ಧಾರವಾಡ: ಕಳೆದ ಐದು ವರ್ಷಗಳಲ್ಲಿ ಇಡೀ ರಾಜ್ಯ ಅದರಲ್ಲಿಯೂ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಮಾಡಿದ ಸಾಧನೆಯೇ ಮಿನಿ ಮಹಾಸಮರ ಎಂದೇ ಬಿಂಬಿತವಾದ ಸ್ಥಳೀಯ ಸಂಸ್ಥೆಗಳ ಚುನಾವಣೆ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಬಿಜೆಪಿ ನೀಡಿದ ಆಡಳಿತವೇ ನಮ್ಮ ಅಭ್ಯರ್ಥಿಗಳಿಗೆ ಬಂಡವಾಳವಾಗಲಿದ್ದು, ಕಾಂಗ್ರೆಸ್, ಜೆಡಿಎಸ್ ಇನ್ನಿತರ ಪಕ್ಷಗಳಿಗೆ ನಮ್ಮ ಸಾಧನೆಯೇ ಮುಳುವಾಗಲಿದೆ. ಈ ಹಿನ್ನೆಲೆಯಲ್ಲಿ ಹು-ಧಾ ಅವಳಿ ನಗರದ 67 ವಾರ್ಡ್ಗಳ ಪೈಕಿ 50ಕ್ಕೂ ಹೆಚ್ಚು ವಾರ್ಡ್ಗಳಲ್ಲಿ ಬಿಜೆಪಿ ಸದಸ್ಯರು ಗೆಲುವಿನ ನಗೆ ಬೀರಲಿದ್ದು, ಈ ಬಾರಿಯೂ ಪಾಲಿಕೆ ಚುಕ್ಕಾಣಿ ಬಿಜೆಪಿಯೇ ಹಿಡಿಯಲಿದೆ.
'ಕನ್ನಡಪ್ರಭ'ದ ವಿಶೇಷ ಸಂದರ್ಶನದಲ್ಲಿ ಚುನಾವಣೆ ಕುರಿತು ಭರವಸೆಯ ಮಾತುಗಳನ್ನಾಡಿದ ಶಾಸಕಿ ಸೀಮಾ ಮಸೂತಿ, ಹು-ಧಾ ಅವಳಿ ನಗರಕ್ಕೆ ಹಿಂದೆಂದೂ ಯಾವ ಸರ್ಕಾರ ನೀಡದಷ್ಟು ಐದು ವರ್ಷಗಳಲ್ಲಿ ರು. 676 ಕೋಟಿ ಅನುದಾನ ಒದಗಿಸಿ ಬಿಜೆಪಿ ಸರ್ಕಾರ ದಾಖಲೆ ಸೃಷ್ಟಿಸಿದೆ. ಅಲ್ಲದೇ, ಸ್ಥಳೀಯ ಸಂಸ್ಥೆಗಳಿಗೂ ಕೋಟ್ಯಾಂತರ ವಿಶೇಷ ಅನುದಾನ ನೀಡುವ ಮೂಲಕ ಬಿಜೆಪಿ ತಳಮಟ್ಟದ ಕೆಲಸ ಮಾಡಿ ಜನರಿಗೆ ಹತ್ತಿರವಾಗಿದೆ. ಅಭಿವೃದ್ಧಿಯ ಕಡೆ ಮುಖ ಮಾಡದ ನವಲಗುಂದ, ಅಣ್ಣಿಗೇರಿ, ಕುಂದಗೋಳ, ಕಲಘಟಗಿ ತಾಲೂಕುಗಳು ಸಹ ಇಂದು ಹೊಸ ಮುಖ ಹೊತ್ತು ನಿಂತಿವೆ.
ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯ, ರಸ್ತೆ ಅಭಿವೃದ್ಧ್ದಿ, ಒಳಚರಂಡಿ, ಚರಂಡಿ ನಿರ್ಮಾಣ, ಕೆರೆಗಳ ಅಭಿವೃದ್ಧಿ ಹಾಗೂ ಸೌಂದರ್ಯೀಕರಣ, ಉದ್ಯಾನವನಗಳ ಅಭಿವೃದ್ದಿ, ನೈರ್ಮಲೀಕರಣ ಸೇರಿದಂತೆ ಎಲ್ಲ ರೀತಿಯ ಅಭಿವೃದ್ಧಿಯಾದ ಕಾರಣ ಈ ಬಾರಿ ಮತದಾರರ ಮತ್ತೊಮ್ಮೆ ಕೈಹಿಡಿಯಲಿದ್ದಾನೆ. 8 ರಿಂದ 10 ದಿನಕ್ಕೆ ಬರುತ್ತಿದ್ದ ಕುಡಿಯುವ ನೀರು ಪ್ರಸ್ತುತ ಎಂಟು ವಾರ್ಡ್ಗಳಲ್ಲಿ 24 ಗಂಟೆ ನಿರಂತರ ಹರಿಯುತ್ತಿದೆ. ಎಲ್ಲ ವಾರ್ಡ್ಗಳಿಗೂ ಈ ಯೋಜನೆ ವಿಸ್ತರಿಸಲು ಮಲಪ್ರಭಾ 3ನೇ ಹಂತದ ಕಾಮಗಾರಿ 151 ಕೋಟಿ ವೆಚ್ಚದಲ್ಲಿ ಮುಗಿಸುತ್ತಿದ್ದು, ಕೆಲವೇ ದಿನಗಳಲ್ಲಿ 67 ವಾರ್ಡ್ಗಳಲ್ಲಿ ನಿರಂತರ ನೀರು ಬರಲಿದೆ.
ಇಷ್ಟಾಗಿಯೂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸ್ವತಃ ಸಿಎಂ ಶೆಟ್ಟರ್ ಆಯಾ ಭಾಗದ ಶಾಸಕರುಗಳು ಅಭ್ಯರ್ಥಿಗಳ ಜೊತೆಗೆ ಮನೆ ಮನೆಗೆ ಹೋಗಿ ಮತದಾರರಿಗೆ ತಮ್ಮ ಸಾಧನೆ ವಿವರಿಸುವುದಲ್ಲದೇ, ಮತ್ತಷ್ಟು ಸಾಧನೆ ಮಾಡಲು ಅವಕಾಶ ಕೊಡಿ ಎಂದು ಪ್ರಚಾರ ನಡೆಸುತ್ತಿದ್ದೇವೆ. ರಾಜ್ಯ ಬಿಜೆಪಿ ಸರ್ಕಾರ ಜನತೆಗೆ ಮಾಡಿದ ಕೆಲಸಕ್ಕೆ ಮತ ನೀಡುವ ಮೂಲಕ ಋಣ ತೀರಿಸಬೇಕಿದೆ. ನನ್ನ ವಿಧಾನಸಭಾ ಕ್ಷೇತ್ರಕ್ಕೆ ಧಾರವಾಡದ 3 ರಿಂದ 10ನೇ ವಾರ್ಡಿಗಳು ಬರುತ್ತಿದ್ದು, ಈಗಾಗಲೇ ಅಭ್ಯರ್ಥಿಗಳೊಂದಿಗೆ ಪ್ರಚಾರ ಆರಂಭಿಸಿದ್ದೇನೆ. ಕಳೆದ ಬಾರಿ 3 ವಾರ್ಡ್ಗಳಲ್ಲಿ ಮಾತ್ರ ಬಿಜೆಪಿ ಸದಸ್ಯರಿದ್ದರು. ಈ ಬಾರಿ ಬಿಜೆಪಿ ಸಾಧನೆ ಗಮನಿಸಿ 6 ವಾರ್ಡ್ಗಳಲ್ಲಿ ಬಿಜೆಪಿ ಸದಸ್ಯರು ಗೆಲ್ಲುತ್ತಾರೆಂಬ ಭರವಸೆ ನನಗಿದೆ.
ಅವಳಿ ನಗರದಲ್ಲಿ ಪ್ರಜ್ಞಾವಂತ ಮತದಾರರಿದ್ದು, ಹಣ, ಹೆಂಡ ಹಾಗೂ ಇನ್ನಿತರೆ ಆಮಿಷಗಳಿಗೆ ಬಲಿಯಾಗಿ ಮತ ಕೊಡುವುದಿಲ್ಲ. ಕೆಲಸ, ಕಾರ್ಯ, ಅಭ್ಯರ್ಥಿಗಳ ಹಿನ್ನೆಲೆ, ಸಾಧನೆ ಗಮನಿಸಿ ಮತ ಅರ್ಪಿಸುತ್ತಾರೆ. ಬಿಜೆಪಿ ಅಭ್ಯರ್ಥಿಗಳಿಗೆ ಮತ ಪಡೆಯುವ ಎಲ್ಲ ಅರ್ಹತೆಗಳಿದ್ದು, ಕಾಂಗ್ರೆಸ್, ಜೆಡಿಎಸ್, ಹೊಸದಾಗಿ ಹುಟ್ಟಿಕೊಂಡಿರುವ ಕೆಜೆಪಿ, ಬಿಎಸ್ಸಾರ್ ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳು ಯಾವ ಮುಖ ಹೊತ್ತು ಮತ ಕೇಳುತ್ತಾರೋ. ಒಟ್ಟಿನಲ್ಲಿ ಈ ಚುನಾವಣೆ ಬರುವ ವಿಧಾನಸಭಾ ಚುನಾವಣೆಗೂ ದಾರಿ ಮಾಡಿಕೊಡಲಿದ್ದು, ಬಿಜೆಪಿ ಮಾತ್ರ ಉತ್ತಮ ಫಲಿತಾಂಶ ಪಡೆಯಲಿದೆ ಎಂದರು.