ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 21
ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಒಂದೇ ದಿನ ಬಾಕಿ ಉಳಿದಿದೆ. ಏತನ್ಮಧ್ಯೆ ಅಂತೂ ಇಂತೂ ತೀವ್ರ ಕಸರತ್ತಿನ ನಡುವೆ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಕೆಜೆಪಿ ಅಭ್ಯರ್ಥಿಗಳ ಪಟ್ಟಿ ಬಹುತೇಕ ಸಿದ್ಧ ಪಡಿಸಿಕೊಂಡಿದೆ.
ಬಿಜೆಪಿ ಈಗಾಗಲೇ 33 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದೆ. ಕಾಂಗ್ರೆಸ್ ಹಾಗೂ ಕೆಜೆಪಿ ಎಲ್ಲ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ್ದರೆ, ಜೆಡಿಎಸ್ 30 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದೆ.
ನಾನಾ ಪಕ್ಷಗಳಲ್ಲಿ ಗುರುವಾರವೂ ಅಭ್ಯರ್ಥಿಗಳ ಆಯ್ಕೆಗಾಗಿ ಇನ್ನಿಲ್ಲದ ಚಟುವಟಿಕೆ ನಡೆಯಿತು. ಬೆಳಗ್ಗೆಯಿಂದ ರಾತ್ರಿಯವರೆಗೂ ಬಿಡುವಿಲ್ಲದ ಸಭೆ ನಡೆದಿತ್ತು. ಪಕ್ಷದ ಮುಖಂಡರು ಸಭೆಯಲ್ಲಿ ವ್ಯಸ್ತರಾಗಿದ್ದರೆ ಆಕಾಂಕ್ಷಿಗಳು ಮತ್ತವರ ಬೆಂಬಲಿಗರು ಸಭೆ ನಡೆಯುತ್ತಿದ್ದ ಸ್ಥಳದ ಹೊರಗೆ ಕಾಯುತ್ತಿದ್ದರು. ಸಾಲದ್ದಕ್ಕೆ ಸಭೆಯಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದರು. ತಮ್ಮ ಹೆಸರು ಪ್ರಸ್ತಾಪವಾಗಿದೆಯೋ ಇಲ್ಲ, ಮುಖಂಡರು ಟಿಕೆಟ್ ವಿಷಯದಲ್ಲಿ ತಮಗೆ ಹಸಿರು ನಿಶಾನೆ ತೋರಿದ್ದಾರೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳುತ್ತಿದ್ದರು.
ಇವೆಲ್ಲದರ ನಡುವೆ ಆಕಾಂಕ್ಷಿಗಳು ಬೆಳಗ್ಗೆಯಾಗುತ್ತಲೇ ಪಕ್ಷದ ಮುಖಂಡರ ಮನೆ ಎದುರು ಹಾಜರಾಗಿದ್ದರು. ಸಂಸದ ಪ್ರಹ್ಲಾದ ಜೋಶಿ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಮಹೇಶ ಟೆಂಗಿನಕಾಯಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎ.ಎಂ. ಹಿಂಡಸಗೇರಿ, ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ಬಸವರಾಜ ಹೊರಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ ಮನೆ ಮುಂದೆ ಆಕಾಂಕ್ಷಿಗಳು ಸಾಲುಗಟ್ಟಿ ನಿಂತಿದ್ದರು.
