ವಿಶೇಷ ವರದಿ
ಧಾರವಾಡ: ಕಳೆದ ವರ್ಷ ದನ-ಕರುಗಳಿಗೆ ಶಾಪವಾಗಿ ಪರಿಣಮಿಸಿದ್ದ ಕಾಲುಬಾಯಿ ರೋಗವನ್ನು ಈ ಬಾರಿ ಸಂಪೂರ್ಣ ನಿರ್ಮೂಲನೆ ಮಾಡಲು ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಪಣ ತೊಟ್ಟಿದೆ.
ಆ. 15ರಿಂದ ತಿಂಗಳ ಕಾಲ ಜಿಲ್ಲೆಯ ಎಲ್ಲ ದನ-ಕರುಗಳಿಗೆ ಕಾಲುಬಾಯಿ ರೋಗದ ನಿಯಂತ್ರಣಕ್ಕೆ ಚುಚ್ಚುಮದ್ದು ಹಾಕುವ ಕಾರ್ಯ ಪ್ರಾರಂಭಿಸಲಿದ್ದು, ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷ ಧಾರವಾಡ ಜಿಲ್ಲೆಯೊಂದರಲ್ಲಿ 121 ದನ, ಕರುಗಳು ಈ ರೋಗಕ್ಕೆ ಪ್ರಾಣ ತೆತ್ತಿದ್ದು, ಈ ವರ್ಷ ಒಂದೂ ದನಗಳು ಈ ರೋಗಕ್ಕೆ ಬಲಿಯಾಗದಿರಲಿ ಎಂದು ಇಲಾಖೆ ಅಧಿಕಾರಿಗಳು ಇದೀಗ ಎಚ್ಚೆತ್ತು ಲಸಿಕಾ ಕಾರ್ಯಕ್ರಮಕ್ಕೆ ತಯಾರಾಗಿದ್ದಾರೆ.
ಪ್ರಸಕ್ತ ಬಾರಿ ಲಸಿಕೆ ಹಾಕುವುದರೊಂದಿಗೆ ಪ್ರತಿ ತಾಲೂಕಿನಲ್ಲಿ 20 ಆಯ್ದ ದನಕರುಗಳಿಗೆ ಮೈಕ್ರೋಚಿಪ್ ಸಹ ಅಳವಡಿಸಲಾಗುತ್ತಿದೆ. ಲಸಿಕೆ ಹಾಕುವ ಮುಂಚೆಯೇ ಈ ಚಿಪ್‌ನ್ನು ಕಿವಿ ಬಳಿ ಚುಚ್ಚುಮದ್ದಿನ ಮೂಲಕ ಅಳವಡಿಸಲಾಗುತ್ತದೆ. ಆ. 15ರಿಂದ ಲಸಿಕೆ ಹಾಕಿ ನಂತರದಲ್ಲಿ ಈ ಚಿಪ್ ಮೂಲಕ ದನಕರುಗಳ ರೋಗ ನಿರೋಧಕ ಶಕ್ತಿ ಕುರಿತು ಮಾಹಿತಿ ಪಡೆಯುತ್ತೇವೆ. ಇದು ಕಾಲುಬಾಯಿ ಇನ್ನಿತರೆ ರೋಗಗಳ ತಡೆಗೂ ಅನುಕೂಲವಾಗಲಿದೆ. ಒಟ್ಟಿನಲ್ಲಿ ಈ ಬಾರಿ ಒಂದೂ ದನಕ್ಕೆ ಕಾಲುಬಾಯಿ ರೋಗ ಬರದಂತೆ ಎಚ್ಚರ ವಹಿಸುತ್ತೇವೆ ಎಂದು ಪಶುಪಾಲನೆ, ಪಶುವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಆನಂದ ಗುಪ್ತಾ ಹೇಳಿದರು. ತಿಳಿವಳಿಕೆ ಹಾಗೂ ಪ್ರಚಾರ ಕೊರತೆಯಿಂದ ಎಷ್ಟೋ ರೈತರು ತಮ್ಮ ದನಕರುಗಳಿಗೆ ಲಸಿಕೆ ಹಾಕಿಸದ ಪರಿಣಾಮ ಕಳೆದ ವರ್ಷ ನೂರಾರು ದನಕರುಗಳು ಕಾಲುಬಾಯಿ ರೋಗಕ್ಕೆ ತುತ್ತಾದವು. ರೈತರ ಬೆನ್ನೆಲುಬಾಗಿರುವ ರಾಸುಗಳ ಉಳಿವಿಗಾಗಿ ರೋಗ ನಿಯಂತ್ರಕ ಲಸಿಕೆ ಅಗತ್ಯವಾಗಿದ್ದು, ಪಶು ಸಂಗೋಪನೆ ಇಲಾಖೆ ಪ್ರಚಾರದ ಮೂಲಕ ಮನವೊಲಿಸುವ ಕಾರ್ಯ ಮಾಡಬೇಕಿದೆ. ಜತೆಗೆ ರೈತರು ಸ್ವಯಂಪ್ರೇರಣೆಯಿಂದ ಲಸಿಕೆ ಹಾಕುವಂತಾಗಬೇಕು.
Advertisement