ಹುಬ್ಬಳ್ಳಿ: ರಾಜೀವ್ ಗಾಂಧಿ ಸಂಸ್ಥೆಯಿಂದ ಹುಬ್ಬಳ್ಳಿ ಮಂಟೂರು ರಸ್ತೆಯ ಯಲ್ಲಾಪುರ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜಿ 2 (ಅಪಾರ್ಟ್‌ಮೆಂಟ್) ಮಾದರಿಯ ಆಶ್ರಯ ಮನೆ ಯೋಜನೆ ಚುರುಕು ಪಡೆದುಕೊಂಡಿದೆ. ಫಲಾನುಭವಿಗಳ ಸಾಲ ಒದಗಿಸುವ ಪ್ರಕ್ರಿಯೆ ಇಷ್ಟರಲ್ಲಿಯೇ ಆರಂಭವಾಗಲಿದ್ದು, ಆ ಬಳಿಕ ಮೊದಲ ಹಂತದಲ್ಲಿ ಸಾವಿರ ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಲಿದೆ.
ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗಾಗಿ
ನಗರ ವಸತಿ ಯೋಜನೆಯಡಿ ಒಟ್ಟು 3 ಸಾವಿರ ಮನೆಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಇದು ಆಶ್ರಯ ಯೋಜನೆಗೆ ಹೋಲಿಸಿದಾಗ ವಿಭಿನ್ನವಾಗಿದ್ದು, ಮಧ್ಯಮ ವರ್ಗದವರಿಗೆ ಮೀಸಲಾಗಿರುವ ಮನೆಗಳು. ಈ ಯೋಜನೆ ಲಾಭ ಪಡೆದುಕೊಳ್ಳುವ ಫಲಾನುಭವಿಗಳು ಪ್ರತಿ ಮಾಸಿಕ ಕನಿಷ್ಠ ರು. 7,500 ಆದಾಯ ಹೊಂದಿರುವುದು ಕಡ್ಡಾಯ.
ಹೀಗಿದೆ ಮನೆ: ಜಿ 2 (ಅಪಾರ್ಟ್‌ಮೆಂಟ್) ಮಾದರಿಯ ಮನೆಗಳ ನಿರ್ಮಾಣ ಕಾರ್ಯಕ್ಕೆ 32.24 ಎಕರೆ ಜಾಗ ಮೀಸಲಿರಿಸಲಾಗಿದೆ. ಪಾಲಿಕೆ ಈ ಜಾಗವನ್ನು ಪ್ರತಿ ಎಕರೆಗೆ ರು. 4.55 ಲಕ್ಷ ಪಾವತಿಸಿ 2007ರಲ್ಲೇ ಖರೀದಿಸಿಟ್ಟಿತ್ತು. ಈ ಭಾಗದಲ್ಲಿಯೇ ಇದೀಗ ಜಾಗಕ್ಕೆ ಬಂಗಾರದ ಬೆಲೆ ಬಂದಿದೆ. ಪ್ರಸ್ತುತ ನಿರ್ಮಿಸಲಾಗುತ್ತಿರುವ ಪ್ರತಿ ಮನೆ 310 ಚ.ಅಡಿ ವಿಸ್ತೀರ್ಣ ಹೊಂದಿದ್ದು, ಅಡುಗೆ ಕೋಣೆ, ಹಾಲ್, ಕಿಚನ್, ಬಾತ್‌ರೂಮ್ ಹಾಗೂ ಟಾಯಲೆಟ್ ಹೊಂದಿರುತ್ತದೆ. ಪ್ರತಿಯೊಂದು ಬ್ಲಾಕ್‌ನಲ್ಲಿ 12 ಮನೆಗಳನ್ನು ನಿರ್ಮಿಸಲಾಗುತ್ತದೆ.
