ಕನ್ನಡಪ್ರಭ ವಾರ್ತೆ, ಧಾರವಾಡ, ಏ. 30
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಬೇಕೆಂಬ ಶಿಕ್ಷಣ ಇಲಾಖೆಯ ಮಹತ್ತರ ಚಿಣ್ಣರ ಅಂಗಳ ಯೋಜನೆ ಮಕ್ಕಳ ಹಾಗೂ ಪಾಲಕರ ನಿರಾಸಕ್ತಿಯಿಂದ ದಾರಿ ತಪ್ಪುತ್ತಿದೆ.
ಚಿಣ್ಣರ ಅಂಗಳ ಕೇಂದ್ರಗಳಿಗೆ ಮಕ್ಕಳು ಸ್ವ-ಇಚ್ಛೆಯಿಂದ ಬರಲು ಮನಸ್ಸು ಮಾಡದ ಕಾರಣ ಯೋಜನೆಗೆ ನಿಯೋಜಿತ ಶಿಕ್ಷಕರು ಪರದಾಡುವಂತಾಗಿದೆ. ವಿವಿಧ ಕಾರಣಗಳಿಂದಾಗಿ ಶಾಲಾ ಕಲಿಕೆಯಿಂದ ಹೊರಗುಳಿದ 6ರಿಂದ 14 ವಯೋವಾನದ ಮಕ್ಕಳನ್ನು ಶೈಕ್ಷಣಿಕ ಮುಖ್ಯವಾಹಿನಿಗೆ ಸೇರಿಸುವಲ್ಲಿ ಚಿಣ್ಣರ ಅಂಗಳ ಪ್ರಧಾನ ಪಾತ್ರ ವಹಿಸುತ್ತಿದೆ. ಆದರೆ, ಶಾಲೆಗೆ ಕರೆ ತರುವ ಯೋಜನೆಗೆ ಪಾಲಕರು ಸಹಕರಿಸದಿರುವುದು, ಯಶಸ್ಸಿಗೆ ಅಡ್ಡಿಯಾಗಿದೆ.
ಉದ್ದೇಶ ಈಡೇರುತ್ತಿಲ್ಲ: ಧಾರವಾಡ ಜಿಲ್ಲೆಯ 42 ಚಿಣ್ಣರ ಅಂಗಳ ಕೇಂದ್ರಗಳ ಪೈಕಿ ಬಹುತೇಕ ಖಾಲಿ ಹೊಡೆಯುತ್ತಿವೆ. ರಾಜ್ಯಾದ್ಯಂತ ಇಂಥದೇ ನಿರಾಸಕ್ತಿ ಇದೆ. ಶಿಕ್ಷಕರು ಪಾಲಕರ ಬೆನ್ನು ಬಿದ್ದು, ಮಕ್ಕಳನ್ನು ಒತ್ತಾಯಪೂರ್ವಕ ಕರೆದು ಕೂರಿಸುವ ಸ್ಥಿತಿ ಉಂಟಾಗಿದೆ.
ಬೇಸಿಗೆ ರಜೆ ಅವಧಿಯಲ್ಲಿ. ಚಿಣ್ಣರ ವಯೋವಾನಕ್ಕೆ ಅನುಗುಣವಾಗಿ, ಅಗತ್ಯ ಶಿಕ್ಷಣ ನೀಡಿ, ಮುಂದಿನ ತರಗತಿಗೆ ಅವರನ್ನು ಸಿದ್ಧಗೊಳಿಸುವುದು ಚಿಣ್ಣರ ಅಂಗಳದ ಮುಖ್ಯ ಉದ್ದೇಶ. ಆದರೆ, ಅದು ವಿಫಲವಾಗಲು ಕಾರಣಗಳು ಹಲವು.
ಏನವು ಕಾರಣಗಳು..?: ವರ್ಷವಿಡೀ ಖಾಸಗಿ ಸ್ವಾಮ್ಯದ ಸಂಸ್ಥೆಗಳಲ್ಲಿ ಕಟ್ಟಡ, ಕಲ್ಲುಗಣಿ, ಬಡಿಗತನ, ಕಮ್ಮಾರಿಕೆ ಇತ್ಯಾದಿಗಳಲ್ಲಿ ಕಾರ್ಮಿಕರಾಗಿ ದುಡಿಯುವ 6ರಿಂದ 14 ವಯೋವುತಿಯ ಮಕ್ಕಳೂ ಚಿಣ್ಣರ ಅಂಗಳದತ್ತ ಆಸಕ್ತಿ ವಹಿಸುತ್ತಿಲ್ಲ. ಶಾಲಾ ಶಿಕ್ಷಣದಲ್ಲಿ ಓದು, ಬರೆಹ, ಲೆಕ್ಕಾಚಾರ, ಅರಿವು ಮತ್ತು ಕ್ರಿಯಾಶೀಲತೆ ಒದಗಿಸುವ ಚಟುವಟಿಕೆಗೆ ಸ್ಪಂದಿಸುತ್ತಿಲ್ಲ ಎಂಬ ಸಂಗತಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೂ ತಲೆನೋವಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಅಭಿಯಾನದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಗೂ ಚಿಣ್ಣರ ಅಂಗಳಕ್ಕೆ ನಿಯೋಜಿತ ಶಿಕ್ಷಕರು ಯೋಜನೆಯ ಅನುಷ್ಠಾನಕ್ಕೆ ಸಜ್ಜಾಗಿದ್ದರೂ ಸಾರ್ವಜನಿಕ ಸಹಕಾರದ ಕೊರತೆಯಿಂದ ಯೋಜನೆ ಅಂದುಕೊಂಡಷ್ಟು ಯಶಸ್ವಿಯಾಗಿಲ್ಲ. ಚಿಣ್ಣರ ಅಂಗಳದ ಮೂಲಕ ಮಕ್ಕಳಲ್ಲಿ ಅಧ್ಯಯನದ ಕುತೂಹಲ ಚಿಗುರಿಸಲು ಆಗುತ್ತಿಲ್ಲ ಎಂಬುದು ಶಿಕ್ಷಕರಿಗೂ ಬೇಸರ ತರಿಸಿದೆ.
