ಹುಬ್ಬಳ್ಳಿ: ವಿದ್ಯಾರ್ಥಿನಿಯರು ಕೀಳರಿಮೆ ತೊರೆದು ಕಠಿಣ ಪರಿಶ್ರಮ ಅಳವಡಿಸಿಕೊಂಡರೆ ಯಶಸ್ಸು ಸಾಧಿಸಬಹುದು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ನಗರದ ಶ್ರೀ ಜ. ಮೂರುಸಾವಿರಮಠ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಸಕ್ತ ಸಾಲಿನ ಪಠ್ಯೇತರ ಚಟುವಟಿಕೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಕೊಳ್ಳುವುದರಿಂದ ಮಾನಸಿಕ, ದೈಹಿಕ ಹಾಗೂ ಭಾವನಾತ್ಮಕ ಬೆಳವಣಿಗೆ ಹೊಂದಲು ಸಾಧ್ಯ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಪದವಿ ಪ್ರಾಚಾರ್ಯರಾದ ಡಾ. ಉಮಾದೇವಿ ಪ್ರಾಸ್ತಾವಿಕ ಮಾತನಾಡಿದರು. ಕಳೆದ ಶೈಕ್ಷಣಿಕ ಸಾಲಿನ ಪದವಿ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಕಲಾ ವಿಭಾಗದ ವರ್ಷಾ ಪವಾರ ಹಾಗೂ ವಾಣಿಜ್ಯ ವಿಭಾಗದ ಭಾಗ್ಯಲಕ್ಷ್ಮೀ ಜೈನ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮಹಾವಿದ್ಯಾಲಯದ ಪ್ರಧಾನ ಕಾರ್ಯದರ್ಶಿಗಳಾದ ಪಿ. ಚೈತನ್ಯಾ ಹಾಗೂ ಮಧುಮತಿ ನಾಡಗೇರ ಮತ್ತಿತರರಿದ್ದರು. ಪ್ರೊ. ಲಿಂಗರಾಜ ಅಂಗಡಿ ಪರಿಚಯಿಸಿದರು. ಪ್ರಿಯಾ ಬಾಳಿಕಾಯಿ ನಿರೂಪಿಸಿದರು. ಡಾ. ಜಿ.ಎಚ್. ಕಳ್ಳಿಮಠ ವಂದಿಸಿದರು.
Advertisement