3 ತಿಂಗಳಲ್ಲಿ ಹಣ ಕಟ್ಟಬೇಕು: ಹುಬ್ಬಳ್ಳಿ ಮಟ್ಟಿಗೆ ಸರ್ಕಾರದಿಂದ ಜಿ 2 (ಅಪಾರ್ಟ್‌ಮೆಂಟ್) ಮಾದರಿಯ ಮನೆಗಳು ನಿರ್ಮಾಣವಾಗುತ್ತಿರುವುದು ಇದೇ ಮೊದಲು. ಈ ಮನೆಗಳನ್ನು ಸರಿಸುಮಾರು ರು. 3.86 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸರ್ಕಾರ ರು. 1.20 ಲಕ್ಷ ಸಬ್ಸಿಡಿ ನೀಡುತ್ತದೆ. ಬಾಕಿ ಹಣವನ್ನು ಫಲಾನುಭವಿಗಳು ಬರಿಸಬೇಕು. ಬಾಕಿ ಹಣ ಭರಿಸಲಿಕ್ಕೆ ಕೇವಲ ಮೂರು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಒಂದೊಮ್ಮೆ ಮೂರು ತಿಂಗಳಲ್ಲಿ ಹಣ ಪಾವತಿಸದಿದ್ದರೆ ಮನೆ ನೀಡಲಾಗುವುದಿಲ್ಲ. ಪ್ರಸ್ತುತ ಮಾರುಕಟ್ಟೆ ದರ ಹೆಚ್ಚಿರುವುದರಿಂದ ಮನೆಗಳ ನಿರ್ಮಾಣ ವೆಚ್ಚವೂ ಹೆಚ್ಚಾಗಲಿದೆ. ಹೀಗಾಗಿ ಸಬ್ಸಿಡಿ ಸೇರಿದಂತೆ ಫಲಾನುಭವಿಗಳು ಭರಿಸುವ ಹಣದ ಮೊತ್ತವೂ ಹೆಚ್ಚಾಗಲಿದೆ.
ಸಾಲದ ವ್ಯವಸ್ಥೆ: ಇಂಥ ಸ್ಥಿತಿಯಲ್ಲಿ ಫಲಾನುಭವಿಗಳು ಮೂರೇ ತಿಂಗಳಲ್ಲಿ ಲಕ್ಷಾಂತರ ರುಪಾಯಿ ಕೂಡಿಸಿ ಮನೆಗಾಗಿ ನೀಡುವುದು ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್ ಫಲಾನುಭವಿಗಳ ನೆರವಿಗೆ ಬಂದಿದ್ದಾರೆ. ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಇಷ್ಟರಲ್ಲೇ ಸಭೆ ನಡೆಸಿ ಆಯ್ಕೆಯಾದ ಫಲಾನುಭವಿಗಳಿಗೆ ಸಾಲದ ನೆರವು ನೀಡುವಂತೆ ಕೋರಲಿದ್ದಾರೆ. ಸಾಲಕ್ಕೆ ಪ್ರತಿಯಾಗಿ ಬ್ಯಾಂಕ್ ಮನೆಯನ್ನು ಒತ್ತೆಯಾಗಿರಿಸಿಕೊಳ್ಳಲಿದೆ. ಒಂದೊಮ್ಮೆ ಸಾಲದ ಮೊತ್ತ ಕಟ್ಟದಿದ್ದಲ್ಲಿ ಬ್ಯಾಂಕ್ ಮನೆ ಹರಾಜು ಹಾಕುವ ಅಧಿಕಾರ ಹೊಂದಿರುತ್ತದೆ. ಮೌಖಿಕವಾಗಿ ಈ ಬಗ್ಗೆ ಶಾಸಕ ಅಬ್ಬಯ್ಯ ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಬ್ಯಾಂಕ್ ಕೂಡ ಸಾಲ ನೀಡಲು ಮುಂದೆ ಬಂದಿದ್ದಾಗಿ ತಿಳಿದು ಬಂದಿದೆ. ಈ ತಿಂಗಳ ಮೂರನೇ ವಾರದಲ್ಲಿ ಸಭೆ ನಡೆಯುವ ಸಾಧ್ಯತೆಯಿದೆ.
ಬ್ಯಾಂಕ್ ಸಾಲ ವ್ಯವಸ್ಥೆ ಕಲ್ಪಿಸಿಕೊಟ್ಟಲ್ಲಿ ಫಲಾನುಭವಿಗಳು ನಿರಾಳರಾಗಲಿದ್ದಾರೆ. ಇದೀಗ ಪ್ರತಿ ತಿಂಗಳು ಬಾಡಿಗೆ ಮನೆಯಲ್ಲಿದ್ದು, ಬಾಡಿಗೆ ಕಟ್ಟುವ ಬದಲು ಸ್ವಂತ ಮನೆ ಪಡೆಯಲು ಕಂತು ಕಟ್ಟಲಿದ್ದಾರೆ. ಪ್ರತಿ ತಿಂಗಳ ರು. 2ರಿಂದ 2,500 ಸಾವಿರ ಕಂತು ತುಂಬುವಂತೆಯೂ ವ್ಯವಸ್ಥೆ ಕಲ್ಪಿಸಿಕೊಡಲು ಶಾಸಕ ಅಬ್ಬಯ್ಯ ಆಸಕ್ತಿ ತೋರಿದ್ದಾರೆ.
