ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 6
ಗಣೇಶ ಚತುರ್ಥಿ ಆಚರಣೆಗೆ ಅವಳಿ ನಗರ ಸೇರಿದಂತೆ ಜಿಲ್ಲಾದ್ಯಂತ ಪೂರ್ವ ಸಿದ್ಧತೆಗಳು ಭರದಿಂದ ಸಾಗಿವೆ.
ಈ ಬಾರಿ ಮಳೆ ಉತ್ತಮವಾಗಿ ಸುರಿದಿದ್ದರಿಂದ ಗ್ರಾಮೀಣ ಪ್ರದೇಶದಲ್ಲೂ ಗಣಪತಿ ಹಬ್ಬದ ಸಿದ್ಧತೆಗಳು ತುರುಸು ಪಡೆದಿದ್ದು, ಸಾರ್ವಜನಿಕ ಗಣೇಶ ಮೂರ್ತಿ ಸ್ಥಾಪನೆಗೆ ವ್ಯಾಪಾರಸ್ಥರು ಹಾಗೂ ನಾಗರಿಕರಿಂದ ಚಂದಾ ಎತ್ತುವ ಕಾರ್ಯ ಪ್ರಾರಂಭಗೊಂಡಿದೆ.
ಅವಳಿ ನಗರ ಸೇರಿದಂತೆ ಎಲ್ಲೆಡೆ ಗಣೇಶ ಮೂರ್ತಿಗಳ ತಯಾರಿಕೆ ಬಹುತೇಕ ಪೂರ್ಣಗೊಂಡಿದೆ. ಕೆಲವೆಡೆ ಮೂರ್ತಿಗಳಿಗೆ ಅಂತಿಮ ರೂಪ ನೀಡುವ ಕಾರ್ಯ ನಡೆಯುತ್ತಿದೆ.
ಸಾರ್ವಜನಿಕ ಗಣೇಶ ಮೂರ್ತಿ ಸಂದರ್ಭ ಐತಿಹಾಸಿಕ ಪ್ರಹಸನ ಸೇರಿದಂತೆ ಪ್ರಚಲಿತ ವಿದ್ಯಮಾನಗಳನ್ನಾಧರಿಸಿ ನಿರ್ಮಿಸುವ ರೂಪಕಗಳ ಸಿದ್ಧತೆಗಳೂ ನಡೆದಿವೆ. ಹುಬ್ಬಳ್ಳಿ-ಧಾರವಾಡ ಅಷ್ಟೇ ಅಲ್ಲದೇ ಗ್ರಾಮೀಣ ಪ್ರದೇಶದಲ್ಲಿಯೂ ಗಣೇಶ ಮೂರ್ತಿ ಸ್ಥಳದಲ್ಲಿ ಧಾರ್ಮಿಕ ಮತ್ತಿತರ ರೂಪಕಗಳನ್ನು ನಡೆಸುವ ಸಿದ್ಧತೆಗಳು ಭರದಿಂದ ಸಾಗಿವೆ.
ಹುಬ್ಬಳ್ಳಿಯಲ್ಲಿ 570ಕ್ಕೂ ಹೆಚ್ಚು ಹಾಗೂ ಧಾರವಾಡದಲ್ಲಿ 100ಕ್ಕೂ ಅಧಿಕ ಸಾರ್ವಜನಿಕ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳುತ್ತಿವೆ. ಪುಣೆ, ಮುಂಬಯಿ, ಬೆಂಗಳೂರು, ಕೊಲ್ಲಾಪುರದಲ್ಲಿ ಸಿದ್ಧಗೊಂಡ ಗಣೇಶ ವಿಗ್ರಹಗಳು ಕೆಲವೇ ದಿನಗಳಲ್ಲಿ ನಗರಕ್ಕೆ ಆಗಮಿಸಲಿವೆ.
ಹುಬ್ಬಳ್ಳಿ. ಸರಾಫಗಟ್ಟಿ, ಶೀಲವಂತರ ಓಣಿ, ಶಿಂಪಿಗಲ್ಲಿ, ಹಿರೇಪೇಟೆ, ಸ್ಟೇಶನ್ ರಸ್ತೆ, ಬೂಸಪೇಟೆ, ದುರ್ಗದಬೈಲ್ ಧಾರವಾಡದ ಮಾರುಕಟ್ಟೆ ಪ್ರದೇಶ, ಶ್ರೀನಗರ, ನಾರಾಯಣಪುರ, ಕಲ್ಯಾಣನಗರ ಮತ್ತಿತರೆಡೆ ಸಾರ್ವಜನಿಕ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳಲಿವೆ.
ಗಣೇಶ ಹಬ್ಬದ ಅಂಗವಾಗಿ ಹುಬ್ಬಳ್ಳಿ, ಧಾರವಾಡ, ನವಲಗುಂದ, ಕಲಘಟಗಿ, ಕುಂದಗೋಳ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ತುರುಸು ಪಡೆದುಕೊಳ್ಳಲಿದೆ. ಹುಬ್ಬಳ್ಳಿಯ ದಾಜಿಬಾನ್‌ಪೇಟೆ, ಕೋಯಿನ್ ರೋಡ್, ಅಕ್ಕಿಪೇಟೆ, ಕೊಪ್ಪಿಕರ ರೋಡ್, ಶಹಾಬಜಾರ, ಹಳೇಹುಬ್ಬಳ್ಳಿ ಮಾರುಕಟ್ಟೆ ಹಾಗೂ ಧಾರವಾಡದ ಸುಭಾಸ್ ರಸ್ತೆ, ಟಿಕಾರೆ ರೋಡ್‌ಗಳಲ್ಲಂತೂ ಹಬ್ಬದ ಮುನ್ನಾದಿನ ಹಾಗೂ ಹಬ್ಬದ ದಿನದಂದು ತಳೀರು-ತೋರಣ, ಹಣ್ಣುಗಳ ವ್ಯಾಪಾರ ಭರಪೂರಾಗಿ ನಡೆಯುತ್ತದೆ.
ಹುಬ್ಬಳ್ಳಿಯ ನೆಹರು ಮೈದಾನ ಹಾಗೂ ಧಾರವಾಡ ಎಪಿಎಂಸಿ ಎದುರಿಗಿನ ಮೈದಾನದಲ್ಲಿ ಪಟಾಕಿಗಳ ಮಾರಾಟ ಜೋರಿನಿಂದ ಸಾಗಿವೆ.
Advertisement