ಸಿಎಂ ತವರು ಜಿಲ್ಲೆಯಲ್ಲಿ ಕೈ ಕಮಾಲ್

Updated on: 

ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 11
ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಬಿಜೆಪಿಯ ಆಂತರಿಕ ಕಚ್ಚಾಟ, ಭ್ರಷ್ಟಾಚಾರ ಹೀಗೆ ಅನೇಕ ಅನೇಕ ವಿವಾದಗಳಿಂದ ರೋಸಿ ಹೋದ ಮತದಾರ ಮುನ್ನೆಚ್ಚರಿಕೆ ಎಂಬಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಬಲವಾದ ಏಟು ನೀಡಿದ್ದಾನೆ.
ಎಲ್ಲ ಘಟನಾವಳಿಗಳು ಪುರಸಭೆ ಹಾಗೂ ಪಪಂಗಳ ಮೇಲೂ ಪರಿಣಾಮ ಬೀರಿದ್ದು ಸುಳ್ಳಲ್ಲ. ಇದರ ಪರಿಣಾಮವೇ ಜಿಲ್ಲೆಯ ಎರಡು ಪುರಸಭೆ ಹಾಗೂ ಮೂರು ಪಪಂಗಳ ಚುನಾವಣೆಯ ಒಟ್ಟು 89 ಸ್ಥಾನಗಳ ಪೈಕಿ ಕಾಂಗ್ರೆಸ್ 42, ಜೆಡಿಎಸ್ 20, ಬಿಜೆಪಿ 17, ಕೆಜಿಪಿ ನಾಲ್ಕು, ಬಿಎಸ್ಸಾರ್ ಹಾಗೂ ಪಕ್ಷೇತರರು ತಲಾ ಮೂರು ಸ್ಥಾನ ಪಡೆಯುವ ಮೂಲಕ ಮುಖ್ಯಮಂತ್ರಿ ಜಿಲ್ಲೆಯಲ್ಲಿ ಕೈ ಕಮಾಲ್ ಮಾಡಿದೆ.
ನವಲಗುಂದ ಪುರಸಭೆ: ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಂಕರ ಪಾಟೀಲ ಮುನೇನಕೊಪ್ಪ ಅವರ ಕ್ಷೇತ್ರ ನವಲಗುಂದದಲ್ಲಿ ಬಿಜೆಪಿ ಮೊದಲಿದ್ದ ಏಳು ಸ್ಥಾನಗಳಿಗೆ ಈ ಬಾರಿಯೂ ತೃಪ್ತಿಪಟ್ಟುಕೊಂಡಿದೆ. ಶಾಸಕ ಮುನೇನಕೊಪ್ಪ ಅಭಿವೃದ್ಧಿ ಕೆಲಸ ಮಾಡಿದ್ದನ್ನು ಗಮನಿಸಿದರೆ ಕನಿಷ್ಠ 15 ಸ್ಥಾನಗಳನ್ನಾದರೂ ಪಡೆಯಬಹುದಿತ್ತು ಎಂಬ ಲೆಕ್ಕಾಚಾರ ತಲೆಕೆಳಗಾಗಿದೆ. ಇನ್ನು, ಕಾಂಗ್ರೆಸ್ ಈ ಹಿಂದೆ 8 ಸ್ಥಾನ ಹೊಂದಿತ್ತು. ಈ ಚುನಾವಣೆಯಲ್ಲಿ 12 ಸ್ಥಾನಗಳಿಗೆ ಬಡ್ತಿ ಪಡೆದಿದೆ. ಬಿಜೆಪಿ ಹಾಗೂ ಜೆಡಿಎಸ್ ನವಲಗುಂದದಲ್ಲಿ ಉತ್ತಮ ನೆಲೆಗಟ್ಟು ಹೊಂದಿದ್ದರೂ ಕಾಂಗ್ರೆಸ್ ಅದನ್ನು ಮೀರಿ 12 ಸ್ಥಾನ ಗಳಿಸಿದ್ದು ವಿಶೇಷವೇ. ಜೆಡಿಎಸ್ ಕಳೆದ ಬಾರಿ ಆರು ಸ್ಥಾನ ಹೊಂದಿದ್ದು, ಈ ಬಾರಿ ಬರೀ ಮೂರು ಸ್ಥಾನಗಳಿಗೆ ಸುಮ್ಮನಾಗಿದೆ. ಕೆಜೆಪಿ, ಬಿಎಸ್ಸಾರ್ ಖಾತೆ ತೆರೆದಿಲ್ಲ.
ಅಣ್ಣಿಗೇರಿ ಪುರಸಭೆ: ಅಣ್ಣಿಗೇರಿ ಪುರಸಭೆಗೆ ಕಳೆದ ಬಾರಿ 23 ಸದಸ್ಯರ ಪೈಕಿ ಬಿಜೆಪಿಯಿಂದ ಎಂಟು ಜನರು ಆಯ್ಕೆಯಾಗಿದ್ದರೆ ಈ ಬಾರಿ ನಾಲ್ಕು ಮಂದಿ ಮಾತ್ರ ಆರಿಸಿ ತಂದಿದ್ದಾರೆ. ಜೆಡಿಎಸ್ ಏಳರಿಂದ 10ಕ್ಕೆ ಏರಿಕೆಯಾಗಿದೆ. ಕಳೆದ ಬಾರಿಗಿಂತ ಕಾಂಗ್ರೆಸ್ ಮೂರು ಸ್ಥಾನ ಹೆಚ್ಚಿಗೆ ಅಂದರೆ ಈ ಬಾರಿ ಎಂಟು ಸೀಟು ಗಿಟ್ಟಿಸಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಕೂಡಿ ಅಣ್ಣಿಗೇರಿ ಪುರಸಭೆ ರಚನೆ ಮಾಡುವ ಸಾಧ್ಯತೆಗಳು ದಟ್ಟವಾಗಿವೆ.
