ಟಿಕೆಟ್‌ಗೆ ಗಂಟು, ಮುಖಂಡರಿಗೆ ಕಗ್ಗಂಟು

Updated on: 

ಪ್ರಕಾಶ ಎಸ್. ಶೇಟ್
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 20

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಟಿಕೆಟ್ ಬಯಸಿ ಅರ್ಜಿಗಳ ಮಹಾಪುರವೇ ಆಯಾ ಪಕ್ಷದ ಅಂಗಳದಲ್ಲಿ ಬಂದು ಬಿದ್ದಿದೆ. ಹೀಗಿದ್ದಾಗ ಯಾರಿಗೆ ಟಿಕೆಟ್ ನೀಡಬೇಕು ಎಂಬ ಪ್ರಶ್ನೆ ಮುಖಂಡರನ್ನು ಕಾಡಿದೆ. ಈ ಎಲ್ಲ ಬೆಳವಣಿಗೆಯ ಮಧ್ಯೆ ಬಿಜೆಪಿಯ 30 ಜನರಿಗೆ ಹಾಗೂ ಕೆಜೆಪಿಯ 6 ಜನರಿಗೆ ಟಿಕೆಟ್ ಪಕ್ಕಾ ಆಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಇನ್ನೂ ಗೊಂದಲದಲ್ಲಿದೆ.
ಈ ಹಿಂದಿನ ಪಾಲಿಕೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಪಕ್ಷದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದವರ ಸಂಖ್ಯೆ ಮಿತಿ ಮೀರಿದೆ. ವಾರ್ಡ್‌ವೊಂದರಿಂದ ಟಿಕೆಟ್ ಬಯಸಿ 20 ರಿಂದ 25 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಯಾರಿಗೆ ಮಣೆ ಹಾಕಬೇಕು ಯಾರನ್ನು ಕೈಬಿಡಬೇಕು ಎಂಬ ಚಿಂತೆ ಮುಖಂಡರನ್ನು ಕಾಡಿದೆ. ಈ ಚುನಾವಣೆ ಮುಗಿದ ಬಳಿಕವೇ ವಿಧಾನಸಭೆ ಚುನಾವಣೆ ಎದುರಾಗಲಿರುವುದರಿಂದ ಯಾರನ್ನೂ ಅಷ್ಟು ಸಲೀಸಾಗಿ ತಿರಸ್ಕರಿಸುವಂತಿಲ್ಲ. ಒಂದು ವೇಳೆ ಆಕಾಂಕ್ಷಿತರಲ್ಲಿ ಯಾರೊಬ್ಬರೂ ಮುನಿಸಿಕೊಂಡರೆ ಮುಂದಿನ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀಳಬಹುದು ಎಂಬ ಚಿಂತೆ ಮುಖಂಡರನ್ನು ಕಾಡಿದೆ. ಹೀಗಾಗಿ ಎಲ್ಲ ಪಕ್ಷಗಳ ಮುಖಂಡರು ನಯವಾಗಿ ಯಾರಿಗೂ ತೊಂದರೆಯಾಗದಂತೆ ಟಿಕೆಟ್ ಗೊಂದಲ ಪರಿಹರಿಸುತ್ತಿದ್ದಾರೆ.
