ಧಾರವಾಡ: ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಆಯುಕ್ತರಾಗಿ ಶಿವಾನಂದ ಕಾಪಸೆ ಅಧಿಕಾರ ಸ್ವೀಕರಿಸಿದ್ದಾರೆ. ಶಿವಾನಂದ ಕಾಪಸೆ ಅವರು ಬಾಗಲಕೋಟೆ ಉಪವಿಭಾಗಾಧಿಕಾರಿಗಳಾಗಿ 2007ರಿಂದ 2010ರ ವರೆಗೆ ಮೂರು ವರ್ಷಗಳನ್ನು ಹಾಗೂ ಧಾರವಾಡ ಉಪವಿಭಾಗ ಅಧಿಕಾರಿಗಳಾಗಿ ಎರಡು ವರ್ಷ ಹಾಗೂ ಧಾರವಾಡ ಅಪರ ಜಿಲ್ಲಾಧಿಕಾರಿಗಳಾಗಿ ಒಂದೂವರೆ ವರ್ಷ ಮತ್ತು 2014ರ ಲೋಕಸಭಾ ಮಹಾಚುನಾವಣೆ ಸಂದರ್ಭ ಮೈಸೂರಿನ ಅಪರ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.
ತೆರೆದ ಕೊಳವೆ ಬಾವಿ ಮುಚ್ಚಿ
ಧಾರವಾಡ: ಜಿಲ್ಲೆಯಲ್ಲಿರುವ ಕೊರೆದ ಕೊಳವೆ ಬಾವಿಗಳು ಮುಚ್ಚದೆ ಹಾಗೆ ಬಿಟ್ಟಿರುವುದು ಕಂಡು ಬಂದಲ್ಲಿ ಅಂತಹ ತೆರೆದ ಕೊಳವೆ ಭಾವಿಗಳನ್ನು ಮುಚ್ಚಿ ಭದ್ರಪಡಿಸಬೇಕೆಂದು ಜಿಪಂ ಅಧ್ಯಕ್ಷ ಸುರೇಶ ಚನ್ನಪ್ಪ ಗಾಣಿಗೇರ ತಿಳಿಸಿದರು. ಬುಧವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಜಿಲ್ಲೆಯ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಸಫಲಗೊಂಡ ಹಾಗೂ ಅಸಫಲಗೊಂಡ ಕೊಳವೆ ಬಾವಿಗಳ ವಿವರಗಳನ್ನು ಆ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಒಪ್ಪಿಸಲು ಸೂಚನೆ ನೀಡಿದರು.
ಟ್ಯಾಂಕರ್ ಪಲ್ಟಿ: ಚಾಲಕ ಸಾವು
ಧಾರವಾಡ: ಇಲ್ಲಿನ ಬೇಲೂರು ಕೈಗಾರಿಕಾ ಪ್ರದೇಶದಿಂದ ಬೈಪಾಸ್ ಮೂಲಕ ಮಂಗಳೂರು ಕಡೆ ಹೊರಟಿದ್ದ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಸಮೀಪದ ಕೆಲಗೇರಿ ಬೈಪಾಸ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ತಮಿಳುನಾಡು ಸೇಲಂ ಬಳಿಯ 27 ವರ್ಷದ ಎ. ದಾಸ ಎಂಬಾತ ಮೃತನಾಗಿದ್ದು, ಕ್ಲೀನರ್ ದಿವಾಕರ ಗಾಯಗೊಂಡಿದ್ದಾನೆ. ಈ ಕುರಿತು ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Advertisement