ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 11
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ನಡೆದ ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಕೆಲ ಪ್ರತಿಷ್ಠಿತ ಮಾಜಿ ಪುರಪಿತೃಗಳು ಗಂಟುಮೂಟೆ ಕಟ್ಟಿದರೆ, ಇನ್ನೂ ಕೆಲವರು ಗೆಲ್ಲಲು ಹರಸಾಹಸ ಪಡಬೇಕಾಯಿತು.
ಕಳೆದ ಅವಧಿಯಲ್ಲಿದ್ದ ಮೇಯರ್, ಉಪ ಮೇಯರ್ ಸ್ಥಾನ ಅಲಂಕರಿಸಿದವರಲ್ಲಿ ಕೆಲವರು ಈ ಬಾರಿ ಚುನಾವಣೆಯಲ್ಲಿ ಸೋಲನುಭವಿಸುವ ಮೂಲಕ ಅಚ್ಚರಿ ಮೂಡಿಸಿದರು. ಪ್ರತಿಪಕ್ಷ ಸ್ಥಾನ ಅಲಂಕರಿಸಿದ್ದ ಕಾಂಗ್ರೆಸ್ನ ಪಿ.ಕೆ. ರಾಯನಗೌಡ್ರ, ದೀಪಕ ಚಿಂಚೋರೆ, ಗಣೇಶ ಟಗರಗುಂಟಿ ಹಾಗೂ ದಶರಥ ವಾಲಿ ಮತ್ತೊಮ್ಮೆ ಚುನಾಯಿತರಾದರು.
ಬಿಜೆಪಿಯಿಂದ ಕೆಜೆಪಿಗೆ ಹಾರಿದ್ದ ಯಾವೊಬ್ಬ ಅಭ್ಯರ್ಥಿಗಳೂ ಗೆಲುವು ಸಾಧಿಸಲಿಲ್ಲ. ಆದರೆ, ವಾರ್ಡ್ ನಂ. 50ರಲ್ಲಿ ಲಕ್ಷ್ಮೀಬಾಯಿ ಬಿಜವಾಡ ಜಯ ಸಾಧಿಸುವ ಮೂಲಕ ಕೆಜೆಪಿಯ ಮೊದಲ ಖಾತೆ ತೆರೆದರು. 24 ಹಾಗೂ 63 ವಾರ್ಡ್ಗಳು ಪಕ್ಷೇತರರ ಪಾಲಾದವು. ಕಳೆದ ಆಡಳಿತಾವಧಿಯ ಅಂತಿಮ ಅವಧಿಯಲ್ಲಿ ಸಭಾ ನಾಯಕರಾಗಿದ್ದ ಬಿಜೆಪಿಯ ಪ್ರಕಾಶ ಗೋಡಬೋಲೆ, ಎರಡು ಬಾರಿ ಉಪಮೇಯರ್ ಆಗಿದ್ದ ಭಾರತಿ ಪಾಟೀಲ, ಹಿರಿಯ ಸದಸ್ಯ ರಾಘವೇಂದ್ರ ರಾಮದುರ್ಗ, ಬಿಜೆಪಿಯ ಮೊದಲ ಮೇಯರ್ ರಾಧಾಬಾಯಿ ಸಫಾರೆ ಸೋಲುವ ಮೂಲಕ ಬಿಜೆಪಿಗೆ ಭಾರೀ ಆಘಾತವನ್ನೇ ನೀಡಿದರು. ವಾರ್ಡ್ ನಂ. 45ರಿಂದ ಬಿಜೆಪಿ ಅಭ್ಯರ್ಥಿ ಮಾರುತಿ ಹಾಲಹರವಿ ಸೋಲುವ ಮೂಲಕ ಅವರ ಸಹೋದರ ವೀರಭದ್ರಪ್ಪ ಹಾಲಹರವಿಗೆ ಇರುಸುಮುರುಸು ಮೂಡಿಸಿದರು.
