ನಕಲಿ ಮೊಬೈಲ್‌ಗೆ ಪೊಲೀಸ್ ಸುಪರ್ದಿ!

Updated on: 

ಪ್ರಕಾಶ ಎಸ್. ಶೇಟ್
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 24
ಹಂಗಾಮಾ ಡಾಟ್ ಕಾಮ್ ಮಾಹಿತಿಯನ್ನಾಧರಿಸಿ ಮಹಾನಗರ ಪೊಲೀಸರು ನಕಲಿ ಮೊಬೈಲ್ ಮಾರಾಟ ಮಾಡುತ್ತಿದ್ದ ನಗರದ ಹರ್ಷಾ ಕಾಂಪ್ಲೆಕ್ಸ್‌ನ ಮಳಿಗೆಯ ಮೇಲೆ ದಾಳಿ ನಡೆಸಿ ಹಂಗಾಮಾ ಎಬ್ಬಿಸಿದ್ದ ಪೊಲೀಸರ ಆರ್ಭಟ ನೋಡಿದರೆ ಇನ್ನೇನು ನಕಲಿ ಮೊಬೈಲ್ ಮಾರಾಟಗಾರರ ಕಥೆ ಮುಗಿಯಿತು. ಹುಬ್ಬಳ್ಳಿಯಲ್ಲಿ ಬೀಡು ಬಿಟ್ಟಿದ್ದ ನಕಲಿ ಮೊಬೈಲ್ ದಂಧೆಕೋರರು ಇನ್ನೇನು ಕಾಲ್ಕೀಳಲಿದ್ದಾರೆ, ಇನ್ನಾದರೂ ನಕಲಿ ಸಹವಾಸ ತಪ್ಪಿತಲ್ಲ ಎಂದು ಕಂಪನಿಗಳು, ಗ್ರಾಹಕರು ಅಂದುಕೊಂಡಿದ್ದರು.
ಆದರೆ..!? 'ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಲೀ' ಎಂಬಂತೆ ದಾಳಿ ನಡೆದು ಇನ್ನೂ ಹದಿನೈದು ದಿನಗಳಾಗಿಲ್ಲ ಆಗಲೇ ಮತ್ತೆ ಹರ್ಷಾ ಕಾಂಪ್ಲೆಕ್ಸ್‌ನಲ್ಲಿ ನಕಲಿ ಮೊಬೈಲ್ ಮಾರಾಟ ದಂಧೆ ಚಿಗಿತುಕೊಂಡಿದ್ದಲ್ಲದೇ, ಸಾಲದ್ದಕ್ಕೆ ಈ ಬಾರಿ ಪೊಲೀಸರ ಸುಪರ್ದಿಯಲ್ಲಿ ನಕಲಿ ದಂಧೆ ನಡೆಯುತ್ತಿರುವುದು ಬೆಚ್ಚಿ ಬೀಳಿಸುವ ಸಂಗತಿ.
'ಕನ್ನಡಪ್ರಭ' ಕಚೇರಿಗೆ ವ್ಯಕ್ತಿಯೊಬ್ಬರು ದೂರವಾಣಿ ಕರೆ ಮಾಡಿ ಹರ್ಷಾ ಕಾಂಪ್ಲೆಕ್ಸ್‌ನಲ್ಲಿ ನಕಲಿ ಮೊಬೈಲ್ ಮಾರಾಟ ದಂಧೆ ಮತ್ತೆ ಆರಂಭವಾಗಿದೆ. ಇದಕ್ಕೆ ಪೊಲೀಸರು ಕುಮ್ಮಕ್ಕು ಇದೆ ಎಂದು ಮಾಹಿತಿ ನೀಡಿದಾಗ ಮೊದಲು ನಂಬಲಾಗಲಿಲ್ಲ. ಇತ್ತೀಚೆಗಷ್ಟೇ ದಾಳಿ ನಡೆದಿದೆ ಕಳ್ಳದಂಧೆಕೋರರಲ್ಲಿ ಭಯ ನೆಲೆಸಿದೆ. ಹೀಗಿದ್ದಾಗ ಪುನಃ ನಕಲಿ ದಂಧೆ ಶುರುವಾಗಲು ಹೇಗೆ ಸಾಧ್ಯ? ಎಂದು ಆ ವ್ಯಕ್ತಿಗೆ ಕೇಳಿದಾಗ, ಬೇಕಿದ್ದರೆ ಮೊಬೈಲ್ ಖರೀದಿ ಮಾಡುವವರ ಸೋಗಿನಲ್ಲಿ ಬಂದು ನೋಡಿ ಎಲ್ಲವೂ ತಿಳಿಯುತ್ತದೆ ಎಂದರು. ಈ ಮಾಹಿತಿಯನ್ನಾಧರಿಸಿ ನಮ್ಮ ಕಾರ್ಯಾಚರಣೆ ಶುರು ಮಾಡಿದೆವು.
