ರಸ್ತೆ ಗುಂಡಿಗಳಿಗೆ ದುರಸ್ತಿ ಭಾಗ್ಯ

Published on

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 2
ಸ್ಥಳೀಯ ಶಾಸಕರ, ಸಂಸದರ ಹಾಗೂ ಜಿಲ್ಲಾಧಿಕಾರಿ ಸಭೆಯನ್ನು ಶೀಘ್ರದಲ್ಲಿ ಕರೆದು ಅವಳಿ ನಗರದ ತಗ್ಗು ಬಿದ್ದ ರಸ್ತೆಗಳನ್ನು ಪ್ರಕೃತಿ ವಿಕೋಪ ನಿಧಿಯಡಿ ದುರಸ್ತಿಗೊಳಿಸುವುದಕ್ಕೆ ಸಂಬಂಧಿಸಿದ ತೀರ್ಮಾನ ಕೈಗೊಳ್ಳಲು ಮಹಾನಗರ ಪಾಲಿಕೆ ಸಾಮಾನ್ಯ ಸಭೆ ತೀರ್ಮಾನಿಸಿದೆ.
ಪ್ರತಿ ವಲಯದಲ್ಲಿ ತುರ್ತು ಕಾಮಗಾರಿಗೆ ಒಂದು ಟ್ರ್ಯಾಕ್ಟರ್, ಐವರು ಕಾರ್ಮಿಕರನ್ನು ನಿಯೋಜಿಸಲು ಪಾಲಿಕೆ ಮುಂದಾಗಿದೆ. ತಗ್ಗು ಬಿದ್ದ ರಸ್ತೆಗಳ ದುರಸ್ತಿಗೆ ಸಂಬಂಧಿಸಿದಂತೆ ಬಿಜೆಪಿಯ ವೀರಣ್ಣ ಸವಡಿ ಗಮನ ಸೆಳೆಯುವ ಸೂಚನೆ ಮೇರೆಗೆ ನಡೆದ ಚರ್ಚೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಕಳೆದ ಅವಧಿಯಲ್ಲಿ ರಾಜ್ಯ, ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಇದ್ದರೂ ರಸ್ತೆ ದುರಸ್ತಿಗೊಳಿಸಿಲ್ಲ ಎಂದು ಕಾಂಗ್ರೆಸ್‌ನ ಮೋಹನ ಹಿರೇಮನಿ ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಸ್ಥಳೀಯ ಸಂಸ್ಥೆಗೆ ಇದುವರೆಗೂ ಸಮರ್ಪಕ ಹಣ ಬಂದಿಲ್ಲ. ಮುಖ್ಯಮಂತ್ರಿಯವರ ವಿಶೇಷ ನಿಧಿಯಿಂದ ರು. 6 ಕೋಟಿ ಮಾತ್ರ ಪಾಲಿಕೆಗೆ ಬಂದಿದೆ. ಇದರಿಂದ ಅಭಿವೃದ್ಧಿ ಕಾರ್ಯ ಮಾಡಲು ಅಡಚಣೆಯಾಗಿದೆ ಎಂದು ಬಿಜೆಪಿಯ ಶಿವಾನಂದ ಮುತ್ತಣ್ಣವರ ವಾದಿಸಿದರು.
