ಧಾರವಾಡ: ಜನವರಿ 29ರಂದು ಕಲಘಟಗಿ ಪಟ್ಟಣದ ಪದ್ಮಾಂಬಾ ಕೋಲ್ಡ್ರಿಂಕ್ಸ್ ಹತ್ತಿರ ಕೊಲೆಯಾದ ಮಂಜುನಾಥ ಸಂಗಪ್ಪ ರೊಟ್ಟಿಗವಾಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಐದು ದಿವಸಗಳಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಸ್.ವೈ. ರವಿಕುಮಾರ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಹಳೇ ವೈಷಮ್ಯದಿಂದ ಕಲಘಟಗಿಯ ನಿವಾಸಿಗಳಾದ ಮಜರುಲ್ಲಾಖಾನ್ ಜಹಾಗೀರದಾರ ಹಾಗೂ ಗಿರೀಶ ಸೂರ್ಯವಂಶಿ ಎಂಬುವರು ಮಂಜುನಾಥನನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾರೆಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಕೊಲೆಯಾದ ತಕ್ಷಣ ಮೂವರು ಪೊಲೀಸ್ ಅಧಿಕಾರಿಗಳ ತಂಡಗಳನ್ನು ರಚಿಸಿ, ಈ ಕೊಲೆ ಪ್ರಕರಣ ಭೇದಿಸಲಾಗಿದೆ. ಭಾನುವಾರ ಈ ಇಬ್ಬರು ಆರೋಪಿಗಳನ್ನು ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಬಂಧಿಸಲಾಗಿದೆ ಎಂದರು.
ಕೊಲೆಯಾದ ವ್ಯಕ್ತಿ ಹಾಗೂ ಆರೋಪಿಗಳ ಮಧ್ಯೆ ಕಳೆದ ಡಿಸೆಂಬರ್ 10ರಂದು ಜಗಳ ಉಂಟಾಗಿ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಈ ಜಗಳ ಕೊಲೆಯಲ್ಲಿ ಅಂತ್ಯವಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಕೊಲೆಯಾದ ಮಂಜುನಾಥ ಈ ಹಿಂದೆ ಅನೇಕ ಜನರ ಮೇಲೆ ಅಟ್ರಾಸಿಟಿ ಕೇಸ್ ಮಾಡಿದ್ದು, ಕೊಲೆ ಮಾಡಿದ ಆರೋಪಿಗಳ ಮೇಲೆಯೂ ಕಲಘಟಗಿಯ ದುರ್ಗಪ್ಪ ಎಂಬುವರ ಮೂಲಕ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದ. ಅಲ್ಲದೇ, ಈ ಕೇಸ್ನಿಂದ ಖುಲಾಸೆಗೊಳಿಸಲು ಕೊಲೆ ಆರೋಪಿಗಳಿಂದ ರು. 25 ಸಾವಿರ ಬೇಡಿಕೆ ಇಟ್ಟಿದ್ದ. ಕೊಲೆಯಾದ ದಿನ ಅಂದರೆ ಜ. 29ರಂದು ಮಾತುಕತೆಗಾಗಿ ಬಂದ ಆರೋಪಿಗಳು ಮತ್ತು ಮಂಜುನಾಥನೊಂದಿಗೆ ವಾದ ವಿವಾದ ನಡೆಸಿ ಮಂಜುನಾಥನನ್ನು ಮಚ್ಚಿನಿಂದ ಕುತ್ತಿಗೆ ಕೊಯ್ದು ನಂತರ ತಲೆಗೆ ಹೊಡೆದಿದ್ದರಿಂದ ಆತ ಸ್ಥಳದಲ್ಲಿಯೇ ಮೃತನಾಗಿದ್ದ ಎಂದು ರವಿಕುಮಾರ ತಿಳಿಸಿದರು. ಕೊಲೆಯಾದ ನಂತರ ಆರೋಪಿಗಳು ಅಲ್ಲಿಯೇ ಇದ್ದ ದ್ವಿಚಕ್ರ ವಾಹನ ಸವಾರನನ್ನು ಬೆದರಿಸಿ ಬೈಕ್ ಕಿತ್ತುಕೊಂಡು ಪರಾರಿಯಾಗಿದ್ದರು. ಕೊಲೆಯಾದ ವ್ಯಕ್ತಿಗೆ ರಾಜಕೀಯ ನಂಟುಗಳಿದ್ದವು. ಅಲ್ಲದೇ ಸಣ್ಣ ಪುಟ್ಟ ರೌಡಿಸಂ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನುವ ಮಾಹಿತಿ ಇತ್ತು. ಆದರೆ ಈ ಕುರಿತು ಯಾವುದೇ ಪ್ರಕರಣಗಳು ದಾಖಲಾಗಿರಲಿಲ್ಲ ಎಂದು ಹೇಳಿದರು.
ಪಾಲಕರಲ್ಲಿ ಜಾಗೃತಿ: ಇತ್ತೀಚಿಗೆ ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಪ್ರಕರಣಗಳ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಾಮಾನ್ಯವಾಗಿ ಹೆಚ್ಚಿನ ಅತ್ಯಾಚಾರ ಪ್ರಕರಣಗಳು ಪರಿಚಿತರು, ಸಂಬಂಧಿಕರಿಂದಲೇ ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಪಾಲಕರು ತಮ್ಮ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ, ಆ ರೀತಿ ವರ್ತಿಸುವ ವ್ಯಕ್ತಿಗಳ ಕುರಿತು ಮಾಹಿತಿ ಪಡೆಯಬೇಕು. ಒಬ್ಬೊಬ್ಬರನ್ನೇ ಮನೆಯಲ್ಲಿ ಬಿಟ್ಟು ಹೋಗಬೇಕಾದ ಸಂದರ್ಭದಲ್ಲಿ ಜಾಗೃತಿ ವಹಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಡಿಎಸ್ಪಿ ರಾಜು ಬನಹಟ್ಟಿ ಇದ್ದರು.