ಹುಬ್ಬಳ್ಳಿ: ನಿರಂತರ ನೀರು ಪೂರೈಕೆ ವಾರ್ಡ್‌ಗಳಲ್ಲಿ ನೀರಿನ ಬಿಲ್ ಬಾಕಿ ಇರುವ ಬಳಕೆದಾರರಿಗೆ 30 ದಿನಗಳ ನೋಟಿಸ್ ನೀಡಿ, ನೋಟಿಸ್ ಅವಧಿಯಲ್ಲಿ ಬಾಕಿ ಬಿಲ್ ಭರಿಸದಿದ್ದರೆ ನಳದ ಸಂಪರ್ಕ ಕಟ್ ಮಾಡಲು ಹಾಗೂ ನಿಗದಿತ ಅವಧಿಯಲ್ಲಿ ಸಾಮಾನ್ಯ ಸಭೆಯಲ್ಲಿ ಲೆಕ್ಕಾಚಾರ ಮಂಡಿಸಲು ಮೇಯರ್ ಶಿವು ಹಿರೇಮಠ ಜಲಮಂಡಳಿ ಅಧಿಕಾರಿಗಳಿಗೆ ಆದೇಶ ನೀಡಿದರು.
ಶನಿವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಗಣೇಶ ಟಗರಗುಂಟಿ ಗಮನ ಸೆಳೆಯುವ ಸೂಚನೆ ಮೇರೆಗೆ ನಡೆದ ಜಲಮಂಡಳಿ ಖರ್ಚು ವೆಚ್ಚದ ಬಗ್ಗೆ ಬಿಸಿ ಚರ್ಚೆ ನಡೆಯಿತು.
ಪ್ರತಿ ವರ್ಷ ಕೋಟ್ಯಂತರ ರುಪಾಯಿ ನೀರಿನ ಬಿಲ್ ವಸೂಲಿ ಮಾಡುವ ಜಲ ಮಂಡಳಿಯಲ್ಲಿ ಅವ್ಯವಹಾರ ನಡೆಯುತ್ತಿದೆ. ಪಾಲಿಕೆ ಸಿಬ್ಬಂದಿ ಬಳಸಿಕೊಂಡು, ಸರ್ಕಾರ ನೀಡುವ ಸಂಬಳ, ಮತ್ತಿತರ ಅನುದಾನ ಬಳಸಿಕೊಳ್ಳುತ್ತಿದ್ದರೂ ಜಲಮಂಡಳಿ ವಸೂಲಿಯಾದ ನೀರಿನ ಶುಲ್ಕದ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ಸದಸ್ಯರು ಆರೋಪಿಸಿದರು.
ಪ್ರತಿ ಮೂರು ತಿಂಗಳಿಗೊಮ್ಮೆ ಪಾಲಿಕೆ ಸಾಮಾನ್ಯ ಸಭೆಗೆ ಖರ್ಚು ವೆಚ್ಚವನ್ನು ಮಂಡಿಸಬೇಕಿದ್ದು ನಿಯಮ. ಆದರೆ, ಜಲಮಂಡಳಿ ಅಧಿಕಾರಿಗಳು ಇದುವರೆಗೂ ಸಾಮಾನ್ಯ ಸಭೆಗೆ ಲೆಕ್ಕಾಚಾರ ಮಂಡಿಸದೇ ಕಾನೂನು ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಹಿರಿಯ ಸದಸ್ಯ ಡಾ. ಪಾಂಡುರಂಗ ಪಾಟೀಲ ಆಪಾದಿಸಿದರು.
ಇದೇ ಸಂದರ್ಭ ಜಲಮಂಡಳಿಗೆ ಆಕರವಾಗುವ ನೀರಿನ ಬಿಲ್ ಬಗ್ಗೆ ಮಾಹಿತಿ ನೀಡಿದ ಹಿರಿಯ ಅಧಿಕಾರಿ ಕೇಶವ, ಪ್ರತಿವರ್ಷ ಸುಮಾರು ರು. 17 ಕೋಟಿ ನೀರಿನ ಬಿಲ್ ಸಂಗ್ರಹವಾಗುತ್ತಿದ್ದು, ಶೇ. 90ರಷ್ಟು ಹಣ ಸಂಬಳ, ಪೈಪ್‌ಲೈನ್ ದುರಸ್ತಿ ಮತ್ತಿತರ ಕಾರ್ಯಗಳಿಗೆ ವೆಚ್ಚವಾಗುತ್ತಿದೆ ಎಂದು ತಿಳಿಸಿದರು.