ಬಿಜೆಪಿಯ ಸ್ಥಳೀಯರೇ ಮುಖ್ಯಮಂತ್ರಿಯಾಗಿದ್ದಾಗ ಪಾಲಿಕೆಗೆ ರು. 25 ಕೋಟಿ ಸಹ ತರಲಾಗಲಿಲ್ಲವೆಂದು ಕಾಂಗ್ರೆಸ್ ಸದಸ್ಯರು ವಾದಕ್ಕಿಳಿದಾಗ, ಎರಡೂ ಪಕ್ಷದ ಸದಸ್ಯರ ಮಧ್ಯೆ ಕೆಲ ಸಮಯ ಮಾತಿನ ಚಕಮಕಿ ನಡೆಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಗಣೇಶ ಟಗರಗುಂಟಿ ಕುಡಿಯುವ ನೀರಿನ ಬಾಟಲಿ ಟೇಬಲ್ ಮೇಲೆ ಎಸೆದಿದ್ದರಿಂದ ಬಾಟಲಿ ಒಡೆದು ಸುತ್ತಲೂ ಕುಳಿತಿದ್ದ ಸದಸ್ಯರು ಹಾಗೂ ಮಾಧ್ಯಮ ಪ್ರತಿನಿಧಿಗಳ ಮೇಲೆ ನೀರು ಸಿಡಿಯಿತು. ಸದಸ್ಯರ ಮಧ್ಯೆ ಮಾತಿನ ಚಕಮಕಿ ಮುಂದುವರಿದಿದ್ದರಿಂದ ಅರ್ಧ ತಾಸಿನವರೆಗೆ ಸಭೆ ಮುಂದೂಡಲಾಯಿತು.
ಎಸ್.ಎಂ. ಕೃಷ್ಣ ನಗರದಲ್ಲಿ ರಸ್ತೆ ಹದಗೆಟ್ಟಿದ್ದರಿಂದ ಆ್ಯಂಬ್ಯುಲೆನ್ಸ್ ಸಂಚರಿಸಲಾರದೆ ಮಹಿಳೆಯೊಬ್ಬಳು ಮೃತಪಟ್ಟಿದ್ದು, ಮೃತ ಮಹಿಳೆ ಕುಟುಂಬಕ್ಕೆ ಪಾಲಿಕೆ ಹಾಗೂ ಕೆಯುಐಡಿಎಫ್‌ಸಿ ವತಿಯಿಂದ ಪರಿಹಾರ ನೀಡಬೇಕು ಎಂದು ಜೆಡಿಎಸ್‌ನ ಅಲ್ತಾಫ್ ಕಿತ್ತೂರ ಒತ್ತಾಯಿಸಿದರು.
ಒಂದು ವರ್ಷದ ಹಿಂದೆ ನಿರ್ಮಿಸಿದ ರಸ್ತೆಗಳ ನಿರ್ವಹಣೆಯನ್ನು ಸಂಬಂಧಿಸಿದ ಗುತ್ತಿಗೆದಾರರೆ ಮಾಡಬೇಕಿರುವುದರಿಂದ ರಸ್ತೆಯಲ್ಲಿ ಬಿದ್ದ ತಗ್ಗುಗಳನ್ನು ತುಂಬಲು ಗುತ್ತಿಗೆದಾರರಿಗೆ ಸೂಚಿಸಲಾಗುವುದು ಎಂದು ಆಯುಕ್ತ ರಮಣದೀಪ ಚೌಧರಿ ತಿಳಿಸಿದರು.
ಒಳಚರಂಡಿ ನಿರ್ಮಾಣ ಕಾಮಗಾರಿ ಬಳಿಕ ದುರಸ್ತಿಗೊಳಿಸಿರುವ ರಸ್ತೆಗಳ ನಿರ್ವಹಣೆಯನ್ನೂ ಗುತ್ತಿಗೆದಾರರು ಒಂದು ವರ್ಷದವರೆಗೆ ನಿಭಾಯಿಸಬೇಕು. ಒಳ ರಸ್ತೆಗಳನ್ನು ಕಳೆದ ವರ್ಷವಷ್ಟೇ ರು. 60 ಲಕ್ಷದಲ್ಲಿ ದುರಸ್ತಿಗೊಳಿಸಲಾಗಿತ್ತು. ರಸ್ತೆಯಲ್ಲಿ ಬಿದ್ದಿರುವ ತಗ್ಗು ತುಂಬಲು ಹಾಗೂ ತುರ್ತು ಕಾಮಗಾರಿಗೆ ಪ್ರತಿ ವಲಯಕ್ಕೆ ಒಂದು ಟ್ರ್ಯಾಕ್ಟರ್ ಹಾಗೂ ಐವರು ಕಾರ್ಮಿಕರನ್ನು ನಿಯೋಜಿಸಲಾಗುವುದು ಎಂದು ಆಯುಕ್ತರು ಹೇಳಿದರು.
