-ರವಿ ಬಡಿಗೇರ
ಕಲಘಟಗಿ: ಬೈಕ್, ಕಾರು ಕಳ್ಳತನದಂತಹ ಪ್ರಕರಣಗಳು ವರದಿಯಾಗುತ್ತಿದ್ದರೂ ಕೈಕಟ್ಟಿ ಕುಳಿತುಕೊಂಡಿದ್ದರು. ಇದರ ಪರಿಣಾಮವೋ ಎನ್ನುವಂತೆ ಕಲಘಟಗಿಯಲ್ಲಿ ಇದೀಗ ಕಳ್ಳರು ಟಿಪ್ಪರನ್ನೇ ಕದ್ದೊಯ್ಯಲಾರಂಭಿಸಿದ್ದಾರೆ.
ಪಟ್ಟಣದ ಹಳಿಯಾಳ ರಸ್ತೆಗೆ ಹೊಂದಿಕೊಂಡಿರುವ ಬಸವೇಶ್ವರ ನಗರದ ಮಾರ್ಗದಲ್ಲಿ ನಿಲ್ಲಿಸಿದ್ದ ಟಿಪ್ಪರೊಂದನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ಘಟನೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶ ವಾಹನ ಮಾಲೀಕರಲ್ಲಿ ಆಶ್ಚರ್ಯದ ಜತೆಗೆ ಆತಂಕವನ್ನ್ನುಂಟು ಮಾಡಿದೆ.
ಇಲ್ಲಿನ ಪಟ್ಟಣ ಪಂಚಾಯಿತಿ ಅಭಿವೃದ್ಧಿ ಯೋಜನೆಯ ಕಾಮಗಾರಿಗಾಗಿ ಬಂದಿದ್ದ ಉತ್ತರ ಕನ್ನ್ನಡ ಜಿಲ್ಲೆಯ ಸದಾಶಿವಗಡದ ಲಾರಿ ಮಾಲೀಕರ ಎರಡು ಟಿಪ್ಪರ್‌ಗಳಲ್ಲಿ ಕೆಎ-30- 3892ನ್ನು ಬುಧವಾರ ಬೆಳಗಿನ ಜಾವ ಕಳ್ಳರು ದೋಚಿಕೊಂಡು ಹೋಗಿದ್ದಾರೆ.
ಈ ಬಗ್ಗೆ ಟಿಪ್ಪರ್ ಚಾಲಕ ಅಶೋಕ ಶಿವರಾಮ ನಾಯಕ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಹದಿನೈದು ದಿನಗಳಿಂದ ಪಟ್ಟಣದ ಬಸವೇಶ್ವರ ನಗರದ ಬಾಡಿಗೆಯ ಮನೆ ಬಳಿಯೇ ಚಾಲಕರು ಟಿಪ್ಪರ್ ನಿಲ್ಲಿಸಿದ್ದರು. ಆದರೆ, ಬುಧವಾರ ಬೆಳಗಿನ ಜಾವ ಎಂದಿನಂತೆ ಮನೆ ಮುಂದೆ ಟಿಪ್ಪರ್ ಕಾಣದಿದ್ದಾಗಿ ಸುತ್ತಲೂ ಹುಡುಕಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಲಾರಿ, ದ್ವಿಚಕ್ರ ವಾಹನ, ಟ್ರ್ಯಾಕ್ಟರ್ ಅವುಗಳಿಗೆ ಬಳಸುವ ಸಲಕರಣೆಗಳ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದವು. ಆದರೀಗ ಲಾರಿ ಕಳ್ಳತನ ಪ್ರಕರಣ ಜನರನ್ನು ಚಿಂತೆಗೀಡು ಮಾಡಿದೆ.
ಕಳೆದೆರಡು ವರ್ಷಗಳ ಹಿಂದೆ ಪಟ್ಟಣದ ಹೆದ್ದಾರಿಗೆ ಹೊಂದಿಕೊಂಡಿರುವ ಸಾಗರ ಹೋಟೆಲ್ ಬಳಿ ಲಾರಿಯೊಂದು, ಮೂರು ವರ್ಷಗಳ ಹಿಂದೆ ತಾಲೂಕಿನ ಗು. ಹುಲಿಕಟ್ಟಿ ಗ್ರಾಮದಲ್ಲಿ ಟ್ರ್ಯಾಕ್ಟರ್ ಸೇರಿದಂತೆ ಹಲವಾರು ದ್ವಿಚಕ್ರ ವಾಹನಗಳು ಕಳ್ಳತನವಾಗಿದ್ದವು. ಅಲ್ಲದೇ, ವಾಹನಗಳ ಬಿಡಿ ಭಾಗಗಳನ್ನೂ ದೋಚಿದ ಪ್ರಕರಣಗಳನ್ನು ವಾಹನ ಚಾಲಕರು ನೆನಪಿಸಿಕೊಳ್ಳುತ್ತಿದ್ದಾರೆ. ರಾಜ್ಯ, ಜಿಲ್ಲಾ ಕೇಂದ್ರ ಸಂಪರ್ಕಿಸುವ, ರಸ್ತೆಗೆ ಹೊಂದಿರುವುದರೊಂದಿಗೆ ಜನನಿಬೀಡ ಸ್ಥಳಗಳಾದ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಬೀದಿ ದೀಪ, ಪೊಲೀಸ್ ಗಸ್ತು ಇಲ್ಲದಿರುವುದರಿಂದ ಈ ಪ್ರಕರಣಗಳು ಸಂಭವಿಸುತ್ತಿವೆ ಎಂದು ಲಾರಿ ಮಾಲೀಕರು ಪತ್ರಿಕೆ ಮುಂದೆ ಅಳಲು ತೋಡಿಕೊಂಡರು.
ಕಳ್ಳತನವಾದ ವಾಹನ ತಕ್ಷಣ ಸಿಕ್ಕರೆ ಪುಣ್ಯ, ಇಲ್ಲವಾದರೆ ಆ ವಾಹನಗಳ ನಾಮಫಲಕಗಳನ್ನು ಕಿತ್ತು ಹಾಕಿ ಬಿಡಿ ಭಾಗಗಳನ್ನು ಮಾರಾಟ ಮಾಡಿ ಬಂದಷ್ಟು ಹಣ್ನ ಬಾಚಿ ಕಳ್ಳರು ಪರಾರಿಯಾಗುತ್ತಾರೆಂದು ಅಸಹಾಯಕತೆ ತೋಡಿಕೊಂಡರು.
Advertisement