ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 5
ರಾಜ್ಯದಲ್ಲಿಯೇ ಮೊದಲನೆಯಾದಾಗಿ ಪತ್ತೆದಾರಿ ಸಾಹಿತ್ಯವನ್ನು ಉತ್ತರ ಕರ್ನಾಟಕದ ಶೈಲಿಯಲ್ಲಿ ಪ್ರಚಾರ ಪಡಿಸಿದವರು ಸುದರ್ಶನ ದೇಸಾಯಿ ಎಂದು ಸಾಹಿತಿ ಮೋಹನ ನಾಗಮ್ಮನವರ ಇಲ್ಲಿ ಹೇಳಿದರು.
ವಿದ್ಯಾವರ್ಧಕ ಸಂಘದ ಸಾಹಿತ್ಯ ಮಂಟಪ ಸೋಮವಾರ ಏರ್ಪಡಿಸಿದ್ದ ಮಾರ್ತಾಂಡಪ್ಪ ಕತ್ತಿ ಬರೆದ ದಿ. ಸುದರ್ಶನ ದೇಸಾಯಿ ಅವರ ಪತ್ತೆದಾರಿ ಕಾದಂಬರಿ ರಂಗ ಸಾಹಿತ್ಯ -1 ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ದೇಸಾಯಿ ಅವರ ಸಾಹಿತ್ಯ ಓದುತ್ತಾ ಹೋದರೆ ಸಾಹಿತ್ಯದ ವಿವಿಧ ಮಜಲುಗಳ ಪರಿಚಯವಾಗುತ್ತದೆ. ಅವರ ಸಾಹಿತ್ಯದಲ್ಲಿನ ವಾಸ್ತವಿಕತೆಯ ಪ್ರಜ್ಞೆ, ವೈಚಾರಿಕ ನೆಲೆಗಟ್ಟನ್ನು, ಸಮಾಜದಲ್ಲಿನ ಕಳಕಳಿಯ ಮನೋಭಾವನೆಯನ್ನು ಎತ್ತಿ ತೋರಿಸುತ್ತವೆ. ಅಲ್ಲದೆ, ಅವರ ಹೆಸರಿನಲ್ಲಿ ವಿಚಾರ ಸಂಕಿರಣ, ಪತ್ತೆದಾರಿ ಸಾಹಿತ್ಯೋತ್ಸವ, ಪತ್ತೆದಾರಿ ನಾಟಕೋತ್ಸವ ನಡೆಸಬೇಕು ಎಂದರು.
ಹೊಸಪೇಟೆಯ ಆಕಾಶವಾಣಿ ಕಾರ್ಯಕ್ರಮ ಅಧಿಕಾರಿ ಅನಿಲ ದೇಸಾಯಿ ಮಾತನಾಡಿ, ದೇಸಾಯಿಯವರ ನಾಟಕ ಕೃತಿಗಳಲ್ಲಿ ಹೆಚ್ಚು ಮನೋವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿದ್ದರೂ ಸಾಮಾನ್ಯ ಓದುಗನ ಮನಸ್ಸನ್ನು ತಟ್ಟುತ್ತವೆ. ಪತ್ತೆದಾರಿ ನಾಟಕ ಒಂದು ಪ್ರಕಾರವನ್ನು ಹುಟ್ಟುಹಾಕಿದ ಉತ್ತರ ಕರ್ನಾಟಕದ ಮೊದಲಿಗರು ಸುದರ್ಶನ ದೇಸಾಯಿ ಎಂದರು.
ಸುದರ್ಶನ ದೇಸಾಯಿ ಅವರ ಪತ್ನಿ ಸುಜಾತಾ ದೇಸಾಯಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾಹಿತಿ ನಿಂಗಪ್ಪ ಕುಂಟಿ ಅಧ್ಯಕ್ಷತೆ ವಹಿಸಿದ್ದರು. ಡಾ. ವಿ.ಬಿ. ನಿಟಾಲಿ, ಡಾ. ಪಿ. ರಹಮ್ಮತ್ವುಲ್ಲಾ, ಎಸ್.ಎಸ್. ಚಿಕ್ಕಮಠ, ಗಂಗಾಧರ ಮಠಪತಿ, ಪ್ರಮೀಳಾ ಜಕ್ಕಣ್ಣವರ, ಸುರೇಶ ಬೆಟಗೇರಿ, ಪ್ರಭು ಹಂಚಿನಾಳ, ಎಸ್. ಎಂ. ದಾನಪ್ಪಗೌಡ, ಡಾ. ಟಿ. ತಿಪ್ಪೇಸ್ವಾಮಿ, ಎಲ್. ಪುಟ್ಟಣ್ಣಯ್ಯ, ಯಾಸ್ಮೀನಾಬೇಗಂ ವಾಲೀಕಾರ, ಕೆ.ಎಚ್. ನಾಯಕ, ರಮಾನಂದ ಶಿಂಧೆ, ಕೆ. ಜಗುಚಂದ್ರ, ಎಫ್.ಬಿ. ಕಣವಿ, ಎಸ್.ಎಂ. ಹೂಗಾರ ಇದ್ದರು.