ಮಹಾನಗರ ಪಾಲಿಕೆ ಮುಖ್ಯ ಕಚೇರಿ ಆವರಣದ ಗೋಡೆ ಏರಿಸುವ ಕಾಮಗಾರಿಯನ್ನು ಅಭಿಯಂತರು ನೀಡಿದ ವರದಿ ಆಧಾರದ ಮೇಲೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಆಯುಕ್ತ ರಮಣದೀಪ, ಗೋಡೆ ಬೀಳುವ ಸ್ಥಿತಿಯಲ್ಲಿದೆ ಎಂದು ಅಭಿಯಂತರು ವರದಿ ನೀಡಿದ್ದರು ಎಂದರು.
ಪಾಲಿಕೆಯ ಜೆಸಿಬಿ ಯಂತ್ರಗಳಲ್ಲಿ ಒಂದು ಯಂತ್ರ ಹದಗೆಟ್ಟಿದ್ದು, ಲಕ್ಷಾಂತರ ರುಪಾಯಿ ಖರ್ಚು ಮಾಡಿ ಬಾಡಿಗೆ ಜೆಸಿಬಿಯಿಂದ ಕೆಲಸ ಮಾಡಿಸಲಾಗುತ್ತಿದೆ. ಇದೇ ಹಣದಿಂದ ಕೆಟ್ಟಿರುವ ಜೆಸಿಬಿ ಯಂತ್ರವನ್ನು ದುರಸ್ತಿಗೊಳಿಸಬಹುದಿತ್ತೆಂದು ಸಭಾನಾಯಕ ಸುಧೀರ ಸರಾಫ ಹೇಳಿದರು.
ಪಾಲಿಕೆ ವ್ಯಾಪ್ತಿಯ ಮುರಿದ ಹಾಗೂ ಸಂಪೂರ್ಣ ಹಾಳಾದ ವಿದ್ಯುತ್ ಕಂಬಗಳನ್ನು ಉಚಿತವಾಗಿ ಬದಲಾಯಿಸುವುದಾಗಿ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದರು. ಹಾಳಾಗಿರುವ ವಿದ್ಯುತ್ ಕಂಬಗಳ ಪಟ್ಟಿಯನ್ನು ಶೀಘ್ರ ಹೆಸ್ಕಾಂಗೆ ನೀಡುವಂತೆ ಮೇಯರ್ ಶಿವು ಹಿರೇಮಠ ಅಧಿಕಾರಿಗಳಿಗೆ ಸೂಚಿಸಿದರು.

ಚರಂಡಿ ನೀರು ಮಿಶ್ರಣ
ಬಿಂದರಗಿ ಓಣಿಯ ಕುಡಿಯುವ ನೀರಿನಲ್ಲಿ ಚರಂಡಿ ನೀರು ಸೇರುತ್ತಿದೆ. ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಪಡಿಸುವ ವಲಯ ನಂ. 6ರ ಸಹಾಯಕ ಆಯುಕ್ತರನ್ನು ಬದಲಾಯಿಸಿ.
- ಸುವರ್ಣಾ ಕಲಕುಂಟಲ, ಕಾಂಗ್ರೆಸ್ ಸದಸ್ಯೆ
ಕೆಟ್ಟ ಜನರೇಟರ್
ಕೇಶ್ವಾಪುರದಲ್ಲಿ ಜನರೇಟರ್ ಕೆಟ್ಟಿದ್ದರಿಂದ ಕುಡಿಯುವ ನೀರು ಪೂರೈಕೆಯಲ್ಲಿ ಅಡಚಣೆಯಾಗುತ್ತಿದೆ. ನೀರು ಪೂರೈಕೆಯಾಗುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಕಡಿತವಾದಲ್ಲಿ ಮತ್ತೆ ಮೂರು ದಿನಗಳವರೆಗೆ ನೀರಿಗಾಗಿ ಕಾಯುವ ಸ್ಥಿತಿ ಇದೆ.
