ಹುಬ್ಬಳ್ಳಿ: ಕಾರ್ ಮತ್ತು ಕ್ಯಾಂಟರ್ ಮಧ್ಯೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕಾರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡ ಘಟನೆ ಶುಕ್ರವಾರ ಬೆಳಗ್ಗೆ ರಾಯನಾಳ ಬಳಿ ಸಂಭವಿಸಿದೆ. ಬೆಳಗಾವಿಯ ಪ್ರಸನ್ನ ಸಾಣಿಕೊಪ್ಪ (40) ಎಂಬ ಕಾರ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸಂತೋಷ ಪವಾರ, ವಿ. ಜನಕ ಶಾಹಾ ಹಾಗೂ ಹಳೆಹುಬ್ಬಳ್ಳಿ ನಿವಾಸಿ ಮೆಹಬೂಬ ಹೊಸಮನಿ ಎಂಬುವರು ಗಂಭೀರ ಗಾಯಗೊಂಡಿದ್ದು ಈ ಪೈಕಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ. ಸುದ್ದಿ ತಿಳಿಯುತ್ತಿದಂತೆಯೇ ಘಟನಾ ಸ್ಥಳಕ್ಕೆ ಉತ್ತರ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲು ನೆರವಾದರು. ಈ ಕುರಿತಂತೆ ಪ್ರಕರಣ ದಾಖಲಾಗಿದೆ.
ನೇಣಿಗೆ ಶರಣು: ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ವಯೋವೃದ್ಧನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ನವೀನ ಪಾರ್ಕ್ನ ಲಕ್ಷ್ಮಿ ಉದ್ಯಾನವನದ ಬಳಿ ಶುಕ್ರವಾರ ಸಂಭವಿಸಿದೆ. ಸೋಮಪ್ಪ ಮಲ್ಲಪ್ಪ ಮುಳಗುಂದ (61) ಎಂಬುವರೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕ್ಯಾನ್ಸರ್ ಕಾಯಿಲೆಯಿಂದ ಬೇಸತ್ತು ಸೋಮಪ್ಪ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕುರಿತಂತೆ ಪ್ರಕರಣ ದಾಖಲಾಗಿದೆ.