ನಿರಂತರ ನೀರು ಪಾಲಿಕೆ ಯೋಜನೆಯ ಧಾರವಾಡ ವಿಭಾಗದಲ್ಲಿ 6,300 ನಳಗಳ ಸಂಪರ್ಕಗಳಿದ್ದು, ರು. 1.73 ಕೋಟಿ ಬಾಕಿ ಇದೆ. ಹುಬ್ಬಳ್ಳಿ ವಿಭಾಗದಿಂದ ರು. 1.77 ಕೋಟಿ ಬಾಕಿ ಇದೆ ಎಂದು ವಿವರಿಸಿದರು.
ನಡಾವಳಿ ಆಡಿಯೋ ರಿಕಾರ್ಡ್
ಸಾಮಾನ್ಯ ಸಭೆ ನಡಾವಳಿಕೆ ದಾಖಲಿಸಲು ಆಡಿಯೋ ರಿಕಾರ್ಡ್ ಮಾಡುವಂತೆ ಮೇಯರ್ ಹಿರೇಮಠ ಪರಿಷತ್ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ. ಹಿಂದಿನ 3 ಸಭೆಯ ನಡಾವಳಿ, ಮೇಯರ್ ಆದೇಶಗಳು ತಪ್ಪಾಗಿ ದಾಖಲಾಗಿವೆ. ಅವುಗಳನ್ನು ಸರ್ಕಾರಕ್ಕೆ ಕಳಿಸಿದರೆ ಪಾಲಿಕೆಗೆ ಬರುವ ಆದಾಯಕ್ಕೆ ನಷ್ಟವಾಗುತ್ತದೆ. ತಪ್ಪು ದಾಖಲೆಗಳೇ ಮುಂದುವರಿಯುವದರಿಂದ ಭವಿಷ್ಯದಲ್ಲಿ ತೆಗೆದುಕೊಳ್ಳುವ ತೀರ್ಮಾನಗಳೂ ತಪ್ಪಾಗುವ ಸಾಧ್ಯತೆ ಇದೆ ಎಂದು ಎಲ್ಲ ಸದಸ್ಯರು ಹೇಳಿದರು.
ಪರಿಷತ್ ಕಾರ್ಯದರ್ಶಿ ವಿಭಾಗದಲ್ಲಿ ನಿವೃತ್ತಿ ಹೊಂದಿದ ಹಿರಿಯ ಆಸಕ್ತ ಸಿಬ್ಬಂದಿ ಮರು ನೇಮಿಸಿಕೊಂಡು, ಅವರ ಸಲಹೆ ಮೇರೆಗೆ ಸಾಮಾನ್ಯ ಸಭೆ ನಡಾವಳಿಕೆಯನ್ನು ಸಮರ್ಪಕವಾಗಿ ದಾಖಲಿಸಲು ಹಿರಿಯ ಸದಸ್ಯರಾದ ಡಾ. ಪಾಂಡುರಂಗ ಪಾಟೀಲ, ವೀರಣ್ಣ ಸವಡಿ ಮತ್ತಿತರರು ಸಲಹೆ ನೀಡಿದರು.
ನಡಾವಳಿಗಳನ್ನು ಸರಿಯಾಗಿ ದಾಖಲಿಸದಿದ್ದರಿಂದ ಹಿಂದಿನ ಸಭೆಯ ಠರಾವುಗಳನ್ನು ದೃಢೀಕರಣಗೊಳಿಸುವುದು ಕಷ್ಟಸಾಧ್ಯ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಲು ಅಡಚಣೆಯಾಗಿದ್ದು, ತಕ್ಷಣ ಆಡಿಯೋ ರಿಕಾರ್ಡಿಂಗ್ ಸೌಲಭ್ಯ ಒದಗಿಸಲು ಮೇಯರ್ ಆದೇಶ ನೀಡಿದರು.
Advertisement