- ಮೇನಕಾ ಹುರಳಿ, ಬಿಜೆಪಿ ಸದಸ್ಯೆ
ಖಡ್ಡೆ-ಬುಡ್ಡೆ
ಚಾಚಿಕೆ ಘರ ಕೆ ಸಾಮನೆ ಖಡ್ಡೆ ಹೈ, ಕ್ಯಾ ಕರೆಂಗೆ ಬುಡ್ಡೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಮೊದಲು ರಸ್ತೆಯಲ್ಲಿನ ತಗ್ಗು ಮುಚ್ಚಿಸಿ. ಧಾರವಾಡ ಜನ್ನತ್‌ನಗರದ ಸ್ಮಶಾನದಲ್ಲಿ ಹೂತಿರುವ ಶವಗಳನ್ನು ಬಿಡಾಡಿ ನಾಯಿಗಳು ಹೊರಕ್ಕೆಳೆದು ತಿನ್ನುತ್ತಿವೆ.
- ಫೆಮಿದಾ ಕಿಲ್ಲೇದಾರ, ಜೆಡಿಎಸ್ ಸದಸ್ಯೆ
ಸ್ವಯಂಘೋಷಿತ ಆಸ್ತಿ
ಸ್ವಯಂಘೋಷಿತ ಆಸ್ತಿ ತೆರಿಗೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ. ತೆರಿಗೆ ತುಂಬಲು ಬರುವ ನಾಗರಿಕರಿಗೆ ಅಧಿಕಾರಿಗಳು ಸಹಕರಿಸಿ. ತೆರಿಗೆ ವಸೂಲಿ ಶೇ. 60 ಆಗುತ್ತಿಲ್ಲ. ಅಧಿಕಾರಿಗಳು ಎಲ್ಲರಿಗೂ ಚಲನ್ ನೀಡುವ ಮೂಲಕ ಅಸಹಕಾರ ತೋರುತ್ತಿದ್ದಾರೆ.
- ಡಾ. ಪಾಂಡುರಂಗ ಪಾಟೀಲ, ಬಿಜೆಪಿ ಸದಸ್ಯ
ಹಂದಿ ಕಾರ್ಯಾಚರಣೆ
ಹಂದಿ ಹಿಡಿಯುವ ಕಾರ್ಯಾಚರಣೆ 15 ದಿನಗಳಿಗೊಮ್ಮೆ ನಡೆಯುತ್ತಿದೆ. ಮೇಯರ್, ಕಾರ್ಪೋರೇಟರ್‌ಗಳು, ಅಧಿಕಾರಿಗಳು ಈ ಕಾರ್ಯಾಚರಣೆಯಿಂದ ಹಣ ಮಾಡಿಕೊಳ್ಳುತ್ತಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಕಾರ್ಯಾಚರಣೆ ಸಮರ್ಪಕವಾಗಿ ನಡೆಯಲಿ.
- ಗಣೇಶ ಟಗರಗುಂಟಿ, ಕಾಂಗ್ರೆಸ್ ಸದಸ್ಯ
ದನ-ನಾಯಿ ಸಾಗಿಸಿ
ಮೇಯರ್ ತಮ್ಮ ಮನೆಯಿಂದ ಪಾಲಿಕೆಗೆ ಬರುವ ಮಾರ್ಗದಲ್ಲಿ ಬಿಡಾಡಿ ದನಗಳು ಮಲಗಿಕೊಂಡಿರುವುದನ್ನು ನೋಡಿರಲಿಕ್ಕಿಲ್ಲ. ಬೀದಿ ನಾಯಿಗಳ ಕಾಟವೂ ಹೆಚ್ಚಿದೆ. ದನ-ನಾಯಿಗಳನ್ನು ಅವಳಿ ನಗರದಿಂದ ಹೊರ ಹಾಕಲು ತಕ್ಷಣ ಕ್ರಮ ಕೈಗೊಳ್ಳಿ.
- ರಘು ಲಕ್ಕಣ್ಣವರ, ಕಾಂಗ್ರೆಸ್ ಸದಸ್ಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com