ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 5
ತೆರೆದ ಕೊಳವೆ ಬಾವಿಯಲ್ಲಿ ಮಕ್ಕಳು ಬೀಳುತ್ತಿರುವ ಅವಘಡ ಮೇಲಿಂದ ಮೇಲೆ ಸಂಭವಿಸುತ್ತಿದ್ದರೆ ಹುಬ್ಬಳ್ಳಿ ಸಮೀಪದ ಗಾಮನಗಟ್ಟೆಯಲ್ಲಿ 300ಕ್ಕೂ ಹೆಚ್ಚು ಇಂಗುಗುಂಡಿಗಳನ್ನು ಮುಚ್ಚಲು ಮೇಯರ್ ಶಿವು ಹಿರೇಮಠ ಕ್ರಮ ಕೈಗೊಂಡಿದ್ದಾರೆ.
ಕರ್ನಾಟಕ ಗೃಹ ಮಂಡಳಿ ಗಾಮನಗಟ್ಟಿಯಲ್ಲಿ 400 ಮನೆ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದೆ. ಈ ಭಾಗದಲ್ಲಿ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ 300ಕ್ಕೂ ಹೆಚ್ಚು ಇಂಗುಗುಂಡಿಗಳನ್ನು ತೋಡಿದೆ.
ಮಂಡಳಿಯ ಉದ್ದೇಶವೇನೋ ಒಳ್ಳೆಯದೇ ಆಗಿದೆ. ಆದರೆ 30ರಿಂದ 40 ಅಡಿ ಆಳದಷ್ಟು ತೋಡಿರುವ ಇಂಗುಗುಂಡಿಗಳನ್ನು ವೈಜ್ಞಾನಿಕ ಪದ್ದತಿಯಿಂದ ಮುಚ್ಚದೇ ಹಾಗೆ ಬಿಟ್ಟಿದೆ.
ಅಪಾಯದಿಂದ ಪಾರು: ಇಂಥ ಇಂಗುಗುಂಡಿಗಳು ಪಕ್ಕಾ ಬಲಿಗಾಗಿ ಕಾದು ನಿಂತಿರುವಂತಿದೆ. ಸೋಮವಾರ ಸಂಜೆ ಈ ಗುಂಡಿಯಲ್ಲಿ ಬಾಲಕನೊಬ್ಬ ಇನ್ನೇನು ಬಿದ್ದೇ ಬಿಡುತ್ತಾನೆ ಎನ್ನುವ ಹೊತ್ತಿಗೆ ಆತನ ತಂದೆ ಬಂದು ಮಗನನ್ನು ಕಾಪಾಡಿದ್ದಾನೆ.
ಗಿರೀಶ ಚನ್ನಪ್ಪ ಬಿಸುಗಲ್ (7) ಎಂಬ ಬಾಲಕ ತಂದೆಯೊಡನೆ ಈ ಪ್ರದೇಶಕ್ಕೆ ಹೋಗಿದ್ದಾನೆ. ತಂದೆ ಚನ್ನಪ್ಪ ಕೆಲಸ ಮಾಡುತ್ತಿದ್ದ ವೇಳೆ ಗಿರೀಶ ಗುಂಡಿಯೊಳಕ್ಕೆ ಕಾಲು ಬಿಟ್ಟು ಕುಳಿತಿದ್ದಾನೆ. ಇದನ್ನು ಕಂಡು ತಂದೆ ಚನ್ನಪ್ಪ ಗುಂಡಿ ಬಳಿ ಧಾವಿಸಿ ಗಿರೀಶನನ್ನು ಅಲ್ಲಿಂದ ಎತ್ತುಕೊಂಡು ಹೋಗಿದ್ದಾರೆ.
ಮೇಯರ್ ತರಾಟೆ: ಬಲಿಗಾಗಿ ಕಾದಿರುವ ಗುಂಡಿಗಳ ಬಗ್ಗೆ ಮಾಧ್ಯಮದವರಿಗೆ ಹಾಗೂ ಮೇಯರ್‌ಗೆ ಮಾಹಿತಿ ನೀಡಿದ್ದಾರೆ. ಮಂಗಳವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಮೇಯರ್ ಶಿವು ಹಿರೇಮಠ, ಇಂಗುಗುಂಡಿಗಳನ್ನು ಮುಚ್ಚದೇ ಇರುವುದನ್ನು ಗಮನಿಸಿ ಗೃಹ ಮಂಡಳಿ ಅಧಿಕಾರಿಗಳನ್ನು ಕರೆಸಿ ತರಾಟೆಗೆ ತೆಗೆದುಕೊಂಡರು. ಗುಂಡಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳದೇ ಹೋದರೆ ಶಿಸ್ತು ಕಾನೂನು ಕ್ರಮಕ್ಕೆ ಮೊರೆ ಹೋಗುವುದಾಗಿ ಎಚ್ಚರಿಸಿದ್ದಾರೆ.
ಆ ಬಳಿಕ ಜೆಸಿಬಿ ವಾಹನದೊಂದಿಗೆ ಸ್ಥಳಕ್ಕೆ ಆಗಮಿಸಿದ ಗೃಹ ಮಂಡಳಿ ಅಧಿಕಾರಿಗಳು ಮಣ್ಣಿನಿಂದ ಇಂಗುಗುಂಡಿಗಳನ್ನು ಮುಚ್ಚಿಸುವ ಕಾರ್ಯ ಕೈಗೊಂಡಿದ್ದಾರೆ. ಬುಧವಾರದ ಒಳಗಾಗಿ ಎಲ್ಲ ಗುಂಡಿಗಳನ್ನು ಮುಚ್ಚುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
Advertisement