ದಿನಪೂರ್ತಿ ಜನರಿಂದ ಗಿಜಗಿಡುತ್ತಿದ್ದ ಹರ್ಷಾ ಕಾಂಪ್ಲೆಕ್ಸ್‌ನಲ್ಲಿ ದಾಳಿಯ ಬಳಿಕ ಒಂದಿಷ್ಟು ಜನ ದಟ್ಟಣೆ ಕಡಿಮೆಯಾಗಿದ್ದು ಕಂಡು ಬಂತು. ಸಾಲದ್ದಕ್ಕೆ ಕಳ್ಳ ದಂಧೆಯ ಮೇಲೆ ನಿಗಾ ಇಡಲು ಕಾಂಪ್ಲೆಕ್ಸ್‌ನಲ್ಲಿ ಪೊಲೀಸರನ್ನು ನಿಯೋಜನೆ ಮಾಡಿರುವುದೂ ಗಮನ ಸೆಳೆಯಿತು. ಹಾಗೇ ನಿಧಾನವಾಗಿ ಹರ್ಷಾ ಕಾಂಪ್ಲೆಕ್ಸ್‌ನ ನೆಲ ಮಹಡಿಯಲ್ಲಿರುವ ಅಂಗಡಿ ಪ್ರಗತಿ ಎಂಬ ಅಂಗಡಿಯೊಂದರ ಬಳಿ ಹೋಗಿ ನಿಂತಾಗ ಅಂಗಡಿಯ ಮಾಲೀಕ ಏನು ಬೇಕು? ಎಂದು ಪ್ರಶ್ನಿಸಿದ. ನಮಗೆ ಮೊಬೈಲ್ ಕವರ್ ಬೇಕಿದೆ ಎಂದು ಕೇಳಿದೆವು. ತಕ್ಷಣ ಯಾವ ಕಂಪನಿಯದ್ದು ಎಂದು ಕೇಳಿದಾಗ ಸ್ಯಾಮ್‌ಸಂಗ್ ನೋಟ್-2 ಎಂದೆವು. ಬೆಲೆ ಬಾಳುವ ಮೊಬೈಲ್ ಕವರ್ ಕೇಳಿದ್ದರಿಂದ ಆತ ನಮ್ಮನ್ನು ಸಂಶಯದ ಕಣ್ಣಿಂದ ದಿಟ್ಟಿಸಿದ. ಆ ಕೂಡಲೇ ನಾವು ಕಿಸೆಯಲ್ಲಿದ್ದ ಸ್ಯಾಮ್‌ಸಂಗ್ ನೋಟ್-2 ಮೊಬೈಲ್ ಮೇಜಿನ ಮೇಲಿಟ್ಟಾಗ ಆತನಿಗೆ ನಾವು ಮೊಬೈಲ್ ಕವರ್ ಖರೀದಿ ಮಾಡಲು ಬಂದಿದ್ದೇವೆ ಎಂಬುದು ಖಾತರಿಯಾಯಿತು. ತಕ್ಷಣ ಆತ 1800 ಮುಖಬೆಲೆಯುಳ್ಳ ಸ್ಯಾಮ್‌ಸಂಗ್ ನೋಟ್-2 ಕವರ್ ಕೈಗಿತ್ತ. ಕವರ್ ಕೈಯಲ್ಲಿ ಹಿಡಿದು ಸುತ್ತಿ ಬಳಸಿ ನೋಡಿದೆವು. ಬೆಲೆ ಎಷ್ಟು ಎಂದು ಕೇಳಿದಾಗ ಕವರ್ ಸುತ್ತಾಡಿಸಿ ನೋಡಿ ರು. 