ಬಿಜೆಪಿ ಹಣಿಯಲು ಪ್ರತಿಪಕ್ಷಗಳ ತಂತ್ರ

Updated on: 

ಆನಂದ ಅಂಗಡಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 27
'ಪರ್ಸೆಂಟೆಜ್ ಲೆಕ್ಕ, ಸಾಕಷ್ಟು ಅವ್ಯವಹಾರದಿಂದ ಹಣ ಗಳಿಸಿರುವ ಬಿಜೆಪಿಯ ಜನಪ್ರತಿನಿಧಿಗಳು, ಆ ಹಣದ ಬಲದಿಂದಲೇ ಸ್ಥಳೀಯ ಮತ್ತು ವಿಧಾನಸಭೆ ಚುನಾವಣೆ ಗೆಲ್ಲಬೇಕೆಂಬ ಲೆಕ್ಕಾಚಾರ ಹಾಕಿದ್ದಾರೆ. ಆದರೆ, ಈ ಬಾರಿ ಹಣ ಹಾಗೂ ಜಾತಿ ಬಲದಿಂದ ಪ್ರಯೋಜನ ಇಲ್ಲ. ಹಣ ಮತ್ತು ಜಾತಿ ಬಲದಿಂದ ಮೆರೆದಾಡಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗತಿಯೇ ಬಿಜೆಪಿಯವರಿಗೂ ಬರಲಿದೆ.'
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಗೆಲುವಿಗಿರುವ ಸರಳ ಮಾರ್ಗ ಹಾಗೂ ಹಣದ ಆಧಾರದ ಮೇಲೆ ಚುನಾವಣೆ ಗೆಲ್ಲುವ ಯೋಜನೆ ರೂಪಿಸಿರುವ ಬಿಜೆಪಿಯ ಕುತಂತ್ರದ ಕುರಿತು ಜೆಡಿಎಸ್ ಮುಖಂಡ, ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ 'ಕನ್ನಡಪ್ರಭ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ ಮಾತಿದು. ಸಾರ್ವಜನಿಕರ ತೆರಿಗೆ ಹಣವನ್ನು ಸರ್ಕಾರ ಬೇಕಾಬಿಟ್ಟಿ ಖರ್ಚು ಮಾಡುತ್ತಿದೆ. ಸಿಎಂ ಶೆಟ್ಟರ್ ಕಳೆದ 7 ತಿಂಗಳಲ್ಲಿ ವಾರದಲ್ಲಿ ಎರಡು ಬಾರಿ ಹುಬ್ಬಳ್ಳಿಗೆ ಬಂದುಹೋಗುವುದಕ್ಕೇ ರು. 3.40 ಕೋಟಿ ವೆಚ್ಚ ಮಾಡಿದ್ದಾರೆ. ಈ ಹಣದಿಂದಲೇ ಸಾಕಷ್ಟು ಅಭಿವೃದ್ಧಿ ಮಾಡಬಹುದಿತ್ತು. ಪ್ರತಿ ಬಾರಿ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಬರುವ ಬದಲು ರೈಲಿನಲ್ಲಿ ಬಂದುಹೋಗಿದ್ದರೆ ಸಾಕಷ್ಟು ಹಣ ಉಳಿತಾಯವಾಗುತ್ತಿತ್ತು ಎಂದು ಹೊರಟ್ಟಿ ಕಿಡಿಕಾರಿದರು.  ಶೆಟ್ಟರ್ ಮುಖ್ಯಮಂತ್ರಿಯಾದ ನಂತರ ಹುಬ್ಬಳ್ಳಿಯಲ್ಲಿ ಒಂದು ಫ್ಲೈಓವರ್ ಸಹ ನಿರ್ಮಿಸಲಾಗಲಿಲ್ಲ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದು ಹೋಗಿ ಪೊಲೀಸರಿಗೆ ತೊಂದರೆ ನೀಡಿದ್ದಷ್ಟೇ ಇವರ ಸಾಧನೆ.  ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತದ ಬಗ್ಗೆ ಜನಸಾಮಾನ್ಯರು ಬೇಸರಗೊಂಡಿದ್ದಾರೆ. ಸರ್ಕಾರದ ಮಟ್ಟದಲ್ಲಾಗಲಿ ಅಥವಾ ಸ್ಥಳೀಯ ಸಂಸ್ಥೆ ಮಟ್ಟದಲ್ಲಾಗಲಿ ಬಿಜೆಪಿಯ ಜನಪ್ರತಿನಿಧಿಗಳಿಗೆ ಪರ್ಸೆಂಟೇಜ್ ಕೊಡದೇ ಯಾವುದೇ ಕೆಲಸ ಆಗುವುದಿಲ್ಲ. ಹೀಗಾಗಿ ಕಳೆದ ಅವಧಿಯಲ್ಲಿ ನಡೆದ ಕಾಮಗಾರಿಗಳೆಲ್ಲ ಕಳಪೆಯಾಗಿವೆ ಎಂದು ದೂರಿದರು.  
ಜೆಡಿಎಸ್ ಸಾಧನೆ: ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಹಲವಾರು ಜನೋಪಯೋಗಿ ಕಾರ್ಯ ಮಾಡಿದ್ದಾರೆ. ಆಗ ಅಧಿಕಾರ ಹಸ್ತಾಂತರ ಸಂದರ್ಭದಲಾಗಿದ್ದ ವಿವಾದದಿಂದ ಜೆಡಿಎಸ್‌ಗೆ ಮತ ನೀಡದಂತೆ ಬಿಜೆಪಿಯವರು ಬೊಬ್ಬೆ ಹೊಡೆದುಕೊಂಡಿದ್ದರು. ಸದ್ಯ ಬಿಜೆಪಿಗೆ ಮತ ನೀಡದಂಥ ಪರಿಸ್ಥಿತಿ ಬಂದೊದಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ 20 ತಿಂಗಳ ಅವಧಿಯಲ್ಲಿ ನಡೆದಿರುವ ಕಾರ್ಯಗಳು ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ವರವಾಗಲಿವೆ.  ಕಾಂಗ್ರೆಸ್ ಅವಧಿಯಲ್ಲಿನ ಭ್ರಷ್ಟಾಚಾರವನ್ನಂತೂ ಜನ ಮರೆಯಲು ಸಾಧ್ಯವೇ ಇಲ್ಲ. ಸ್ಥಳೀಯ ಮಟ್ಟ ಹಾಗೂ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅವಧಿಯಲ್ಲಿ ನಡೆದ ಭ್ರಷ್ಟಾಚಾರಗಳು ಜನತೆಯಲ್ಲಿ ಆಕ್ರೋಶ ಮೂಡಿಸಿವೆ. ಹೀಗಾಗಿ ಎರಡೂ ಚುನಾವಣೆಯಲ್ಲಿ ಈ ಬಾರಿ ಜೆಡಿಎಸ್ ಮತದಾರರಿಗೆ ಹತ್ತಿರವಾಗಲಿದೆ.  ಜೆಡಿಎಸ್ ಚುನಾವಣೆ ಪೂರ್ವದಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ತನ್ನ ಸ್ವಂತ ಬಲದ ಮೇಲೆ ಸ್ಪರ್ಧಿಸುತ್ತದೆ ಎಂದು ಹೊರಟ್ಟಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com