ಕಲಘಟಗಿ ಪಪಂ: ನಿರೀಕ್ಷೆಯಂತೆ ಕಲಘಟಗಿ ಪಪಂ ಶಾಸಕ ಸಂತೋಷ ಲಾಡ್ ಪಾಲಾಗುವ ಲಕ್ಷಣಗಳಿವೆ. ಇದ್ದ 13 ಸದಸ್ಯರಲ್ಲಿ ಎಂಟು ಕಾಂಗ್ರೆಸ್, ಒಂದು ಜೆಡಿಎಸ್ ಹಾಗೂ ಕೆಜೆಪಿ ಮತ್ತು ಬಿಎಸ್ಸಾರ್‌ನ ತಲಾ ಎರಡು ಸದಸ್ಯ ಸ್ಥಾನ ಬಾಚಿಕೊಂಡಿವೆ. ಕಳೆದ ಬಾರಿಯೂ ಈ ಪಪಂನಲ್ಲಿ ಒಬ್ಬರೂ ಬಿಜೆಪಿ ಅಭ್ಯರ್ಥಿ ಇರಲಿಲ್ಲ. ಈ ಬಾರಿಯೂ ಬಿಜೆಪಿ ಇಲ್ಲಿ ಖಾತೆ ತೆರೆಯಿಲ್ಲ. ಬಿಜೆಪಿ ಮುಖಂಡ ಸಿ.ಎಂ. ನಿಂಬಣ್ಣವರ ಈ ಬಾರಿ ಕೆಜೆಪಿಗೆ ಹೋಗಿದ್ದರಿಂದ ಕೆಜೆಪಿ ಒಂದು ಸ್ಥಾನ ಪಡೆದಿದೆ. ಹಾಗೆಯೇ ಬಿಎಸ್ಸಾರ್ ಸಹ ಒಂದು ಸ್ಥಾನ ಪಡೆಯುವ ಮೂಲಕ ಅಸ್ತಿತ್ವ ತೋರಿದೆ.
ಅಳ್ನಾವರ ಪಪಂ: ಶಾಸಕ ಸಂತೋಷ ಲಾಡ್ ಅವರ ಕ್ಷೇತ್ರ ವ್ಯಾಪ್ತಿಯ ಅಳ್ನಾವರ ಪಪಂನಲ್ಲಿ ಕಾಂಗ್ರೆಸ್ ಎಂಟು ಸ್ಥಾನ ಪಡೆದಿದೆ. ಕಳೆದ ಬಾರಿ ಒಂಬತ್ತು ಸ್ಥಾನಗಳಿದ್ದರೆ ಈ ಬಾರಿ ಒಂದು ಸ್ಥಾನಕ್ಕೆ ಕುಸಿದು ಎಂಟು ಸ್ಥಾನಗಳಿಗೆ ತೃಪ್ತಿಪಟ್ಟಿದೆ. ಒಂದೂ ಸ್ಥಾನ ಗಳಿಸದ ಬಿಜೆಪಿ ಈ ಬಾರಿ ಗುದ್ದಾಡಿ ಎರಡು ಸ್ಥಾನ ಗೆದ್ದುಕೊಂಡಿದೆ. ಜೆಡಿಎಸ್ ಕಳೆದ ಬಾರಿ ಐದು ಸ್ಥಾನ ಪಡೆದಿದ್ದ ಜೆಡಿಎಸ್ ಪ್ರಸ್ತುತ ಮೂರಕ್ಕೆ ತೃಪ್ತಿಯಾಗಿದೆ. ಹಾಗೆಯೇ ಈ ಬಾರಿ ಎರಡು ಸ್ಥಾನಗಳನ್ನು ಪಕ್ಷೇತರರು ಹಂಚಿಕೊಂಡಿದ್ದಾರೆ.
ಕುಂದಗೋಳ ಅತಂತ್ರ: ಶಾಸಕ ಎಸ್.ಐ. ಚಿಕ್ಕನಗೌಡ್ರ ಕ್ಷೇತ್ರದ 15 ಸ್ಥಾನ ಹೊಂದಿರುವ ಕುಂದಗೋಳ ಪಪಂ ಅತಂತ್ರವಾಗಿದೆ. ಶಾಸಕರು ಬಿಜೆಪಿಯಿಂದ ಹಾರಿ ಕೆಜೆಪಿಯಲ್ಲಿದ್ದರೂ ಈ ಪಕ್ಷದ ಇಬ್ಬರು ಅಭ್ಯರ್ಥಿಗಳು ಮಾತ್ರ ಗೆಲವು ಸಾಧಿಸಿದ್ದಾರೆ. ಕಾಂಗ್ರೆಸ್‌ಗೆ ಆರು, ಬಿಜೆಪಿಗೆ ನಾಲ್ಕು, ಜೆಡಿಎಸ್‌ಗೆ ಮೂರು ಸ್ಥಾನ ಒಲಿದಿವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮಿಲಾಪಿಯಾಗಿ ಕುಂದಗೋಳ ಪಪಂಯನ್ನು ರಚಿಸುವ ನಿರೀಕ್ಷೆ ಇದೆ.
-ಬಸವರಾಜ ಹಿರೇಮಠ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com