ಕವಿವಿ: ಜ. 28, 29ರಂದು ಮೀಡಿಯಾ ಫೆಸ್ಟ್

Updated on: 

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗಕ್ಕೆ 30 ವರ್ಷ ತುಂಬಿದ ಹಿನ್ನೆಲೆಯಲ್ಲಿ ಜ. 28, 29ರಂದು ಮಾಧ್ಯಮ ಹಬ್ಬ, ವಿಚಾರ ಸಂಕಿರಣ, ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಸಮಾರಂಭದ ರೂಪುರೇಷೆ ಬಗ್ಗೆ ಸೋಮವಾರ ವಿಭಾಗದ ಮುಖ್ಯಸ್ಥ ಡಾ. ಎ.ಎಸ್. ಬಾಲಸುಬ್ರಹ್ಮಣ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ. 28ರ ಬೆಳಗ್ಗೆ 11ಕ್ಕೆ ಕವಿವಿ ಮಾನಸೋಲ್ಲಾಸ ಸಭಾಭವನದಲ್ಲಿ ಡಾ. ಪಾಟೀಲ ಪುಟ್ಟಪ್ಪ ವಿಚಾರ ಸಂಕಿರಣ ಉದ್ಘಾಟಿಸಲಿದ್ದಾರೆ. ಮಾಧ್ಯಮ ಅಕಾಡೆಮಿ ಅಧ್ಯಕ್ಷ ಪೊನ್ನಪ್ಪ, ಪತ್ರಕರ್ತರಾದ ಹುಣಸವಾಡಿ ರಾಜನ್ ಇತರರು ಭಾಗವಹಿಸುತ್ತಾರೆಂದರು.
ತಂತ್ರಜ್ಞಾನದ ಹೊಸ ಆವಿಷ್ಕಾರಗಳ ಪರಿಣಾಮ ಅತ್ಯಂತ ಸ್ಪರ್ಧಾತ್ಮಕವಾಗುತ್ತಿರುವ ಮಾಧ್ಯಮ ಕ್ಷೇತ್ರ ಹಲವು ಸಂದರ್ಭಗಳಲ್ಲಿ ದುರುಪಯೋಗವಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ತಾಣಗಳನ್ನು ನಿರ್ಬಂಧಿಸಬೇಕು ಎಂಬ ವಾದವಿದ್ದರೆ, ಇನ್ನೊಂದೆಡೆ ಮಾಧ್ಯಮ ಸ್ವಾತಂತ್ರ್ಯ ನಿರ್ಬಂಧಿಸುವುದು ಸರಿಯಲ್ಲ. ಅದು ಮುಕ್ತವಾಗಿರಬೇಕೆಂಬ ವಾದವೂ ಇದೆ. ಈ ಹಿನ್ನೆಲೆಯಲ್ಲೂ ವಿಚಾರ ಸಂಕಿರಣವು ಬೆಳಕು ಚೆಲ್ಲಬೇಕೆನ್ನುವುದು ಆಶಯ ಎಂದರು.    
ಸುದ್ದಿ ಬಿತ್ತರಿಸುವ ಭರದಲ್ಲಿ, ಟಿಆರ್‌ಪಿ ಸ್ಪರ್ಧೆಯ ನಡುವೆ ಆಗುವ ತಪ್ಪುಗಳನ್ನು ತಡೆಯುವ ಅಗತ್ಯವಿದೆ. ವಿಭಾಗ ಮೂರು ದಶಕಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಿ ಈ ಕುರಿತು ಪರಸ್ಪರ ವಿಚಾರ ವಿನಿಮಯ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಆಯಾ ಕ್ಷೇತ್ರಗಳಲ್ಲಿ ಅನೇಕ ವರ್ಷಗಳ ಅನುಭವವುಳ್ಳ ಸಂಶೋಧಕರು, ತಜ್ಞರು, ಉಪನ್ಯಾಸಕರು ವಿಚಾರ ಸಂಕಿರಣದಲ್ಲಿ ಭಾಗವಹಿಸುತ್ತಾರೆ. ವಿಚಾರ ಸಂಕಿರಣದಲ್ಲಿ ಮಂಡಿಸುವ ಪ್ರಬಂಧಗಳು, ಉಪನ್ಯಾಸಗಳನ್ನು ಕ್ರೋಢಿಕರಿಸಿ ಪುಸ್ತಕ ರೂಪದಲ್ಲಿ ಹೊರತರುವ ಯೋಜನೆ ಇದೆ. ವಿಚಾರ ಸಂಕಿರಣದ ನೆನಪಿಗಾಗಿ ಮಾಧ್ಯಮ ಸೌರಭ ಸ್ಮರಣ ಸಂಚಿಕೆ ಹೊರತರಲಾಗುವುದು ಎಂದರು.
ರಾಜ್ಯದ ವಿವಿಧ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ರೈನ್ ಬೋ ಮಾಧ್ಯಮೋತ್ಸವ ಏರ್ಪಡಿಸಿದ್ದು, ಹಲವು ಸ್ಪರ್ಧೆಗಳಿವೆ. ವಿಭಾಗದಲ್ಲಿ ಅಧ್ಯಯನ ಪೂರೈಸಿದ 600 ವಿದ್ಯಾರ್ಥಿಗಳ ಪೈಕಿ 400 ವಿದ್ಯಾರ್ಥಿಗಳು ವಿವಿಧ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಭಾಗದ ಹಳೆ ವಿದ್ಯಾರ್ಥಿಗಳ ಸಮ್ಮೇಳನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಕೆ.ಜಗುಚಂದ್ರ ನಿರ್ದೇಶನದಲ್ಲಿ ಕೊನೆ ನಮಸ್ಕಾರ ನಾಟಕ, ಕನ್ನಡ-ಸಂಸ್ಕೃತಿ ಇಲಾಖೆ ಪ್ರಾಯೋಜಿತ ನೃತ್ಯ ಕಾರ್ಯಕ್ರಮ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪನ್ಯಾಸಕ ಡಾ. ಸಂಜಯ ಮಾಲಗತ್ತಿ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com