ಆರು ತಿಂಗಳು: ಎಲ್ಲವೂ ಅಂದುಕೊಂಡಂತೆ ಆದಲ್ಲಿ ಬರುವ ಆರು ತಿಂಗಳೊಳಗಾಗಿ ಮನೆ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಸಭೆ ನಡೆದ ಕೂಡಲೇ ಸಾಲ ವ್ಯವಸ್ಥೆಗೆ ಫಲಾನುಭವಿಗಳ ಅರ್ಜಿ ಪರಿಶೀಲನೆ ನಡೆಯಲಿದೆ. 12 ಸಾವಿರ ಅರ್ಜಿಗಳು ಬಂದಿರುವುದರಿಂದ ಜಾತಿವಾರು, ಅಂಗವಿಕಲರು, ಮಾಜಿ ಸೈನಿಕರು ಇತ್ಯಾದಿ ಕೋಟಾದಡಿ ಪಟ್ಟಿ ಸಿದ್ದಪಡಿಸಲಾಗುತ್ತದೆ. ಆ ಬಳಿಕ ಫಲಾನುಭವಿಗಳ ಆಯ್ಕೆ ನಡೆಯಲಿದೆ. ಈ ಪ್ರಕ್ರಿಯೆಗೆ ಸುಮಾರು ಆರು ತಿಂಗಳ ಸಮಯ ಬೇಕಾಗುತ್ತದೆ. ನಂತರ ಮೊದಲ ಹಂತದ ಮನೆ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, ಆದಷ್ಟು ಬೇಗ ಮನೆ ನಿರ್ಮಾಣವಾಗಲಿ ಎಂದು ಕನಸಿನ ಮನೆಯ ಕನಸು ಹೊತ್ತುಕೊಂಡ ಫಲಾನುಭವಿಗಳು ಆಶಿಸುತ್ತಿದ್ದಾರೆ.
12 ಸಾವಿರ ಅರ್ಜಿ
ಮೊದಲ ಹಂತದ ಸಾವಿರ ಮನೆ ಪಡೆಯಲು ಪೂರ್ವ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ನಿವಾಸಿಗಳು ಈಗಾಗಲೇ 12 ಸಾವಿರ ಅರ್ಜಿ ಸಲ್ಲಿಸಿದ್ದಾರೆ. ಆಶ್ರಯ ಮನೆಯಂತೆಯೂ ಈ ಮನೆ ಇರಬಹುದೆಂದು ಬಿಪಿಎಲ್ ಪಡಿತರದಾರರೂ, ಈಗಾಗಲೇ ಆಶ್ರಯ ಮನೆ ಪಡೆದವರೂ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇಂಥವರಿಗೆ ಮನೆ ಸಿಗುವುದಿಲ್ಲ. 12 ಸಾವಿರ ಅರ್ಜಿಗಳ ಪರಿಶೀಲನಾ ಕಾರ್ಯ ಇಷ್ಟರಲ್ಲೇ ಆರಂಭವಾಗಲಿದೆ. ಒಂದೊಮ್ಮೆ ಪರಿಶೀಲನೆ ಕಾರ್ಯ ಆರಂಭವಾದಲ್ಲಿ ಅನೇಕ ಅರ್ಜಿಗಳು ತಿರಸ್ಕೃತವಾಗುವುದರಲ್ಲಿ ಸಂದೇಹವಿಲ್ಲ.
ಈ ವ್ಯವಸ್ಥೆ ಅಗತ್ಯ
ಈಗ ನಿರ್ಮಿಸುವ ಮನೆಗಳಿಗೆ ಕುಡಿವ ನೀರು, ಕರೆಂಟ್, ರಸ್ತೆಯಂತಹ ಸೌಲಭ್ಯಗಳೂ ಲಭ್ಯವಾಗಲಿವೆ. ಇದಕ್ಕಾಗಿ ಸರ್ಕಾರವೇ ಹಣ ಖರ್ಚು ಮಾಡಲಿದೆ. ಆದರೆ, ವಾಹನಗಳ ಪಾರ್ಕಿಂಗ್,ಅಡುಗೆ ಕೋಣೆಯಲ್ಲಿ ಕಟ್ಟೆ, ಸಾಮಗ್ರಿಗಳನ್ನಿಡಲು ಸಜ್ಜಾ ನಿರ್ಮಿಸುವ ಬಗ್ಗೆ ಯೋಜನೆಯಲ್ಲಿ ಪ್ರಸ್ತಾಪಿಸಿಲ್ಲ. ಮಾದರಿ ಮನೆಗಳನ್ನು ನಿರ್ಮಿಸುತ್ತಿರುವುದರಿಂದ ಮುಂದಿನ ದಿನದ ಅಗತ್ಯತೆ ಮನಗಂಡು ಪ್ರಸ್ತುತ ಯೋಜನೆ ಪರಿಷ್ಕರಿಸುವ ಅಗತ್ಯವಿದೆ.
- ಪ್ರಕಾಶ ಎಸ್. ಶೇಟ್
Advertisement