ಸಿಎಂಗಾಗಿ ಕಾಯುತ್ತಿರುವ ಬಿಜೆಪಿ: ಬಿಜೆಪಿ ಪಾಳಯದಲ್ಲಿ ಬಿಡುವಿಲ್ಲದ ಚಟುವಟಿಕೆ ನಡೆದಿತ್ತು. ಬಿಜೆಪಿ ಈ ಮೊದಲು ಹೇಳಿದ ಪ್ರಕಾರ ಫೆ. 20 ರಂದು ಮೊದಲು ಹಾಗೂ ಫೆ.22 ರಂದು ಎರಡನೇ ಪಟ್ಟಿ ಬಹಿರಂಗ ಪಡಿಸಬೇಕಿತ್ತು. ಆದರೆ, ಇನ್ನುಳಿದ ಪಕ್ಷಗಳು ಬಿಜೆಪಿ ಪಟ್ಟಿ ಬಿಡುಗಡೆಯಾಗುವವರೆಗೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿರುವುದರಿಂದ ಚಾಣಾಕ್ಷತೆ ಪ್ರದರ್ಶಿಸಿರುವ ಬಿಜೆಪಿ, ಅಭ್ಯರ್ಥಿಗಳ ಹೆಸರು ಬಹಿರಂಗಪಡಿಸುವ ನಿರ್ಧಾರದಿಂದ ಹಿಂದೆ ಸರಿದಿದೆ. ಮೊದಲ ಹಾಗೂ ಎರಡನೇ ಪಟ್ಟಿ ಯಾವುದೇ ಕಾರಣಕ್ಕೂ ಬಹಿರಂಗ ಪಡಿಸದೇ ನೇರವಾಗಿ ತಾವು ಆಯ್ಕೆ ಮಾಡಿರುವ ಅಭ್ಯರ್ಥಿಗಳಿಗೆ 'ಬಿ' ಫಾರ್ಮ್ ನೀಡುವ ಮೂಲಕ ನಾಮಪತ್ರ ಸಲ್ಲಿಸಲು ತಿಳಿಸಲಿದೆ. ಬಿಜೆಪಿಯ ಈ ನಡೆ ಬಹಿರಂಗಗೊಂಡಿರುವುದರಿಂದ ಇನ್ನುಳಿದ ಪಕ್ಷಗಳು ಹೆಚ್ಚು ಸಮಯ ತೆಗೆದುಕೊಳ್ಳದೇ ತಮ್ಮ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಿವೆ.
ಈ ಎಲ್ಲ ಬೆಳವಣಿಗೆಯ ನಡುವೆ ಬಿಜೆಪಿ ಗುರುವಾರದ ವೇಳೆಗೆ ಅಧಿಕೃತವಾಗಿ 33 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆಯಲ್ಲದೇ, ಆಯಾ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸುವ ತಯಾರಿ ಮಾಡಿಕೊಳ್ಳುವಂತೆ ಸಂದೇಶ ರವಾನಿಸಿದೆ. ಜತೆಗೆ ಇನ್ನುಳಿದ 34 ವಾರ್ಡ್ಗಳಿಗೆ ಯಾರನ್ನು ಅಭ್ಯರ್ಥಿಯಾಗಿ ಘೋಷಿಸಬಹುದು ಎಂಬ ಪಟ್ಟಿ ಜಿಲ್ಲಾಧ್ಯಕ್ಷ ಮಹೇಶ ಟೆಂಗಿನಕಾಯಿಯವರ ಬಳಿ ಇದೆ. ಶುಕ್ರವಾರ ಬೆಳಗ್ಗೆ ನಗರಕ್ಕೆ ಆಗಮಿಸಲಿರುವ ಸಿಎಂ ಜಗದೀಶ ಶೆಟ್ಟರ್ ಈ 34 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ಪ್ರಕ್ರಿಯೆಗೆ ಅಂತಿಮ ಅಂಕಿತ ಹಾಕಲಿದ್ದಾರೆ.
