ಧಾರವಾಡ: ವಿದ್ಯಾವರ್ಧಕ ಸಂಘ ಹಾಗೂ ಮಹಿಳಾ ಮಂಟಪದ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಇಂದುಮತಿ ಪಾಟೀಲ ಪುಟ್ಟಪ್ಪ ಅಭಿನಂದನ ಮಾಲೆ-1 ಇಲ್ಲಿನ ವಿದ್ಯಾವರ್ಧಕ ಸಂಘದಲ್ಲಿ ಮಾ. 16ರಂದು ಸಂಜೆ 5.30ಕ್ಕೆ ನಡೆಯಲಿದೆ. ಡಾ ಲೀಲಾವತಿ ಪ್ರಸಾದ ಉದ್ಘಾಟಿಸಲಿದ್ದಾರೆ. ಡಾ ಶಾಂತಾ ಇಮ್ರಾಪುರ ಅಭಿನಂದಿಸಲಿದ್ದಾರೆ. ಪ್ರೊ ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ ಪಾಟೀಲ ಪುಟ್ಟಪ್ಪ, ಶಂಕರ ಹಲಗತ್ತಿ, ವಿಶ್ವೇಶ್ವರಿ ಹಿರೇಮಠ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಚುಟುಕ ಆಹ್ವಾನ
ಧಾರವಾಡ: ಚುಟುಕ ಸಾಹಿತ್ಯ ಪರಿಷತ್ ಏಪ್ರಿಲ್ನಲ್ಲಿ ನಡೆಸಲು ಉದ್ದೇಶಿಸಿದ ಚುಟುಕು ಕವಿಗೋಷ್ಠಿಗೆ ಚುಟುಕು ಕವಿಗಳು ಮಾ. 31ರೊಳಗಾಗಿ ಐದು ಸ್ವರಚಿತ ಚುಟುಕಗಳನ್ನು ಕಳುಹಿಸಲು ತಿಳಿಸಿದೆ. ಚುಟುಕು ಸಾಹಿತ್ಯ ಪರಿಷತನ ಸಂಘಟನಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸುವ ಚುಟುಕು ಕವಿಗಳು ಮೊ 91643-20113 ಸಂಪರ್ಕಿಸಬಹುದು ಎಂದು ಚುಟುಕು ಸಾಹಿತ್ಯ ಪರಿಷತ್ ಶಹರ ಘಟಕದ ಅಧ್ಯಕ್ಷ ಶಿವಾನಂದ ನಾಗನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಬಂಧ ಸ್ಪರ್ಧೆ: ವಿನೋದಾ ಪ್ರಥಮ
ಧಾರವಾಡ: ಟಾಟಾ ಸಂಸ್ಥೆಯವರು ನಡೆಸಿದ ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಇಲ್ಲಿನ ಆರ್.ಎನ್. ಶೆಟ್ಟಿ ಕ್ರೀಡಾಂಗಣದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ವಿನೋದಾ ತಳವಾರ ಪ್ರಥಮ ಸ್ಥಾನ ಪಡೆದಿದ್ದಾರೆ. ಏ. 2ರಂದು ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು. ವಿದ್ಯಾರ್ಥಿನಿ ಸಾಧನೆಗೆ ಡಿಡಿಪಿಐ ಡಾ ಬಿ.ಕೆ.ಎಸ್. ವರ್ಧನ, ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ, ವಿ.ಎಸ್. ಕುಲಕರ್ಣಿ, ಎಂ.ಜಿ. ಹಿರೇಮಠ, ವೈ.ಆರ್. ರಾಯನಗೌಡ್ರ ಅಭಿನಂದಿಸಿದ್ದಾರೆ.