ಬಿಜೆಪಿ ಅಂಗಳದಲ್ಲಿ?: ಬಿಜೆಪಿಯಲ್ಲಿ ಬುಧವಾರ ಟಿಕೆಟ್ ಅಂತಿಮಗೊಳಿಸಲು ಮುಖಂಡರು ಇನ್ನಿಲ್ಲದ ಹರಸಾಹಸ ಮಾಡಿದರು. ಸಂಸದ ಪ್ರಹ್ಲಾದ ಜೋಶಿ, ಜಿಲ್ಲಾಧ್ಯಕ್ಷ ಮಹೇಶ ಟೆಂಗಿನಕಾಯಿ ಸಭೆಯ ಮೇಲೆ ಸಭೆ ನಡೆಸಿ ಮೊದಲ ಹಂತದಲ್ಲಿ 30 ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಅಂತಿಮ ನಿರ್ಧಾರ ಕೈಗೊಂಡಿದ್ದಾರೆ. ಸಂಜೆ ಹೊತ್ತಿಗಾಗಲೇ 30 ಜನರ ಪಟ್ಟಿ ಸಿದ್ಧಗೊಂಡಿದ್ದು, ಗುರುವಾರ ಪಟ್ಟಿ ಬಿಡುಗಡೆಗೊಳ್ಳಲಿದೆ. ಈ 30 ಅಭ್ಯರ್ಥಿಗಳ ಪೈಕಿ ಇಬ್ಬರು ಹೊಸ ಮುಖ, ಇನ್ನುಳಿದವರೆಲ್ಲ ನಿರ್ಗಮಿತ ಸದಸ್ಯರೇ ಆಗಿದ್ದಾರೆ.
ಕೆಜೆಪಿ ಬೆಳವಣಿಗೆ: ಕೆಜೆಪಿ ಅವಳಿ ನಗರದ ಎಲ್ಲ ವಾರ್ಡ್‌ಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಬುಧವಾರ ಸಂಜೆ ಹೊತ್ತಿಗಾಗಲೇ 6 ಅಭ್ಯರ್ಥಿಗಳ ಹೆಸರು ಹೊರಗೆಡವಿದ್ದು, ಗುರುವಾರ ಸಂಜೆ ಎಲ್ಲ ಅಭ್ಯರ್ಥಿಗಳ ಹೆಸರು ಪ್ರಕಟಿಸಲಿದೆ.
ಕಾಂಗ್ರೆಸ್ ಟಿಕೆಟ್‌ಗೆ ಕಮಿಟಿ: ಕಾಂಗ್ರೆಸ್‌ನಲ್ಲಿಯೂ ಆಕಾಂಕ್ಷಿತರ ಹೆಸರು ಹನುಮಂತನ ಬಾಲದಂತೆ ಬೆಳೆಯುತ್ತಾ ಸಾಗಿದೆ. ಹೀಗಾಗಿ ಟಿಕೆಟ್ ಯಾರಿಗೆ ಕೊಡಬೇಕು, ಬಿಡಬೇಕು ಎಂಬ ಚಿಂತೆ ಕಾಡಿದೆ. ಏತನ್ಮಧ್ಯೆ ದಿನೇಶ ಗುಂಡೂರಾವ್ ಗುರುವಾರ ಬೆಳಗ್ಗೆ ನಗರಕ್ಕೆ ಆಗಮಿಸಲಿದ್ದಾರೆ. ಇವರನ್ನು ಒಳಗೊಂಡಂತೆ ಜಿಲ್ಲಾಧ್ಯಕ್ಷ ಎ.ಎಂ. ಹಿಂಡಸಗೇರಿ ಅಧ್ಯಕ್ಷತೆಯಲ್ಲಿ 25 ಜನರ ಅಭ್ಯರ್ಥಿಗಳ ಆಯ್ಕೆ ಸಮಿತಿ ರಚಿಸಲಾಗಿದೆ. ಇದು ಕಾಂಗ್ರೆಸ್ ಟಿಕೆಟ್‌ಗಾಗಿ ಎಷ್ಟು ಗುದ್ದಾಟವಿದೆ ಎಂಬುದನ್ನು ತೋರಿಸಿಕೊಡುತ್ತದೆ. ಶುಕ್ರವಾರ ಬಹುತೇಕ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳಲಿದೆ.
ಹೊರಟ್ಟಿ ಮನೆ ಮುಂದೆ: ಜೆಡಿಎಸ್‌ನಲ್ಲಿಯೂ ಕಥೆ ಹೊರತಾಗಿಲ್ಲ. ಇಲ್ಲಿಯೂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಟಿಕೆಟ್ ಆಕಾಂಕ್ಷಿಗಳು ಮಾಜಿ ಸಚಿವ ಬಸವರಾಜ ಹೊರಟ್ಟಿ ಮನೆ ಮುಂದೆ ಜಮಾಯಿಸಿದ್ದಾರೆ. ಬೆಳಗ್ಗೆಯಿಂದ ರಾತ್ರಿವರೆಗೂ ಹೊರಟ್ಟಿ ನಿವಾಸದಲ್ಲಿ ಸಭೆ ನಡೆದಿತ್ತು. ಶುಕ್ರವಾರ ಹೊತ್ತಿಗಾಗಲೇ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com