ಧಾರವಾಡ: ಹಣದಾಸೆಗಾಗಿ ತಾನು ಕೆಲಸ ಮಾಡುತ್ತಿದ್ದ ಚುರುಮರಿ ಅಂಗಡಿಯ ಮಾಲೀಕನ ಮಗನನ್ನೇ ಅಪಹರಿಸಿದ ಕಾರ್ಮಿಕನೋರ್ವ ಪ್ರಸ್ತುತ ಪೊಲೀಸರ ಅತಿಥಿಯಾದ ಘಟನೆ ಮಂಗಳವಾರ ನಡೆದಿದೆ.
ವಿದ್ಯಾಗಿರಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಾಲೂಕಿನ ಕ್ಯಾರಕೊಪ್ಪದ ರವಿ ಯಾದವಾಡ ಬಂಧಿತ ಆರೋಪಿ. ಐದೂವರೆ ವರ್ಷದ ಸಾಯಿನಾಥ ಪ್ರಮೋದ ಗಡದೆ ಎಂಬ ಬಾಲಕನನ್ನು ಸೋಮವಾರ ಬೆಳಿಗ್ಗೆ ಬಾಶೆಲ್ ಮಿಶನ್ ಶಾಲೆ ಹತ್ತಿರ ಅಪಹರಿಸಿಕೊಂಡು ಕ್ಯಾರಕೊಪ್ಪದ ಹೊಲದ ಮನೆಯಲ್ಲಿ ಕೂಡಿಟ್ಟಿದ್ದ. ಮಧ್ಯಾಹ್ನ 2ರ ಸುಮಾರಿಗೆ ಬಾಲಕನ ತಂದೆಗೆ ಕರೆ ಮಾಡಿ ರು. 1 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದ. ಮಗನ ಅಪರಹರಣ ಕುರಿತು ಬಾಲಕನ ತಂದೆ ಪ್ರಮೋದ ವಿದ್ಯಾಗಿರಿ ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಎಸಿಪಿ ಶಂಕರ ಹೊಳಿಹೊಸೂರು, ವಿದ್ಯಾಗಿರಿ ಠಾಣೆ ಸಿಪಿಐ ಗುರು ಮತ್ತೂರು ಮಾರ್ಗದರ್ಶನದಲ್ಲಿ ಪಿಎಸ್ಐ ಪರಶುರಾಮ ಪೂಜಾರಿ ಮತ್ತು ಸಿಬ್ಬಂದಿ ಒಂದೇ ದಿನದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.