ಸಾಹಿತ್ಯ, ಸಂಗೀತ, ಸಂಘರ್ಷದ ನೆಲೆ ಧಾರವಾಡ

Updated on: 

ಧಾರವಾಡ: ಐದು ದಶಕಗಳಲ್ಲಿ ಹಲವಾರು ಸ್ಥಿತ್ಯಂತರಗಳನ್ನು ಕಂಡ ನಾಡು ಕರ್ನಾಟಕ. ಈ ಸ್ಥಿತ್ಯಂತರಗಳಿಗೆ ಸೂತ್ರಧಾರನಂತೆ ಕೆಲಸ ಮಾಡಿದ್ದು ಧಾರವಾಡ. ಇದು ಒಂದು ರೀತಿಯಲ್ಲಿ ಜಗಳಗಂಟರ ನೆಲ. ಸಾಹಿತ್ಯ, ಸಂಗೀತ ಮತ್ತು ಸಂಘರ್ಷದ ನೆಲವಿದು. ಇಲ್ಲಿ ತಾತ್ವಿಕ ಸಂಘರ್ಷಗಳ ಮೂಲಕವೇ ನಾನೂ ಸೇರಿದಂತೆ ಹಲವರು ಬೆಳೆದಿದ್ದಾರೆ ಎಂದು ಬಂಡಾಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಹೇಳಿದರು.
ಇಲ್ಲಿನ ಕರ್ನಾಟಕ ವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಹಿತ್ಯ ಸಂಭ್ರಮದಲ್ಲಿ ಲೇಖಕರೊಂದಿಗೆ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಧಾರವಾಡಕ್ಕೊಂದು ಜಗಳಗಂಟತನದ ಪರಂಪರೆ ಇದೆ. ಶಂ.ಬಾ. ಜೋಶಿ ಮತ್ತು ದ.ರಾ. ಬೇಂದ್ರೆ ಇದರ ಪಿತಾಮಹರು. ಆ ಪರಂಪರೆಯನ್ನು ನಾವು ಮುಂದುವರಿಸಿದ್ದೇವೆ. ಹೀಗಾಗಿಯೇ ತಾನು ಬೇಂದ್ರೆಯವರನ್ನು ಕಟುವಾಗಿ ಟೀಕಿಸುತ್ತಿದ್ದೆ, ಜಗಳ ಕಾಯುತ್ತಿದ್ದೆ ಎಂದು ಅವರೊಂದಿಗೆ ಜಗಳವಾಡಿದ ಪ್ರಸಂಗವೊಂದನ್ನು ಬಿಚ್ಚಿಟ್ಟರು ಚಂಪಾ.
ನಾನು ಕಾರಣನಲ್ಲ: ಎಸ್.ಎಲ್. ಭೈರಪ್ಪ ಅವರಿಗೆ ಈವರೆಗೂ ಜ್ಞಾನಪೀಠ ಪ್ರಶಸ್ತಿ ಬರಲಿಲ್ಲ. ಅದಕ್ಕೆ ಕಾರಣವೇನು ಎಂದು ಸಾಹಿತ್ಯಾಸಕ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅವರಿಗೆ ಪ್ರಶಸ್ತಿ ಬರದಿರುವುದಕ್ಕೆ ನಾನೇನೂ ಕಾರಣನಲ್ಲ.. ಎಂದು ಉತ್ತರಿಸಿದಾಗ ಎಲ್ಲರ ಮುಖದಲ್ಲಿ ನಗೆ. ಇವತ್ತು ಸಾಹಿತ್ಯಿಕ, ಸಾಂಸ್ಕೃತಿಕ ರಾಜಕಾರಣದ ಕುರಿತು ಬಹಳಷ್ಟು ಚರ್ಚೆ ನಡೆಯುತ್ತಿದೆ. ಪ್ರಶಸ್ತಿಗಳ ಹಿಂದೆ ಕೆಲಸ ಮಾಡುತ್ತಿರುವುದು ರಾಜಕಾರಣ. ಇಷ್ಟಾಗಿಯೂ ಸಾಮಾಜಿಕ ದೃಷ್ಟಿಕೋನ ಕನ್ನಡ ಸಾಹಿತ್ಯದ ಪ್ರಮುಖ ಆಶಯ. ಇದರ ನಡುವೆಯೂ ಸರ್ಕಾರದ ಪ್ರಲೋಭನೆಗೆ ಈಡಾಗಿ ಸ್ವಂತಿಕೆ ಕಳೆದುಕೊಳ್ಳುವವರು ಸಾಹಿತಿಗಳೇ ಅಲ್ಲ. ಸ್ವಂತಿಕೆ, ಅಸ್ಮಿತೆ ಮತ್ತು ಸ್ವಾಭಿಮಾನ ಇಲ್ಲದವರು ಸಾಹಿತಿಗಳು ಎನಿಸಿಕೊಳ್ಳಲು ಅರ್ಹರಲ್ಲ ಎಂದರು.
