ಕನ್ನಡಪ್ರಭ ವಾರ್ತೆ, ಧಾರವಾಡ, ಆ. 6
ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಕರ್ನಾಟಕ ವಿಶ್ವವಿದ್ಯಾಲಯದ ಮಾನ ಸಾರ್ವಜನಿಕವಾಗಿ ಹರಾಜಾಗುತ್ತಿದೆ.
ಕುಲಪತಿ ಡಾ. ಎಚ್.ಬಿ. ವಾಲೀಕಾರ ಹಾಗೂ ಕುಲಸಚಿವರಾದ ಪ್ರೊ. ಚಂದ್ರಮಾ ಕಣಗಲಿ ಮಧ್ಯೆ ಶೀತಲ ಯುದ್ಧ ಶುರುವಾಗಿದ್ದು, ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.
ಪ್ರೊ. ಚಂದ್ರಮಾ ಕಣಗಲಿ ಕುಲಸಚಿವರಾದಾಗ ಇನ್ನಾದರೂ ಕುಲಪತಿ ಹಾಗೂ ಕುಲಸಚಿವರ ಮಧ್ಯೆ ಉತ್ತಮ ಬಾಂಧವ್ಯ ಮೂಡಲಿದ್ದು, ಕರ್ನಾಟಕ ವಿವಿ ಬೆಳವಣಿಗೆಗೆ ಅದು ಪೂರಕವಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ, ಇಬ್ಬರ ಹೊಂದಾಣಿಕೆಯ ಕೆಲಸ ಹಾಗೂ ಬಾಂಧವ್ಯ ಬಹಳ ದಿನಗಳ ಕಾಲ ಉಳಿಯದೇ ಇದೀಗ ಜಗಳದ ಹಂತಕ್ಕೆ ಬಂದು ನಿಂತಿದೆ.
ಪ್ರೊ. ಚಂದ್ರಮಾ ಕಣಗಲಿ ಇಂಗ್ಲಿಷ್ ವಿಭಾಗ ಮುಖ್ಯಸ್ಥರಾಗಿದ್ದಾಗ ಇಂಗ್ಲಿಷ್ ವಿಷಯದ ಎಂಫಿಲ್ ಪರೀಕ್ಷೆಯ ಉತ್ತರ ಪತ್ರಿಕೆಗಳ ನಾಪತ್ತೆ, ನಕಲಿ ಸಹಿ ಹಾಗೂ ಬಾಹ್ಯ ಮೌಲ್ಯಮಾಪಕರ ನೇಮಕ ಸಂಬಂಧ ಎಸಗಿರುವ ಲೋಪ ಕುರಿತು ಆ. 1ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಚರ್ಚೆ ಬಂದಿತು. ಕುಲಪತಿ ಡಾ. ವಾಲೀಕಾರ ಈ ಆರೋಪ ಸಂಬಂಧ ತನಿಖಾ ಸಮಿತಿಯನ್ನು ರಚಿಸಲು ನಿರ್ಧರಿಸಿದ್ದರು.
ಬಹಿರಂಗ ಆರೋಪ: ಈ ವಿಷಯ ಕಣಗಲಿ ಅವರನ್ನು ಕೆರಳಿಸಿದ್ದು, ನನ್ನನ್ನು ಸರ್ಕಾರ ನೇಮಿಸಿದೆ. ಕುಲಪತಿ ನಿರ್ದೇಶನದ ಅಗತ್ಯ ನನಗಿಲ್ಲ ಎಂದು ಉತ್ತರಿಸಿದ್ದಾರೆ. ಅಲ್ಲದೇ, ಉಪನ್ಯಾಸಕರ ಹುದ್ದೆಗಳ ನೇಮಕಾತಿ ಹಾಗೂ ಸುಮಾರು ರು. 5 ಕೋಟಿ ವೆಚ್ಚದ ಸೌರಶಕ್ತಿ ವಿದ್ಯುತ್ ಉತ್ಪಾದನಾ ಘಟಕಕ್ಕೆ ಸಂಬಂಧಿಸಿದ ಕಡತಗಳಿಗೆ ಸಹಿ ಹಾಕುವಂತೆ ಕುಲಪತಿ ಒತ್ತಡ ಹೇರಿದರು. ಅವಸರದಲ್ಲಿ ಮಾಡುವ ಕೆಲಸಗಳು ಇವಲ್ಲ. ಮುಂದೆ ನಾನೇ ಹೊಣೆ ಹೊರಬೇಕಾಗುತ್ತದೆ ಎಂದು ಸಹಿ ಮಾಡದ ಕಾರಣ, ಹಿಂದಿನ ಯಾವುದೋ ಆರೋಪವನ್ನು ಸಿಂಡಿಕೇಟ್ ಸಭೆಯಲ್ಲಿ ನನ್ನ ಮೇಲೆ ಹೊರಿಸಲಾಗಿದೆ. ಇದಕ್ಕಿಂತ ಹೆಚ್ಚಾಗಿ ಕುಲಪತಿಗಳ ಸೇವಾವಧಿ ಸೆಪ್ಟೆಂಬರ್ 4ಕ್ಕೆ ಮುಕ್ತಾಯವಾಗಲಿದ್ದು, ಈ ಅವಧಿಯಲ್ಲಿ ಯಾವುದೇ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವಂತಿಲ್ಲ. ಇದನ್ನೆಲ್ಲ ಮೀರಿ ಕುಲಪತಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಕಣಗಲಿ ಬಹಿರಂಗವಾಗಿಯೇ ಆರೋಪಿಸಿದ್ದಾರೆ.
