ ನೋಡಲು ಆಗದೇ ಇರುವ ಪಕ್ಷಿ ಸಂಕುಲ ಹೆಚ್ಚಾಗಿ ಬಿಸಿಲು ಇರುವ ಬಳ್ಳಾರಿಯಲ್ಲಿ ಕಾಣುತ್ತಿರುವುದು ಜನತೆಗೆ ಆಶ್ಚರ್ಯ ಮೂಡಿಸಿದೆ. ಈ ನಡುವೆ ವಿಶೇಷ ಅತಿಥಿಯನ್ನು ಬಳ್ಳಾರಿಗರು ಕಂಡು ಅವುಗಳಿಗೆ ಸ್ವಾಗತಿಸಿ, ವೀಕ್ಷಿಸುತ್ತಲೇ ಅತಿಥಿ ಸತ್ಕಾರ ಮಾಡುವಲ್ಲಿ ನಿರತರಾಗಿದ್ದಾರೆ ಎನಿಸುತ್ತದೆ.
-ಬಸವರಾಜ ಕರ್ಕಿಹಳ್ಳಿ
Advertisement