ಹುಬ್ಬಳ್ಳಿ: ಸೋಮವಾರ ಬೆಳಗಿನ ಜಾವ ವಿದ್ಯಾನಗರ ಪ್ರದೇಶದಲ್ಲಿ ಜನಜಂಗುಳಿ. ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿನ ಸುದ್ದಿ ತಿಳಿದುಕೊಳ್ಳುವ ತವಕ. ಇನ್ನೂ ಕೆಲವರ ಮೊಗದಲ್ಲಿ ಆಂತಕದ ಛಾಯೆ. ಪೊಲೀಸರ ಸರ್ಪಗಾವಲು. ಮಹಿಳಾ ಪಾಲಿಟೆಕ್ನಿಕ್ನಲ್ಲಿ ಆಯೋಜಿಸಲಾಗಿದ್ದ ಪಾಲಿಕೆ ಚುನಾವಣೆ ಮತ ಎಣಿಕೆ ವೇಳೆ ಕಂಡು ಬಂದ ದೃಶ್ಯಗಳಿವು. ಮತ ಎಣಿಕೆ ಕೇಂದ್ರದ ಸಮೀಪ ವಿವಿಧ ಪಕ್ಷದ ಸಾವಿರಾರು ಕಾರ್ಯಕರ್ತರು ನೆರೆದಿದ್ದರು. ಪೊಲೀಸ್ ಇಲಾಖೆ, ಮಹಾನಗರದಲ್ಲಿ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿತ್ತು. ಹೀಗಾಗಿ, ವಿಜೇತ ಅಭ್ಯರ್ಥಿಗಳ ಹೆಸರು ಘೋಷಣೆ ಆದಾಗ ಕಾರ್ಯಕರ್ತರು ವಿಜಯೋತ್ಸವ ಆಚರಿಸಲು ಮೊದಮೊದಲು ಹಿಂದೇಟು ಹಾಕಿದರು. ಬಿಸಿಲು ಏರುತ್ತಿತ್ತು. ತಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಫಲಿತಾಂಶ ಪ್ರಕಟವಾಗುತ್ತಿದಂತೆಯೇ ಕಾರ್ಯಕರ್ತರು ಪಟಾಕಿ ಸಿಡಿಸಿ ಗುಲಾಲು ಎರಚಾಡಿಕೊಂಡು ವಿಜಯೋತ್ಸವ ಆಚರಿಸಿದರು.