ಹುಬ್ಬಳ್ಳಿ: ಲ್ಯಾಬ್ರಡಾರ್, ಜರ್ಮನ್ ಶೆಫರ್ಡ್, ಗ್ರೇಟ್ಡೇನ್ ಮಧ್ಯೆ ದೇಶಿ ತಳಿ ಮುಧೋಳ ಹೌಂಡ್ಸ್ನಂತಹ ದೊಡ್ಡ ಬೇಟೆ ನಾಯಿಗಳು ಇವುಗಳ ಮಧ್ಯೆ ಅಲ್ಲಲ್ಲಿ ಕಾಲಿಗೆ ತೊಡರುಗಾಲು ಹಾಕುವ ಪಮೆರಿಯನ್, ಚಿಹುವಾನಂತಹ ಮುದ್ದಿಗಾಗಿ ಮಾತ್ರ ಇರುವ ಚಿಕ್ಕ ಶ್ವಾನಗಳು.
ಇದು ಕಂಡದ್ದು ಮಹಿಳಾ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಭಾನುವಾರ ಹುಬ್ಬಳ್ಳಿ-ಧಾರವಾಡ ಕೇನೆನ್ ಅಸೋಸಿಯೇಷನ್ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ. ದೇಶ ವಿದೇಶಗಳ ವಿವಿಧ ಜಾತಿಯ ಸುಮಾರು ನೂರಕ್ಕೂ ಹೆಚ್ಚು ಶ್ವಾನಗಳು ಪ್ರಪ್ರಥಮ ಬಾರಿಗೆ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.
ಕರ್ನಾಟಕದ ದೇಶಿ ತಳಿ ಬೇಟೆ ನಾಯಿ ಮುಧೋಳ ಹೌಂಡ್ಸ್ ವಿದೇಶಿ ತಳಿಗಳೊಂದಿಗೆ ಪೈಪೋಟಿ ಒಡ್ಡುವಂತೆ ತನ್ನ ನೀಳ ಕಾಯ, ಉದ್ದ ಬಾಯಿ, ಹರವಾದ ಎದೆಯಿಂದ ಶ್ವಾನ ಪ್ರಿಯರ ಮೆಚ್ಚುಗೆ ಗಳಿಸಿತು. ಪ್ರಥಮ ಬಾರಿಗೆ ಹುಬ್ಬಳ್ಳಿಯಲ್ಲಿ ಶ್ವಾನ ಪ್ರದರ್ಶನ ಆಯೋಜಿಸಲಾಗಿದ್ದ ಕಾರಣ ಆರಂಭದಲ್ಲಿ ಸ್ವಲ್ಪ ಗೊಂದಲವಿದ್ದರೂ ಹುಬ್ಬಳ್ಳಿ ಧಾರವಾಡ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ಸುತ್ತಲಿನ ಜಿಲ್ಲೆಗಳಿಂದ ಅನೇಕ ಶ್ವಾನ ಪ್ರಿಯರು ತಮ್ಮ ಪ್ರೀತಿಯ ಒಡನಾಡಿಯನ್ನು ಕರೆತಂದಿದ್ದರು.
ಪ್ರದರ್ಶನದಲ್ಲಿ ಜಗತ್ತಿನ ಅತಿ ಚಿಕ್ಕ ಶ್ವಾನ ಚಿಹುವಾದಿಂದ ಹಿಡಿದು ಅತಿ ದೊಡ್ಡ ತಳಿ ಗ್ರೇಟ್ಡೇನ್ ಏಕಕಾಲದಲ್ಲಿ ಸಭೀಕರ ಎದುರು ಆಗಮಿಸಿ ನೋಡುಗರ ಕಣ್ಣಲ್ಲಿ ಅಚ್ಚರಿ ಮೂಡಿಸಿದವು. ಇಡೀ ದಿನ ನಡೆದ ಶ್ವಾನ ಪ್ರದರ್ಶನದಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಮುಧೋಳ ನಾಯಿಗಳ ಸಾಕಾಣಿಕೆಯನ್ನು ವೃತ್ತಿಯನ್ನಾಗಿಸಿಕೊಂಡ ಕೆಲವರು ಮರಿಗಳೊಂದಿಗೆ ಆಗಮಿಸಿ ಮರಿಗಳ ವ್ಯಾಪಾರಕ್ಕೆ ಮಾರುಕಟ್ಟೆ ಕುದುರಿಸುವ ಪ್ರಯತ್ನ ಮಾಡಿದರು.