ಕಲಘಟಗಿ: ನಾಗರ ಪಂಚಮಿ ದಿನವೇ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಗಲಗಿನಕಟ್ಟಿ ಗ್ರಾಮದಲ್ಲಿ ಹಾವಾಡಿಗನೊಬ್ಬ ಉರಗ ಕಡಿತಕ್ಕೆ ಬಲಿಯಾಗಿದ್ದಾನೆ. ಗ್ರಾಮದ ವೆಂಕಟೇಶ ಕೃಷ್ಣಾ ನಾಯಕ (32) ಹಾವು ಕಚ್ಚಿ ಮೃತಪಟ್ಟಿದ್ದಾನೆ. ಹಲವು ವರ್ಷಗಳಿಂದ ಈತ ಹಾವು ಹಿಡಿದು ಕಾಡಿಗೆ ಬಿಡುತ್ತಿದ್ದ. ಗುರುವಾರ ರಾತ್ರಿ ಗ್ರಾಮಕ್ಕೆ ಬಂದಿದ್ದ ಹಾವನ್ನು ಹಿಡಿಯಲು ಹೋಗಿ, ಅದರಿಂದ ಕಚ್ಚಿಸಿಕೊಂಡಿದ್ದಾನೆ. ಆಸ್ಪತ್ರೆಗೆ ಹೋಗುವಂತೆ ಗ್ರಾಮಸ್ಥರು ಒತ್ತಾಯಿಸಿದರೂ, ತನ್ನ ಬಳಿಯೇ ಔಷಧಿ ಇದೆ ಎಂದು ನಿರ್ಲಕ್ಷ್ಯ ತೋರಿದ್ದರಿಂದ ಶುಕ್ರವಾರ ಬೆಳಗ್ಗೆ ಮೃತಪಟ್ಟನೆಂದು ಗ್ರಾಮ ಪಂಚಾಯ್ತಿ ಸದಸ್ಯ ಮಡಿವಾಳಪ್ಪ ಹೂಗಾರ ಕನ್ನಡಪ್ರಭಕ್ಕೆ ತಿಳಿಸಿದರು. ಮೂಲತಃ ಆಂಧ್ರ ಪ್ರದೇಶದವನಾದ ವೆಂಕಟೇಶ್, ಕೂಲಿ ಕೆಲಸಕ್ಕೆಂದು ಗಲಗಿನಟ್ಟಿ ಗ್ರಾಮಕ್ಕೆ ಬಂದು ಇಲ್ಲಿಯೇ ಎರಡು ದಶಕಗಳಿಂದ ನೆಲೆಸಿದ್ದ. ಹಾವು ಕಚ್ಚಿದವರಿಗೆ ಗಿಡಮೂಲಿಕೆ ಔಷಧಿಗಳನ್ನೂ ಕೊಡುತ್ತಿದ್ದ. ಈ ಕುಟುಂಬಕ್ಕೆ ಗ್ರಾಪಂನಿಂದ ಮನೆ ನೀಡಲಾಗಿತ್ತು. ಈಚೆಗೆ ಕಲಘಟಗಿ ಪೊಲೀಸ್ ವಸತಿ ಗೃಹದಲ್ಲಿ ಕಾಟ ಕೊಡುತ್ತಿದ್ದ ಹಾವನ್ನೂ ಈತನೇ ಸೆರೆ ಹಿಡಿದಿದ್ದ. ವೆಂಕಟೇಶ್ ಸಾವಿನ ಸುದ್ದಿ ಅರಿತ ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಆರ್ಥಿಕ ಸಹಾಯ ನೀಡಿ, ಶುಕ್ರವಾರ ಅಂತ್ಯಕ್ರಿಯೆ ನಡೆಸಿ, ಮಾನವೀಯತೆ ಮೆರೆದರು.
Advertisement