ಧಾರವಾಡ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ 10 ದಿನಗಳಿಂದ ನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ಮಾಡುತ್ತಿದ್ದ ಗುತ್ತಿಗೆ ಆಧಾರಿತ ಪೌರಕಾರ್ಮಿಕರು ಭಾನುವಾರ ತಮ್ಮ ಧರಣಿ ಸತ್ಯಾಗ್ರಹವನ್ನು ದಿಢೀರ್ ಎಂದು ವಿವೇಕಾನಂದ ವೃತ್ತಕ್ಕೆ ಸ್ಥಳಾಂತರಿಸಿದ್ದರಿಂದ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ಯುದ್ಧ ನಡೆಯಿತು.
ವಿವೇಕಾನಂದ ಮೂರ್ತಿ ಅನಾವರಣ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನಿರಂತರ ನೀರು ಪೂರೈಕೆ ಯೋಜನೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆಗಮಿಸುತ್ತಿದ್ದಾರೆ ಎಂದು ತಿಳಿದ ಪ್ರತಿಭಟನಾಕಾರರು ಮುಖ್ಯಮಂತ್ರಿಗೆ ಮುತ್ತಿಗೆ ಹಾಕುವ ಯೋಜನೆ ರೂಪಿಸಿದ್ದರು.
ಮುಖ್ಯಮಂತ್ರಿ ಶೆಟ್ಟರ್ ಅವರ ಆಗಮನಕ್ಕೆ ಮುಂಚೆ ವೇದಿಕೆಯ ಒಂದು ಬದಿಗೆ ಕುಳಿತ ಪ್ರತಿಭಟನಾಕಾರರು ನಮಗೆ ಅವಕಾಶ ನೀಡಿ ಎಂದು ಪೊಲೀಸರನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಮತ್ತು ಧರಣಿ ನಿರತರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೂ ಪ್ರತಿಭಟನಾಕಾರರಿಗೆ ಮುಖ್ಯಮಂತ್ರಿ ಶೆಟ್ಟರ್ ಅವರಲ್ಲಿ ನಿವೇದನೆ ಸಲ್ಲಿಸುವುದಕ್ಕೆ ಅವಕಾಶ ದೊರೆಯಲಿಲ್ಲ.