ಪ್ರಸ್ತುತ ನಡೆಯುತ್ತಿರುವ ಸಾಹಿತ್ಯ ಸಂಭ್ರಮಕ್ಕೆ ಸಾಹಿತ್ಯ ವಲಯದಿಂದ ಬಂದ ಪ್ರತಿರೋಧದ ಕುರಿತು ಪ್ರತಿಕ್ರಿಯಿಸಿದ ಅವರು, ಇಲ್ಲಿ ಹಲವಾರು ಚಳವಳಿಗಳು ಹುಟ್ಟಿವೆ. ಗೋಕಾಕ, ಮಂಡಲ, ದಲಿತ, ಬಂಡಾಯ ಚಳವಳಿಗಳ ಕರ್ಮಭೂಮಿ ಧಾರವಾಡ. ಸಮಕಾಲೀನ ಸಂದರ್ಭದ ತಲ್ಲಣಗಳಿಗೆ ಈ ಸಮಾವೇಶ ಮುಖಾಮುಖಿಯಾಗಬೇಕು. ಆ ಕುರಿತು ಚರ್ಚೆಯಾಗಬೇಕು ಎನ್ನುವುದು ವಿರೋಧ ವ್ಯಕ್ತಪಡಿಸಿದವರ ಆಶಯ. ಇಂತಹ ವಿರೋಧಗಳು ಬೇಕೆಂದು ಹೇಳಿದರು.
ಸಂಕ್ರಮಣ ಸಾಹಿತ್ಯ ಸಮ್ಮೇಳನ: ಸರ್ಕಾರದ ವಿರುದ್ಧ ಸಾಹಿತ್ಯ ಕ್ಷೇತ್ರದ ನಿರೀಕ್ಷಿತ ಪ್ರತಿಭಟನೆ ಕಾಣುತ್ತಿಲ್ಲ ಎಂಬ ಪ್ರಶ್ನೆಗೆ, ಸರ್ಕಾರ ತಪ್ಪು ಮಾಡಿದಾಗ ಮೊದಲು ಅಕ್ಷರ ವಿರೋಧವೇ ಅದು ಎದುರಿಸುತ್ತಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿಲ್ಲ ಎಂದರು. ಹೀಗೆ ಒಂದಿಷ್ಟು ಹಾಸ್ಯ, ಇನ್ನೊಂದಿಷ್ಟು ವ್ಯಂಗ್ಯ ಮತ್ತು ನೇರ, ನಿಷ್ಠುರ ನುಡಿಗಳಿಂದ ಪ್ರಸ್ತುತ ಸಾಹಿತ್ಯದ ಸವಾಲುಗಳು, ತಲ್ಲಣಗಳು, ತಮ್ಮ ಬರಹದ ಬದುಕು, ಜಗಳಗಂಟತನವನ್ನು ಚಂಪಾ ಸಾಹಿತ್ಯಾಸಕ್ತರು ಕೇಳಿದ ಪ್ರಶ್ನೆಗಳ ಉತ್ತರದಲ್ಲಿ ಬಿಚ್ಚಿಟ್ಟರು. ಕೊನೆಗೆ ಎರಡು ಕವನಗಳನ್ನು ಓದಿದರು. ತಮ್ಮಿಂದ ಪ್ರಕಟಗೊಳ್ಳುವ ಸಂಕ್ರಮಣ ಮಾಸಪತ್ರಿಕೆಗೆ ಇನ್ನು ಮೂರು ವರ್ಷದಲ್ಲಿ 50 ವರ್ಷ ತುಂಬುವ ಹಿನ್ನೆಲೆಯಲ್ಲಿ ಬರುವ ಆಗಸ್ಟ್ ತಿಂಗಳಲ್ಲಿ ಇದೇ ಸಭಾಂಗಣದಲ್ಲಿ ಸಂಕ್ರಮಣ ಸಾಹಿತ್ಯ ಸಮ್ಮೇಳನ ಮಾಡುವ ಚಿಂತನೆ ಇದೆ ಎಂದು ಪ್ರಕಟಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com