ಮುಖಭಂಗ: ಇನ್ನೂ ಬಿಜೆಪಿ ತೊರೆದು, ಕೆಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ ಅಶೋಕ ನಿಡವಣಿ, ಹೂವಪ್ಪ ದಾಯಗೋಡಿ, ಮಾಜಿ ಮೇಯರ್ ವೆಂಕಟೇಶ ಮೇಸ್ತ್ರಿ, ರಾಜಶ್ರೀ ಜಡಿ, ಅಜ್ಜಪ್ಪ ಬೆಂಡಿಗೇರಿ ಮುಖಭಂಗಕ್ಕೀಡಾದರು. ವಾರ್ಡ್ ನಂ.2ರ ಬಿಜೆಪಿ ಅಭ್ಯರ್ಥಿ ಮಾಜಿ ಮೇಯರ್ ಪೂರ್ಣಾ ಪಾಟೀಲ, ಈ ಹಿಂದೆ ಎರಡು ಬಾರಿ ಪ್ರತಿಪಕ್ಷ ನಾಯಕರಾಗಿದ್ದ ಕಾಂಗ್ರೆಸ್ನ ದೀಪಕ ಚಿಂಚೋರೆ, ಬಿಜೆಪಿಯ ವಿಜಯಾನಂದ ಶೆಟ್ಟಿ, ಈ ಹಿಂದಿನ ಚುನಾವಣೆಯಲ್ಲಿ ಸೋತಿದ್ದ ಕಾಂಗ್ರೆಸ್ನ ಸುಭಾಷ ಶಿಂಧೆ, ಮಾಜಿ ಪ್ರತಿಪಕ್ಷ ನಾಯಕ ಕಾಂಗ್ರೆಸ್ನ ಪಪ್ಪಿ ರಾಯನಗೌಡರ, ಸ್ಮಿತಾ ಅಶೋಕ ಜಾಧವ ಈ ಬಾರಿಯೂ ಗೆಲುವು ಸಾಧಿಸಿದರು.
ಸಿಎಂ ಶೆಟ್ಟರ್ ಅವರ ನಿವಾಸ ಬದಾಮಿ ನಗರ ಮಧುರಾ ಕಾಲೋನಿ ಇರುವ ವಾರ್ಡ್ ನಂ. 31ರಲ್ಲಿ ಬಿಜೆಪಿ ಅಭ್ಯರ್ಥಿ ಆದರ್ಶ ಉಪ್ಪಿನ ಜಯ ಸಾಧಿಸುವ ಮೂಲಕ ಮುಖ್ಯಮಂತ್ರಿಯವರ ಮಾನ ಉಳಿಸಿದರು.
ವಾರ್ಡ್ ನಂ. 33ರಲ್ಲಿ ಬಿಜೆಪಿಯ ವೀರಣ್ಣ ಸವಡಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಜಯದ ನಗೆ ಬೀರಿದರು. ಎರಡು ಬಾರಿ ಮೇಯರ್ ಗೌನ್ ತೊಟ್ಟಿರುವ ಬಿಜೆಪಿ ಅಭ್ಯರ್ಥಿ ಡಾ. ಪಾಂಡುರಂಗ ಪಾಟೀಲ ಸತತ 5ನೇ ಬಾರಿ ಜಯ ಗಳಿಸಿದರು. ಬಿಜೆಪಿಯ ಸುಧೀರ ಸರಾಫ, ಡಿ.ಕೆ. ಚವ್ಹಾಣ, ಮಾಜಿ ಉಪ ಮೇಯರ್ ನಾರಾಯಣ ಜರತಾರಘರ, ಶಿವಾನಂದ ಮುತ್ತಣ್ಣವರ, ಕಾಂಗ್ರೆಸ್ನ ಗಣೇಶ ಟಗರಗುಂಟಿ, ದಶರಥ ವಾಲಿ, ಜೆಡಿಎಸ್ನ ಅಲ್ತಾಫ ಕಿತ್ತೂರ, ರಾಜಣ್ಣ ಕೊರವಿ ಈ ಬಾರಿಯೂ ಪಾಲಿಕೆ ಪ್ರವೇಶಿಸಿದರು.
