ಧಾರವಾಡ: ಕಥೆಯ ಆರಂಭ ಹೇಗೆ ಅನಿರೀಕ್ಷಿತವೋ ಹಾಗೆಯೇ ಅಂತ್ಯವೂ ಅಷ್ಟೇ ಅನಿರೀಕ್ಷಿತವಾಗಿರುತ್ತದೆ. ಘಟನೆಯೊಂದು ವಿವಿಧ ಆಯಾಮಗಳಲ್ಲಿ ಪರಿಣಾಮಕಾರಿಯಾಗಿ ಅನಾವರಣಗೊಳ್ಳುವ ಸಂದರ್ಭವೇ ಕಥೆ ಹುಟ್ಟುವ ಸಮಯ ಎಂದು ಕಥೆಗಾರ ಅಮರೇಶ ನುಗಡೋಣಿ ಹೇಳಿದರು.
ಕರ್ನಾಟಕ ವಿವಿ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಭಾನುವಾರ ನಡೆದ ಸಾಹಿತ್ಯ ಸಂಭ್ರಮದಲ್ಲಿ ಕಥೆ ಹುಟ್ಟುವ ರೀತಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಥೆ ಹೀಗೆ ಹುಟ್ಟುತ್ತದೆ ಎಂದು ಹೇಳುವುದು ಕಷ್ಟ. ಯಾವುದೋ ಒಂದು ಜೀವಪರವಾದ ಘಟನೆ ಮನಸ್ಸಿನ ಮೂಲೆಯಲ್ಲಿ ಕುಳಿತು ಪಕ್ವವಾಗಿ ಹೊರಬರುವ ಒತ್ತಡ ಚೇತೋಹಾರಿ. ಘಟನೆ, ಯೋಚನೆಗೆ ಒಂದು ಚೌಕಟ್ಟು ಒದಗಿಸಿ ರೂಪ ಕೊಡಬೇಕಾದದ್ದು ಕಥೆಗಾರನ ಕೌಶಲ್ಯ ಎಂದರು.
ತಮ್ಮೂರಿನಲ್ಲಿ ಬಾಲ್ಯದಲ್ಲಿ ಕಂಡ ದೃಶ್ಯ, ಎದುರಾದ ವ್ಯಕ್ತಿಗಳನ್ನೇ ಕಥೆಯ ಪಾತ್ರವಾಗಿಸಿ ಅದಕ್ಕೆ ಪ್ರತಿಯಾಗಿ ಅವರಿಂದ ಮತ್ತು ಮನೆಯವರಿಂದ ಬುದ್ಧಿ ಹೇಳಿಸಿಕೊಂಡಿದ್ದನ್ನು ನೆನಪಿಸಿಕೊಂಡರು.
ಕಥೆ ವಾಸ್ತವ ಮತ್ತು ಕಲ್ಪನೆಗಳ ಮಿಶ್ರಣ ಎಂಬುದು ವೈದೇಹಿ ಮತ್ತು ಲೋಹಿತ ನಾಯ್ಕರರ ವಾದವಾದರೆ ಕಥೆಗೆ ವಾಸ್ತವಾಂಶವೇ ಪ್ರಮುಖ ವಾಸ್ತವವನ್ನು ರಂಜನೀಯವಾಗಿಸಲು ಕಲ್ಪನೆ ಬೇಕಷ್ಟೆ ಎಂಬುದು ಅಮರೇಶ ನುಗಡೋಣಿಯವರ ಅಭಿಪ್ರಾಯ.
ಕಥೆಗಾರ್ತಿ ವೈದೇಹಿ ಮಾತನಾಡಿ, ಕಥೆ ಕೇವಲ ವಾಸ್ತವಿಕವಾಗಿದ್ದರೆ ಅದು ವರದಿಯಾಗುತ್ತದೆ. ಕೇವಲ ಕಲ್ಪನೆಯಾಗಿದ್ದರೆ ಸುಳ್ಳಾಗುತ್ತದೆ. ಹೀಗಾಗಿ ಕಥೆಯೆಂದರೆ ಅದು ಕಲ್ಪನೆ ಮತ್ತು ವಾಸ್ತವದ ಸರಿಯಾದ ಮಿಶ್ರಣವಾಗಿರಬೇಕು. ಬಹಳಷ್ಟು ಕಥೆಗಳಲ್ಲಿ ಅಂತ್ಯ ನಿರೀಕ್ಷಿತವಾಗಿರುವುದಿಲ್ಲ.
ಬರೆಯುತ್ತ ಹೋದಂತೆ ಕಥೆ ರೂಪುಗೊಳ್ಳುತ್ತ ಹೋಗುತ್ತದೆ. ಜೊತೆಗೆ ಕಥೆಯ ಅಂತ್ಯ ಕೂಡಾ. ಕಥೆಗಾರ ನಿರೀಕ್ಷಿಸಿದ ಅಂತ್ಯ ಕತೆಗೆ ದೊರೆಯುವುದು ಹೆಚ್ಚು ಎಂದರು.
ಇನ್ನೋರ್ವ ಕಥೆಗಾರ ಲೋಹಿತ ನಾಯ್ಕರ, ನನ್ನ ಬಹುತೇಕ ಕಥೆಗಳು ಕಾನೂನಿನ ಸಮಸ್ಯೆಗಳು ಮತ್ತು ಮಾನವ ಹಕ್ಕುಗಳ ಹಿನ್ನೆಲೆಯಲ್ಲಿ ರೂಪುಗೊಂಡಿವೆ. ಅದಕ್ಕೆ ನನ್ನ ಅಧ್ಯಯನವೂ ಕಾರಣವಾಗಿರಬಹುದು. ನಾನು ಕಥೆ ಬರೆಯುವಾಗ ಎಲ್ಲವನ್ನೂ ಯೋಚಿಸಿ, ಯೋಜಿಸಿ ಬರೆಯುತ್ತೇನೆ. ಹೀಗಾಗಿ ನನ್ನ ಕಥೆಗಳಲ್ಲಿ ಅನಿರೀಕ್ಷಿತ ಬದಲಾವಣೆಗಳು ಬರುವುದು ಕಡಿಮೆ ಎಂದು ಹೇಳಿದರು.