ಧಾರವಾಡ: ಜನತೆಗೆ ಗುಣಮಟ್ಟದ ಸೇವೆ ಒದಗಿಸುವ ನಿಟ್ಟಿನಲ್ಲಿ ಕೆಂದ್ರ ಹಾಗೂ ರಾಜ್ಯ ಸರ್ಕಾರದ ಇಲಾಖೆ ಅಧಿಕಾರಿಗಳು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಕುರಿತು ವೃತ್ತಿಪರರಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಮಹಾನಿರ್ದೇಶಕಿ ಡಾ ಅಮಿತಾ ಪ್ರಸಾದ ಹೇಳಿದರು.
ದೇಶದಲ್ಲಿ ಮೂಲಭೂತ ಸೌಕರ್ಯ ಒದಗಿಸಲು 12ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ರು. 65 ಲಕ್ಷ ಕೋಟಿ ಬಂಡವಾಳದ ಅಗತ್ಯವಿದ್ದು, ಇದರಲ್ಲಿ ಶೇ. 48ರಷ್ಟು ಹೂಡಿಕೆಯನ್ನು ಖಾಸಗಿ ರಂಗದಿಂದ ನಿರೀಕ್ಷಿಸಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ವಿವಿಧ ಇಲಾಖೆಗಳು ತಾವು ಜಾರಿಗೊಳಿಸುತ್ತಿರುವ ಯೋಜನೆಗಳಲ್ಲಿ ಪಿಪಿಪಿ ಅಳವಡಿಸಲು ಎಷ್ಟು ಹಾಗೂ ಯಾವ ರೀತಿ ಸಾಧ್ಯ ಎಂಬುದರ ಕುರಿತು ಯೋಚಿಸಬೇಕು. ಅಂತಹ ಪ್ರಸ್ತಾವನೆಗಳನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕೆಂದು ಹೇಳಿದರು.
ಬಂಡವಾಳ ಆಕರ್ಷಿಸಲು: ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬೆಳಗಾವಿ ಹಾಗೂ ಗುಲ್ಬರ್ಗಾ ವಿಭಾಗದ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಅಧಿಕಾರಿಗಳಿಗಾಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಕುರಿತಾಗಿ ಏರ್ಪಡಿಸಿದ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿದ ಅಮಿತಾ ಪ್ರಸಾದ್, ಗುಜರಾತ್ ಬಳಿಕ ಕರ್ನಾಟಕದ ನಗರೀಕರಣದ ಬೆಳವಣಿಗೆ ದೇಶದಲ್ಲೇ ಗರಿಷ್ಠವಾಗಿದೆ. ರಾಷ್ಟ್ರದ ಬೆಳವಣಿಗೆ ನೀತಿಯಲ್ಲೂ ಪಿಪಿಪಿಗೆ ಆದ್ಯತೆ ನೀಡಲಾಗಿದೆ. ಖಾಸಗಿ ರಂಗದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಇದೊಂದು ಉತ್ತಮ ಕಾರ್ಯಯೋಜನೆ. ಆರ್ಥಿಕೇತರ ರಂಗಗಳಾದ ಆರೋಗ್ಯ, ಶಿಕ್ಷಣ, ತ್ಯಾಜ್ಯ ನಿರ್ವಹಣೆ, ಪರಿಸರ ರಂಗಗಳಲ್ಲಿ ಖಾಸಗಿ ಬಂಡವಾಳ ಹೂಡಿಕೆ ಆಗಬೇಕಿದೆ. ಜನರ ನಿರೀಕ್ಷೆಗಳು ಹೆಚ್ಚುತ್ತಿವೆ. ಅದಕ್ಕೆ ತಕ್ಕಂತೆ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಸೌಕರ್ಯ ನೀಡಲು ಸಿದ್ಧಗೊಳ್ಳಬೇಕು. ಇದಕ್ಕೆ ತಕ್ಕುದಾದ ಮುಂದಾಲೋಚನೆ ಯೋಜನೆ ಜಾರಿಗೊಳಿಸುವ ವಿಧಾನ, ಅಗತ್ಯದ ಬಂಡವಾಳ ಇವೆಲ್ಲವೂ ಬಹುತೇಕ ಖಾಸಗೀ ರಂಗದಲ್ಲಿವೆ ಎಂದು ನುಡಿದರು.
ವ್ಯವಸ್ಥಿತ ಬೆಳವಣಿಗೆ ಆಗಲಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನಿರಂತರ ನೀರು ಪೂರೈಕೆ, ಗುಲ್ಬರ್ಗಾ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗಳು ಪಿಪಿಪಿಯಿಂದಲೇ ಜಾರಿಗೊಳ್ಳುತ್ತಿದ್ದು. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಂಡವಾಳದ ಪಾಲು ತಲಾ ಶೇ. 13ರಷ್ಟು ಆಗಿದೆ. ವಿದ್ಯುಚ್ಛಕ್ತಿ ಉತ್ಪಾದನೆ, ಸಾಗಾಟ, ಹೆದ್ದಾರಿಗಳು, ನೀರಿನ ಪೂರೈಕೆ, ಬಂದರು, ನಗರ ಹಾಗೂ ಗ್ರಾಮೀಣ ಮೂಲಭೂತ ಸೌಕರ್ಯ ಒದಗಿಸುವಿಕೆ, ಕೈಗಾರಿಕಾ ವಸಾಹತುಗಳನ್ನು ನಿರ್ಮಿಸಲು ಪಿಪಿಪಿ ಯೋಜನೆ ಜಾರಿಗೊಂಡಿವೆ. ಪ್ರತಿಯೊಂದಕ್ಕೂ ವಿದೇಶದಲ್ಲಿ ಚೆನ್ನಾಗಿದೆ ಎನ್ನುವ ನಾವು ಅದನ್ನು ನಮ್ಮಲ್ಲಿಯೇ ಮಾಡಬೇಕು. ಬದುಕಲಿಕ್ಕೆ ಆರೋಗ್ಯಕರ ವಾತಾವರಣ, ಉದ್ಯೋಗದಲ್ಲೂ ವ್ಯವಸ್ಥಿತ ಬೆಳವಣಿಗೆ ಸಾಧಿಸಬೇಕೆಂದು ಅಮಿತಾ ಆಶಿಸಿದರು.
ಬೆಂಗಳೂರಿನ ಐಡೆಕ್ ಸಂಸ್ಥೆಯ ಉಪಾಧ್ಯಕ್ಷ ಡಾ ಸತ್ಯನಾರಾಯಣ ಮಾತನಾಡಿ ಸಿಡೆಕ್ ಖಾಸಗಿ ಬಂಡವಾಳ ಹೂಡಿಕೆಗೆ ಮಾರ್ಗದರ್ಶಿ ಹಾಗೂ ಸಹಾಯಕ ರೂಪದಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆ. ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಜಾರಿ ಅದಕ್ಕೆ ನೆರವು ನೀಡಲಿದೆ ಎಂದರು.
ಐಡೆಕ್ ಸಂಸ್ಥೆ ಸಿಇಓ ರಘುಸ್ವಾಮಿ, ಮೈಸೂರಿನ ನಗರಾಭಿವೃದ್ಧಿ ಸಂಸ್ಥೆಯ ಪ್ರೊ ನಾರಾಯಣ ಶಾಸ್ತ್ರಿ, ಸಂಯೋಜಕ ಬಿ.ಕೆ. ಮಂಜುನಾಥ ಇದ್ದರು.