1800 ಎಂದ. ತಕ್ಷಣಕ್ಕೆ ನಾವು, ಸಾಹೇಬ್ರ ನಾವು ಖರೀದಿ ಮಾಡುತ್ತಿರುವುದು ಇದೇ ಮೊದಲಲ್ಲ, ನಿಮ್ಮದೇ ಅಂಗಡಿಯಿಂದ ಈ ಮೊಬೈಲ್ ಖರೀದಿಸಿದ್ದು ಎಂದು ನಮ್ಮ ಬಳಿ ಇದ್ದ ಸ್ಯಾಮ್‌ಸಂಗ್ ನೋಟ್-2 ನಕಲಿ ಮೊಬೈಲ್ ಆತನ ಕೈಗಿಟ್ಟೆವು. ತಕ್ಷಣಕ್ಕೆ ಆತ ಮರು ಪ್ರತಿಕ್ರಿಯಿಸಿ, ಎಲ್ಲವೂ ಗೊತ್ತಿರುವಾಗ ಏಕೆ ಕೇಳುತ್ತೀರಿ ಎಂದ, ಅಲ್ಲದೇ, ಜಾಸ್ತಿ ಚೌಕಾಸಿ ಇಲ್ಲ ರು. 500 ಕೊಡಿ ಎಂದ. ಅಷ್ಟಾಗಿಯೂ ನಾವು ಚೌಕಾಶಿ ಮಾಡಲಾರಂಭಿಸಿ ನಿಮ್ಮ ಅಂಗಡಿಗಳ ಮೇಲೆ ದಾಳಿ ನಡೆಯುವುದಕ್ಕಿಂತ 10 ದಿನ ಮೊದಲು ನಾವು ಮೊಬೈಲ್ ಕವರ್ ಖರೀದಿ ಮಾಡಿದ್ದೇವು. ಆಗ ಖರೀದಿಸಿದ ಕವರ್‌ಗೆ ರು. 300 ಕೊಟ್ಟಿದ್ದೆವು ಈಗ ರು. 500 ಎನ್ನುತ್ತೀರಲ್ಲ ಎಂದಾಗ, ಸರಿ ಕೊಡಿ ಎಂದು ರು. 300 ತೆಗೆದುಕೊಂಡ. ಇದಕ್ಕೆ ಬಿಲ್ ಕೊಡುತ್ತೀರಾ ಎಂದು ಕೇಳಿದಾಗ? ಜೋಕ್ ಮಾಡ್ತಾ ಇದ್ದೀರಾ ಎಂದು ದುರುಗುಟ್ಟಿ ಕೇಳಿದ. ನಾವು ಹಾಗೆ ನಕ್ಕು ಸುಮ್ಮನಾಗಿ, ಮತ್ತೊಂದು ಸ್ಯಾಮ್‌ಸಂಗ್ ನೋಟ್-2 ಬೇಕಿದೆ ತೋರಿಸಿ ಎಂದಾಗ ಮೊಬೈಲ್ ತಂದು ನಮ್ಮ ಮುಂದೆ ಇಟ್ಟ. ಬೆಲೆ ಕೇಳಿದಾಗ ನಿಮ್ಮ ಕಿಸೆಯಲ್ಲಿರುವುದಕ್ಕೆ ಎಷ್ಟು ಕೊಟ್ಟಿದ್ದು ಎಲ್ಲವೂ ಗೊತ್ತಿದ್ದೂ ಮತ್ತೆ ಮತ್ತೆ ಕೇಳುತ್ತೀರಲ್ಲಾ ಎಂದಾಗ, ನಾವು ಆಗ ರು. 2500 ಕೊಟ್ಟಿದ್ದು ಎಂದೆವು. ಆದರೆ, ಈ ಬಾರಿ ಕಡಿಮೆಯಾಗಲ್ಲ ರು. 3000 ಫಿಕ್ಸ್ ಎಂದ. ಇನ್ನೆರಡು ದಿನ ಬಿಟ್ಟು ಬರ್ತೇವೆ ಸದ್ಯಕ್ಕೆ ಅಷ್ಟು ದುಡ್ಡಿಲ್ಲ ಎಂದು ಹಾಗೇ ಅವನನ್ನು ಮಾತಿಗೆಳೆದೆವು.