ಬೆದರಿಕೆ: ಈ ಮಧ್ಯೆ ಮಂಗಳವಾರ ಕುಲಸಚಿವರು ನನ್ನ ಮೇಲೆ ಮಹಿಳಾ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಬೆದರಿಗೆ ಸಂದೇಶ ಕಳುಹಿಸಿದ್ದಾರೆಂದು ಕುಲಪತಿ ಡಾ. ವಾಲೀಕಾರ ಆರೋಪಿಸಿದ್ದಾರೆ. ಆದರೆ, ನಾನು ಈ ರೀತಿ ಸಂದೇಶ ಕಳುಹಿಸಿಲ್ಲವೆಂದು ಕುಲಸಚಿವರು ಸ್ಪಷ್ಟಪಡಿಸಿದ್ದಾರೆ.
ವಿವಾದಗಳ ಸರಮಾಲೆ: ಈ ಹಿಂದಿನ ಅರವತ್ತು ವರ್ಷಗಳ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಇರದಷ್ಟು ವಿವಾದಗಳು, ಗೊಂದಲ ಹಾಗೂ ಹಗರಣಗಳು ಇತ್ತೀಚಿನ ವರ್ಷಗಳಲ್ಲಿ ನಡೆದು ಹೋದವು. ಕುಲಪತಿ ಡಾ. ವಾಲೀಕಾರ ಅವರ ನೇಮಕವೇ ಅಸಬಂದ್ಧ ಎಂದು ಕುಲಪತಿ ಆಕಾಂಕ್ಷಿಯಾಗಿದ್ದ ಪ್ರೊ. ಎಸ್.ಬಿ. ಹಿಂಚಿಗೇರಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ರಾಜ್ಯಪಾಲರೇ ಈ ನೇಮಕಾತಿ ಮಾಡಿದ ಕಾರಣ ವಾಲೀಕಾರ ಅವರೇ ಮುಂದುವರಿದರು. ನಂತರದಲ್ಲಿ ಕುಲಪತಿ ವಾಲೀಕಾರ ಹಾಗೂ ಹಿಂಚಿಗೇರಿ ಮಧ್ಯೆ ತೀವ್ರ ವಿವಾದಗಳಾದವು. ಏಕಾಏಕೀ ಒಂದು ದಿನ ಕುಲಸಚಿವ ಹಿಂಚೇಗೇರಿ ಅವರ ಸ್ಥಾನಕ್ಕೆ ಡಾ. ಎಸ್.ಎ. ಪಾಟೀಲ ಎಂಬುವರನ್ನು ತಂದು ಒಂದು ದಿನದ ಮಟ್ಟಿಗೆ ಕೂರಿಸಲಾಯಿತು. ಹಿಂಚಿಗೇರಿ ಅವರು ಮತ್ತೆ ನ್ಯಾಯಾಲಯದ ಮೆಟ್ಟಿಲೇರಿ ಸರ್ಕಾರದ ಆದೇಶ ಪ್ರಶ್ನಿಸಿ ಮತ್ತೆ ತಮ್ಮ ಸ್ಥಾನ ಅಲಂಕರಿಸಿದರು. ಹಿಂಚಿಗೇರಿ ಅವರ ಅವಧಿ ಮುಗಿದ ನಂತರ ಬಂದ ಜಿ.ಬಿ. ನಂದನ ಅವರಿಗೆ ಹಾಗೂ ಕುಲಪತಿ ಡಾ. ವಾಲೀಕಾರ ಅವರ ಮಧ್ಯೆಯೂ ಅನೇಕ ಗೊಂದಲ ಹಾಗೂ ಕಚ್ಚಾಟಗಳು ನಡೆದವು. ತದನಂತರ ಪ್ರೊ. ಚಂದ್ರಮಾ ಕಣಗಲಿ ಬಂದಿದ್ದು, ಇನ್ನಾದರೂ ವಿಶ್ವವಿದ್ಯಾಲಯ ಸರಳವಾಗಿ ನಡೆಯುತ್ತದೆ ಎನ್ನುವಷ್ಟರಲ್ಲಿ ಇದೀಗ ಇಬ್ಬರ ಮಧ್ಯೆ ಶೀತಲ ಯುದ್ಧ ನಡೆಯುತ್ತಿದೆ.
ಅಲ್ಲದೇ, ವಿಧಾನ ಪರಿಷತ್ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆ, ಲೆಕ್ಕ ಪರಿಶೋಧಕರ ಹೆಸರಿನಲ್ಲಿ ಯೋಜನೆ ಮತ್ತು ಅಭಿವೃದ್ಧಿ ಅಧಿಕಾರಿ ಹಣ ದುರಪಯೋಗ ಹೀಗೆ ವಿಶ್ವವಿದ್ಯಾಲಯ ನಿರಂತರವಾಗಿ ಸುದ್ದಿಯಲ್ಲಿದೆ. ಇದು ಶೈಕ್ಷಣಿಕ ಗುಣಮಟ್ಟದ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಕೂಡಲೇ ಕವಿವಿಯಲ್ಲಿ ನಡೆಯುತ್ತಿರುವ ಆಂತರಿಕ ಕಚ್ಚಾಟಗಳು ನಿಲ್ಲಬೇಕೆನ್ನುವುದೇ ಎಲ್ಲರ ಆಶಯವಾಗಿದೆ.
-ಬಸವರಾಜ ಹಿರೇಮಠ
Advertisement