ಹಸಿವಿಲ್ಲ: ಬಡತನದ ತೀವ್ರತೆಯೂ ಈ ಯೋಜನೆ ಯಶಸ್ವಿಯಾಗದಿರಲು ಕಾರಣವಾಗಿದೆ. ಹಸಿವು ಇಲ್ಲದ ಮನುಷ್ಯನಿಗೆ ಊಟ ರುಚಿಸುವುದಿಲ್ಲ. ಶಿಕ್ಷಣದ ಹಸಿವು ಇಲ್ಲದ ಪಾಲಕ, ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಚಿಣ್ಣರ ಅಂಗಳದ ಪಾಠಕ್ರಮಗಳೂ ರುಚಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ವಶಿಕ್ಷಣ ಅಭಿಯಾನ ಯೋಜನೆಯ ಉಪಕ್ರಮವಾದ ಚಿಣ್ಣರ ಅಂಗಳ ರಾಜ್ಯದಲ್ಲಿ ಸಮಸ್ಯೆಗಳ ಕೂಪವಾಗಿದೆ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.
874 ಮಕ್ಕಳನ್ನು ಗುರುತಿಸಿದ್ದೇವೆ
ಧಾರವಾಡ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ 874 ಮಕ್ಕಳನ್ನು ಗುರುತಿಸಲಾಗಿದೆ. ಅವರಿಗೆ ವಿಶೇಷ ತರಬೇತಿ ನೀಡಿ ಅರ್ಧಕ್ಕೆ ಬಿಟ್ಟು ಶಾಲೆಗೆ ಮತ್ತೆ ಸೇರಿಸಲು ವಿಶೇಷ ತರಬೇತಿ ನೀಡಲು 42 ಕೇಂದ್ರಗಳನ್ನು ತೆರೆಯಲಾಗಿದೆ. ಶೇ. 50ರಷ್ಟು ಮಕ್ಕಳು ಬರುತ್ತಿದ್ದಾರೆ. ಪ್ರತಿ ಕೇಂದ್ರಕ್ಕೂ ಒಬ್ಬ ಮುಖ್ಯ ಶಿಕ್ಷಕ, ಸ್ವಯಂ ಸೇವಕಿ ಹಾಗೂ ಸಹ ಶಿಕ್ಷಕರಿದ್ದು, ಮಕ್ಕಳ ಕಲಿಕೆಗೆ ಸಹಕರಿಸುತ್ತಾರೆ. ಒಂದು ವೇಳೆ ಚಿಣ್ಣರ ಅಂಗಳಕ್ಕೆ ಗುರುತಿಸಿದ ಮಗು ವಿವಿಧ ಕಾರಣಗಳಿಂದ ಬಾರದಿದ್ದರೆ, ಶಾಲೆ ಆರಂಭವಾದ ಮೇಲೆ ಶಾಲಾ ಆಧಾರಿತ ವಿಶೇಷ ತರಬೇತಿ ಮೂಲಕವಾದರೂ ಆ ಮಗುವನ್ನು ಶಾಲೆಯತ್ತ ಕರೆಯುತ್ತೇವೆ.
- ಡಾ. ಬಿ.ಕೆ.ಎಸ್. ವರ್ಧನ್ (ಉಪ ನಿರ್ದೇಶಕರು, ಶಿಕ್ಷಣ ಇಲಾಖೆ)
ಎರಡೇ ದಿನದಲ್ಲಿ ಮುಚ್ಚಿವೆ...
ಸರ್ಕಾರದ ಲೆಕ್ಕಾಚಾರದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳು ರಾಜ್ಯದಲ್ಲಿ ಒಟ್ಟು 33,333. ಆದರೆ, ಈ ಲೆಕ್ಕಾಚಾರದಲ್ಲಿ 14 ವರ್ಷದ ಮೇಲ್ಪಟ್ಟ ಮಕ್ಕಳೂ ಇದ್ದಾರೆ. ಚಿಣ್ಣರ ಅಂಗಳ ನಡೆದ ಬಹುತೇಕ ಶಾಲೆಗಳು ಮಕ್ಕಳ ಗೈರು ಹಾಜರಾತಿಯಿಂದ ಪ್ರಾರಂಭವಾದ ಎರಡೇ ದಿನಗಳಲ್ಲಿ ಸಂಪೂರ್ಣವಾಗಿ ಮುಚ್ಚಿದ ಉದಾಹರಣೆಗಳು ಸಾಕಷ್ಟಿವೆ.
-ಹೊನ್ನಪ್ಪ ಲಕ್ಕಮ್ಮನವರ