ಮತದಾರರ ಯಾದಿಯಿಂದ ಮತದಾರರ ಹೆಸರು ಕೈಬಿಟ್ಟು ಹೋಗಿರುವ ಬಗ್ಗೆ ಪಾಲಿಕೆ ಚುನಾವಣೆಯ ಮುನ್ನಾದಿನ ಅಂದರೆ ಬುಧವಾರದವರೆಗೂ ಯಾವುದೊಂದು ದೂರು ತಮಗೆ ಬಂದಿರಲಿಲ್ಲ. ಚುನಾವಣೆ ದಿನದಂದೂ 3-4 ಕಡೆಗಳಲ್ಲಿ ಕೆಲವಷ್ಟು ಮತದಾರರ ಹೆಸರು ಕೈಬಿಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದಕ್ಕೆ ಸಕಾರಣಗಳೇನು ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುವುದು. ಮತದಾರರ ಪಟ್ಟಿಯಿಂದ ಮತದಾರರ ಹೆಸರು ತೆಗೆದು ಹಾಕುವಲ್ಲಿ ಹತ್ತು ಹಲವಾರು ಕಾರಣಗಳಿವೆ. ಚುನಾವಣಾ ಸಿಬ್ಬಂದಿ, ಪಟ್ಟಿ ತಯಾರಿಸುವ ಮೊದಲು ಆಯಾ ಮತದಾರರು ಆಯಾ ಪ್ರದೇಶಗಳಲ್ಲಿ ಕಾಯಂ ಆಗಿ ವಾಸವಾಗಿದ್ದಾರೋ ಇಲ್ಲವೋ ಎಂಬುದನ್ನು ಪರಿಶೀಲಿಸಿರುತ್ತಾರೆ. ಇನ್ನೂ ಕೆಲ ಪ್ರಕರಣಗಳಲ್ಲಿ ಮಹಿಳಾ ಮತದಾರರು ಮದುವೆಯಾಗಿ ಗಂಡನ ಮನೆಗೆ ಹೋಗಿದ್ದಾಗಲೂ ಅಂಥವರ ಹೆಸರನ್ನು ಮೊದಲಿನ ಮತಪಟ್ಟಿಯಿಂದ ತೆಗೆದು ಹಾಕಲಾಗಿರುತ್ತದೆ. ಪಟ್ಟಿಯಿಂದ ಕೈಬಿಟ್ಟಿರುವ ಹೆಸರುಗಳನ್ನು ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಮತ್ತಿತರ ಕಚೇರಿಗಳಲ್ಲಿ ಸಾರ್ವಜನಿಕರ ಅವಗಾಹನೆಗೆ ಪ್ರಕಟಿಸಲಾಗಿರುತ್ತದೆ. ಅಲ್ಲದೇ, ಮತದಾರರ ಪಟ್ಟಿಯಿಂದ ಮತದಾರರ ಹೆಸರು ಕೈಬಿಟ್ಟಿರುವ ಬಗ್ಗೆ ರಾಜಕೀಯ ಪಕ್ಷಗಳಿಗೆ ಮೊದಲೇ ಪಟ್ಟಿ ಬಿಡುಗಡೆ ಮಾಡಲಾಗಿರುತ್ತದೆ. ಪಕ್ಷೇತರ ಅಭ್ಯರ್ಥಿಗಳು ಇಂತಹ ಪಟ್ಟಿ ಪಡೆಯಲು ಬಯಸಿದ್ದಲ್ಲಿ ನಿಗದಿತ ಶುಲ್ಕ ಭರಿಸಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ. ವಿವಿಧ ರಾಜಕೀಯ ಪಕ್ಷಗಳಿಗೆ ಮೊದಲೇ ಪಟ್ಟಿ ನೀಡಿದಾಗ ಯಾವುದೇ ರೀತಿಯ ಆಕ್ಷೇಪಗಳು ಬಂದಿರಲಿಲ್ಲ. ಮತಯಂತ್ರಗಳು ಕೆಲವಡೆ ಕೈಕೊಟ್ಟಿದ್ದು ನಿಜ. ನಂತರ ತಕ್ಷಣ ಸರಿಪಡಿಸಿಕೊಂಡು ಮತದಾನಕ್ಕೆ ಅನುಕೂಲ ಕಲ್ಪಿಸಲಾಗಿದೆ.
- ಸಮೀರ್ ಶುಕ್ಲಾ, ಜಿಲ್ಲಾಧಿಕಾರಿ