ಕಾಂಗ್ರೆಸ್ ಸಭೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಹೆಸರು ಅಂತಿಮಗೊಳಿಸಲು ಇಲ್ಲಿನ ಕಾಟನ್ಕೌಂಟಿಯಲ್ಲಿ ಗುರುವಾರ ಸಭೆ ಆಯೋಜಿಸಲಾಗಿತ್ತು. ಅಭ್ಯರ್ಥಿಗಳ ಆಯ್ಕೆ ಸಮಿತಿ ಪ್ರಮುಖರಾದ ದಿನೇಶ ಗುಂಡೂರಾವ್, ಓಬೇದುಲ್ಲಾ ಷರೀಫ್, ಎ.ಎಂ. ಹಿಂಡಸಗೇರಿ, ನಾಗರಾಜ ಛಬ್ಬಿ, ಮಂಜುನಾಥ ಕುನ್ನೂರ, ಎಫ್.ಐ. ಜಕ್ಕಪ್ಪನವರ ಮತ್ತಿತರರು ಸಭೆಯಲ್ಲಿದ್ದರು. ಬೆಳಗ್ಗೆಯಿಂದ ಸಂಜೆವರೆಗೂ ಬಿಡುವಿಲ್ಲದ ಸಭೆ ನಡೆದಿದೆ. ಸಂಜೆಯ ವೇಳೆಗಾಗಲೇ ಎಲ್ಲ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಆದರೆ, ಈ ಪಟ್ಟಿಯಲ್ಲಿ ಈ ಹಿಂದೆ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಧಾರವಾಡ ಭಾಗದ ಮೂವರು ಹಾಗೂ ಹುಬ್ಬಳ್ಳಿಯ ಇಬ್ಬರಿಗೆ ಟಿಕೆಟ್ ನೀಡಲು ಮುಖಂಡರು ನಿರಾಕರಿಸಿದ್ದಾರೆ. ಈ ಕಾರಣಕ್ಕೆ ಆಕಾಂಕ್ಷಿಗಳು ಮುಖಂಡರೆದುರು ಗಲಾಟೆ ನಡೆಸಿದ್ದಾರಲ್ಲದೇ ಟಿಕೆಟ್ ನೀಡದಿದ್ದರೆ ಅನ್ಯ ಪಕ್ಷದತ್ತ ಮುಖ ಮಾಡುವುದಾಗಿ ಎಚ್ಚರಿಸಿದ್ದಾರೆ. ಇದರಿಂದ ಕಿರಿಕಿರಿಗೊಳಗಾದ ಮುಖಂಡರು ಗುರುವಾರ ರಾತ್ರಿ ಹೊತ್ತಿಗೆ ಸಭೆಯನ್ನು ಕಾಟನ್ಕೌಂಟಿಯಿಂದ ನವಲೂರಿನ ಮಯೂರ್ ರೆಸಾರ್ಟ್ಗೆ ವರ್ಗಾಯಿಸಿದ್ದಾರೆ. ರೆಸಾರ್ಟ್ನಲ್ಲಿ ಮುಖಂಡರು ಅಭ್ಯರ್ಥಿ ಪಟ್ಟಿಗೆ ಅಂತಿಮ ಟಚ್ ನೀಡಿದ್ದಾರೆ.
ಜೆಡಿಎಸ್, ಕೆಜೆಪಿ: ಜೆಡಿಎಸ್ ಹಾಗೂ ಕೆಜೆಪಿಯಲ್ಲಿಯೂ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ತೀವ್ರ ಕಸರತ್ತು ನಡೆದಿದೆ. ಮಾಜಿ ಸಚಿವ ಬಸವರಾಜ ಹೊರಟ್ಟಿ ನಿವಾಸದಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು 30 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದೆ. ಇನ್ನುಳಿದ ಅಭ್ಯರ್ಥಿಗಳ ಹೆಸರು ಶುಕ್ರವಾರ ಪ್ರಕಟಗೊಳ್ಳಲಿದೆ. ಇನ್ನು ಕೆಜೆಪಿ ಅಭ್ಯರ್ಥಿ ಆಯ್ಕೆ ವಿಷಯವಾಗಿ ಮಾಜಿ ಸಚಿವ ಜಬ್ಬಾರಖಾನ್ ಹೊನ್ನಳ್ಳಿ, ಅಶೋಕ ಕಾಟವೆ ಉಪಸ್ಥಿತಿಯಲ್ಲಿ ಕಾಟನ್ ಮಾರ್ಕೇಟ್ನಲ್ಲಿರುವ ಪಕ್ಷದ ಕಚೇರಿಯಲ್ಲಿ ತಡರಾತ್ರಿವರೆಗೂ ಸಭೆ ನಡೆದಿದ್ದು, ಎಲ್ಲ 67 ವಾರ್ಡ್ನಿಂದ ಕಣಕ್ಕಿಳಿಯುವ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿದೆ.
- ಪ್ರಕಾಶ ಎಸ್. ಶೇಟ್