ಧಾರವಾಡ: ಕ್ಯಾನ್ಸರ್ನಿಂದ ಬಳಲುತ್ತಿರುವ ಇಲ್ಲಿನ ಕಲ್ಯಾಣನಗರದ ನಿವಾಸಿ ಸುಜಾತಾ ಬಾಬುರಾವ್ ಜಾಧವ್ ಅವರ ಸಂಕಷ್ಟ ಜೀವನ ತಿಳಿದು ನಾಡಿನ ವಿವಿಧೆಡೆಯಿಂದ ಸಹೃದಯ ಓದುಗ ಬಳಗ ಹಲವು ರೀತಿಯ ಸಹಾಯ ಒದಗಿಸುವುದಾಗಿ ಭರವಸೆ ನೀಡಿದೆ.
'ಸುಜಾತಾಗೆ ಕ್ಯಾನ್ಸರ್-ಕುಟುಂಬಕ್ಕೆ ಕಂಟಕ' ಎಂಬ ಶೀರ್ಷಿಕೆ ಅಡಿ ಸೋಮವಾರ(ಫೆ.3) 'ಕನ್ನಡಪ್ರಭ'ದಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಈ ವರದಿಗೆ ಸ್ಪಂದಿಸಿದ ನಾಡಿನ ಹಲವರು ಮಾನವೀಯ ನೆಲೆಯಲ್ಲಿ ಸಹಾಯ ಹಸ್ತ ಚಾಚಲು ಮುಂದಾಗಿದ್ದಾರೆ. ಮುಂಡರಗಿಯ ಸಿವಿಲ್ ಆಸ್ಪತ್ರೆಯ ವೈದ್ಯ ಡಾ. ಬಸವರಾಜ ಹಾಗೂ ಕಾರವಾರ ಜಿಲ್ಲೆಯ ಅಣಿಶಿಯ ವೈದ್ಯ ಡಾ. ಮೊಹಮ್ಮದ್ ಎಂಬುವವರು ದೂರವಾಣಿ ಮೂಲಕ ಸುಜಾತಾ ಅವರನ್ನು ಸಂಪರ್ಕಿಸಿ ಉಚಿತವಾಗಿ ಸಂಪೂರ್ಣ ಚಿಕಿತ್ಸೆ ನೀಡುವುದಾಗಿ ಹೇಳಿದ್ದಾರೆ.
ಅಲ್ಲದೇ, ಸೋಮವಾರ ಮಧ್ಯಾಹ್ನದ ಹೊತ್ತಿಗೆ ಸುಜಾತಾ ಅವರ ಬ್ಯಾಂಕ್ ಅಕೌಂಟ್ಗೆ 17 ಸಾವಿರ ಜಮಾ ಆಗಿದ್ದು, ಬೆಂಗಳೂರಿನ ಎನ್. ರಾಮಕೃಷ್ಣ, ಶ್ರೀನಿವಾಸ, ಚನ್ನಪಟ್ಟಣದ ಅಶೋಕ, ದಾವಣಗೆರೆಯ ನರೇಂದ್ರ ಎಂಬುವರು ದೂರವಾಣಿ ಮೂಲಕ ಆರ್ಥಿಕ ಸಹಾಯ ಮಾಡುವ, ಉಚಿತ ಚಿಕಿತ್ಸೆ ನೀಡುವ ಭರವಸೆ ನೀಡಿದ್ದಾರೆ. ನನ್ನ ಸಂಕಟಕ್ಕೆ ಸ್ಪಂದಿಸಿದ ಪತ್ರಿಕೆಗೆ ಕೃತಜ್ಞತೆಗಳು ಎಂದು ಸುಜಾತಾ ಭಾವಪರವಶವಾಗಿ ನುಡಿದರು.