ಅತಿ ಹೆಚ್ಚು-ಕಡಿಮೆ ಅಂತರ
ಅತಿ ಹೆಚ್ಚು ಅಂತರದಿಂದ ಗೆದ್ದವರು ವಾರ್ಡ್ ನಂ. 29ರ ಕಾಂಗ್ರೆಸ್ ಸದಸ್ಯ ಪಿ.ಕೆ. ರಾಯನಗೌಡರ. 3,519 ಮತಗಳ ಅಂತರದಿಂದ ಗೆದ್ದಿರುವ ರಾಯನಗೌಡ್ರ ಒಟ್ಟು 4,514 ಮತ ಗಳಿಸಿದ್ದಾರೆ. ಇವರ ಸಮೀಪದ ಸೋತ ಅಭ್ಯರ್ಥಿ ಬಿಜೆಪಿಯ ಶಿವಪ್ಪ ಹಳ್ಯಾಳ 795 ಮತ ಪಡೆದಿದ್ದಾರೆ. ಅತಿ ಕಡಿಮೆ ಅಂತರದಿಂದ ಗೆದ್ದವರು ವಾರ್ಡ್ ನಂ. 9ರ ಬಿಜೆಪಿ ಸದಸ್ಯ ಶಂಕರ ಶೇಳಕೆ. ಕೇವಲ 8 ಮತಗಳ ಅಂತರದಿಂದ ಜಯ ಗಳಿಸಿರುವ ಶೇಳಕೆ ಒಟ್ಟು 1,350 ಮತ ಪಡೆದರೆ, ಸೋಲುಂಡ ಸಮೀಪದ ಅಭ್ಯರ್ಥಿ ಕಾಂಗ್ರೆಸ್ನ ಪ್ರಕಾಶ ಘಾಟಗೆ ಪಡೆದ ಮತ 1,342.
ಶೀಲಾ ಸೋಲು...
ವಾರ್ಡ್ ನಂ. 5ರಲ್ಲಿ ಶೀಲಾ ಅಂಚಟಗೇರಿ ಸೋಲು ಕಾಣುವ ಮೂಲಕ ಕಳೆದ ಎರಡು ಅವಧಿಯಿಂದ ಪಾಲಿಕೆ ಪ್ರವೇಶಿಸುತ್ತ ಬಂದಿದ್ದ ಅಂಚಟಗೇರಿ ಫ್ಯಾಮಿಲಿಯ ಗೆಲುವಿನ ಓಟಕ್ಕೆ ಬ್ರೆಕ್ ಹಾಕಿದರು. ಸಂಸದ ಪ್ರಹ್ಲಾದ ಜೋಶಿ ಆಪ್ತರಲ್ಲೊಬ್ಬರಾದ ಈರೇಶ ಅಂಚಟಗೇರಿಯವರ ಧರ್ಮಪತ್ನಿ ಶೀಲಾ ಅಂಚಟಗೇರಿ ಸೋತ ಅಭ್ಯರ್ಥಿ. 2001ರಲ್ಲಿ ಈರೇಶ ಅಂಚಟಗೇರಿ ಪಾಲಿಕೆ ಸದಸ್ಯರಾಗಿದ್ದರು. 2007ರ ಅವಧಿಗೆ ಇವರ ತಾಯಿ ಮಹಾನಂದಾ ಅಂಚಟಗೇರಿ ಚುನಾಯಿತರಾಗಿದ್ದರು. ಪ್ರಸಕ್ತ ಅವಧಿಗೆ ತಮ್ಮ ಧರ್ಮಪತ್ನಿ ಶೀಲಾ ಅಂಚಟಗೇರಿ ಅವರನ್ನು ಕಣಕ್ಕಿಳಿಸಿದ್ದರು. ಆದರೆ, ಈ ಬಾರಿ ಸಂಸದ ಪ್ರಹ್ಲಾದ ಜೋಶಿ ಅವರ ಆಪ್ತರಲ್ಲಿ ಬಹುತೇಕರು ಸೋಲನುಭವಿಸಿದ್ದು, ಅವರಲ್ಲಿ ಶೀಲಾ ಅಂಚಟಗೇರಿ ಒಬ್ಬರು.
- ಆನಂದ ಅಂಗಡಿ