ಆರೋಗ್ಯಕರ ಸಮಾಜ ನಿರ್ಮಿಸಲು ಶ್ರಮಿಸಿ

Updated on: 

ಧಾರವಾಡ: ಕೂಡಿ ಬಾಳುವ, ಬೆಳೆಯುವ ಆರೋಗ್ಯಕರ ಸಮಾಜ ನಿರ್ಮಾಣವೇ ಭಾರತ ದೇಶದ ಸಂವಿಧಾನದ ಆಶಯ. ಇದನ್ನು ದೇಶದ ನಾಗರಿಕರೆಲ್ಲ ಅರಿತು ನಡೆಯುವ ಅಗತ್ಯವಿದೆ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ 64ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ವಿವಿಧ ದಳಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಪ್ರಜಾತಂತ್ರದ ಬಲವರ್ಧನೆಗೆ ಆರೋಗ್ಯಕರ ಸಮಾಜ ಬೇಕು. ಅಂತಹ ಸಮಾಜಕ್ಕೆ ಮಾರ್ಗದರ್ಶಿ ಪ್ರೇರಣೆ ಆಗಬಲ್ಲ ಪ್ರತಿಭಾವಂತರು ಬೇಕು. ಇದಕ್ಕೆ ಧಾರವಾಡ ಸೂಕ್ತ ವೇದಿಕೆ ಎಂದರು.
ಜಿಲ್ಲೆಯ ಪೈಕಿ ನವಲಗುಂದ, ಧಾರವಾಡ ಹಾಗೂ ಹುಬ್ಬಳ್ಳಿ ತಾಲೂಕಿಗೆ ನೀರಾವರಿ ಅನುಕೂಲದ ದೃಷ್ಟಿಯಿಂದ ತುಪರಿ ಹಳ್ಳ ಯೋಜನೆ ಸಿದ್ಧಪಡಿಸಿದ್ದು, ಬಜೆಟ್‌ನಲ್ಲಿ ಈ ಯೋಜನೆ ಅಗತ್ಯ ಅನುದಾನ ಒದಗಿಸಲಾಗುವುದು ಎಂದ ಅವರು, ರಾಜ್ಯ ಸರ್ಕಾರದ ಯೋಜನೆ, ಅನುಷ್ಠಾನ ಮತ್ತು ಜಿಲ್ಲೆಯಲ್ಲಿ ಕೈಕೊಂಡ ಅಭಿವೃದ್ಧಿ ಕಾಮಗಾರಿಗಳನ್ನು ಸಚಿವ ಬೊಮ್ಮಾಯಿ ವಿವರಿಸಿದರು.
ಪ್ರಶಸ್ತಿ ಪ್ರದಾನ: ಗಣರಾಜ್ಯೋತ್ಸವದ ಅಂಗವಾಗಿ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪಿ.ಎಸ್. ಹಿರೇಮಠ, ಕೃಷಿ ವಿವಿಯ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಎಸ್.ಪಿ. ಹೊಸಮನಿ, ತೋಟಗಾರಿಕೆ ಇಲಾಖೆ ಅಧಿಕಾರಿ ಕವಿತಾ ಎ.ಎಸ್., ಜಿಲ್ಲಾ ಆಸ್ಪತ್ರೆಯ ಅಶೋಕ ಬೆಟದೂರ ಮತ್ತು ಹಣಕಾಸು ಇಲಾಖೆ ಅಧಿಕಾರಿ ಅಶೋಕ ಗೌರೋಜಿ ಅವರಿಗೆ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಸಚಿವರು ಪ್ರದಾನ ಮಾಡಿದರು.
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಚಂದ್ರಕಾಂತ ಬೆಲ್ಲದ, ಸೀಮಾ ಮಸೂತಿ, ಜಿಪಂ  ಅಧ್ಯಕ್ಷೆ ರತ್ನವ್ವ ಕಳ್ಳಿಮನಿ, ಉಪಾಧ್ಯಕ್ಷ ಫಕ್ಕೀರಪ್ಪ ಜಕ್ಕಣ್ಣವರ, ಉಪ ಮೇಯರ್ ಭಾರತಿ ಪಾಟೀಲ, ಜಿಲ್ಲಾಧಿಕಾರಿ ಸಮೀರ ಶುಕ್ಲ, ಜಿಪಂ ಸಿಇಓ ಪಿ.ಎ. ಮೇಘಣ್ಣವರ, ಪೊಲೀಸ್ ಆಯುಕ್ತ ಬಿ.ಎ. ಪದ್ಮನಯನ, ಅಪರ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೇರಿದಂತೆ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com