ಧಾರವಾಡ: ನಗರದಲ್ಲಿ ಮಕ್ಕಳ ಮೇಲೆ ಹಂದಿಗಳ ದಾಳಿ ನಿರಂತರವಾಗಿ ನಡೆಯುತ್ತಿದ್ದು, ಶುಕ್ರವಾರ ಮತ್ತೊಬ್ಬ ಬಾಲಕ ಹಂದಿಗಳ ದಾಳಿಗೆ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. 15 ದಿನಗಳ ಹಿಂದೆ ಇಲ್ಲಿನ ಜನ್ನತನಗರದ ಬಾಲಕನ ಮೇಲೆ ಎರಗಿದ ಹಂದಿ ಆತನ ಮರ್ಮಾಂಗವನ್ನು ಗಾಯಗೊಳಿಸಿತ್ತು. ಈ ಘಟನೆ ಜನರ ಮನದಿಂದ ಮಾಸುವ ಮುನ್ನವೇ ತೇಜಸ್ವಿನಗರದ ಐದು ವರ್ಷದ ಪುರುಷೋತ್ತಮ ಬಸವರಾಜ ಪೂಜಾರ ಎಂಬ ಬಾಲಕನ ಮೇಲೆ ಶುಕ್ರವಾರ ಮೂರು ಹಂದಿಗಳು ದಾಳಿ ನಡೆಸಿವೆ. ಶಾಲೆಯಿಂದ ಮನೆಗೆ ಮರಳಿದ ಬಾಲಕ, ಊಟ ಮುಗಿಸಿ ಸಮೀಪದ ಕಿರಾಣಿ ಅಂಗಡಿಗೆ ಹೋದ ಸಂದರ್ಭದಲ್ಲಿ ಮೂರು ಹಂದಿಗಳು ಏಕಾಏಕಿ ದಾಳಿ ನಡೆಸಿವೆ. ಮನಸ್ಸಿಗೆ ಬಂದಂತೆ ಕಚ್ಚಿವೆ. ಹಂದಿಯಿಂದ ಪಾರಾಗಲು ಬಾಲಕ ಎಷ್ಟೇ ಪ್ರಯತ್ನಿಸಿದರೂ ಕಿವಿ, ಕೈ ಹಾಗೂ ಹೊಟ್ಟೆ ಕೆಳ ಭಾಗದಲ್ಲಿ ಕಚ್ಚಿ ತೀವ್ರವಾಗಿ ಗಾಯಗೊಳಿಸಿವೆ. ಬಾಲಕನ ಚೀರಾಟ ಕೇಳಿ ಓಡಿ ಬಂದ ಪಕ್ಕದ ಮನೆಯವರು ಹಂದಿಗಳನ್ನು ಹೊಡೆದು ಓಡಿಸಿದ್ದಾರೆ. ಗಾಯಗೊಂಡಿದ್ದ ಬಾಲಕನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ. ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಭಯಭೀತನಾಗಿದ್ದಾನೆ. ನಗರದ ವಿವಿಧೆಡೆ ಮಕ್ಕಳ ಮೇಲೆ ಹಂದಿಗಳು ಎರಗುತ್ತಿವೆ. ಕೂಡಲೇ ಈ ಕುರಿತು ಪಾಲಿಕೆ ಕ್ರಮ ತೆಗೆದುಕೊಳ್ಳಬೇಕೆಂದು ಪಾಲಕರು ಒತ್ತಾಯಿಸಿದ್ದಾರೆ.