ಕಳೆದ 15 ದಿನಗಳ ಹಿಂದೆ ಪೊಲೀಸರು ದಾಳಿ ಮಾಡಿದ್ದರು, ಸಾಲದ್ದಕ್ಕೆ ಇಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ, ಇಷ್ಟಾಗಿಯೂ ನೀವು ನಕಲಿ ದಂಧೆ ಮಾಡುತ್ತಿದ್ದೀರಲ್ಲಾ ಭಯ ಆಗುವುದಿಲ್ಲವಾ? ಪೊಲೀಸರು ನಿಮ್ಮನ್ನು ಕೇಳುವುದಿಲ್ಲವೇ? ಎಂದು ಪ್ರಶ್ನೆ ಹಾಕಿದಾಗ, ಆತ ಪೊಲೀಸರಿಗೆ ಡೋಂಟ್‌ಕೇರ್ ಎನ್ನುವ ಹಾಗೆ ಮುಖ ಮುರಿದು, ಎಲ್ಲಿಯ ಪೊಲೀಸರು? ಅಲ್ಲಿ ಕುಂತಿದ್ದಾರೆ ನೋಡಿ...ಎಂದು ಪೊಲೀಸರನ್ನು ತೋರಿಸಿದ. ಅವರೇನೂ ಮಾಡುವುದಿಲ್ಲವೇ ಎಂದು ಮರು ಪ್ರಶ್ನಿಸಿಸಿದರೆ, ಸಬ್ ಅಂಡರ್‌ಸ್ಟಾಂಡಿಗ್ ಪೆ ಜಲತಾ ಹೈ...(ಎಲ್ಲವೂ ಹೊಂದಾಣಿಕೆ ಮೇಲೆ ನಡೆಯುತ್ತದೆ) ಎಂದ. ಇವರು ಬರಿ ಪೊಲೀಸ್ ಕಾನ್‌ಸ್ಟೇಬಲ್‌ಗಳು ನಮ್ಮ ಹೊಂದಾಣಿಕೆ ಎನಿದ್ದರೂ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ. ಅವರ ಆಶೀರ್ವಾದ ನಮ್ಮ ಮೇಲೆ ಇರುವ ತನಕ ಯಾರೂ ಏನೂ ಮಾಡಲಾಗದು.
ಆದರೆ, ತಿಂಗಳಿಗೆ ಸರಿಯಾಗಿ ಕಳುಹಿಸುವಲ್ಲಿ ಹೆಚ್ಚು ಕಡಿಮೆಯಾದರೆ ನಾಟಕ ಮಾಡುತ್ತಾರೆ. ಅದಕ್ಕೆ ತಿಂಗಳ ಕ್ಯಾಲೆಂಡರ್‌ನಲ್ಲಿ ಒಂದು ದಿನ ಹೆಚ್ಚು ಕಮ್ಮಿ ಆದೀತು ಆದರೆ ಮಂತ್ಲಿ ಮಾತ್ರ ಇನ್ ಟೈಂ ಕಳುಹಿಸುತ್ತೇವೆ ಎಂದು, ಪೊಲೀಸ್ ಇಲಾಖೆಯಲ್ಲಿ ಕಳ್ಳದಂಧೆ ಮಾಡುವ ತಮ್ಮಂತವರು ಅದೆಂಥಾ ಹಿಡಿತಿವಿಟ್ಟಿದ್ದೇವೆ ಎಂದು ಬೀಗುತ್ತಾ ಹೇಳಿದ. ಆತ ಆಡಿದ ಮಾತನ್ನು ಅದೇ ನಕಲಿ ಸ್ಯಾಮ್‌ಸಂಗ್ ನೋಟ್-2 ಮೊಬೈಲ್‌ನಲ್ಲಿ ವೀಡಿಯೋ ರೆಕಾರ್ಡ್ ಮಾಡಿಕೊಂಡು ಅಲ್ಲಿಂದ ಹೊರಟು ನಿಂತೆವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com