ಹುಬ್ಬಳ್ಳಿ: ಇಲ್ಲಿಯ ಇಂದಿರಾ ನಗರದಲ್ಲಿ ಹಂದಿ ಹಿಡಿಯಲು ತೆರಳಿದ್ದ ಪಾಲಿಕೆ ಸಿಬ್ಬಂದಿ, ಪೌರಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದ ಆರು ಆರೋಪಿಗಳನ್ನು ಕೇಶ್ವಾಪುರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತರು ರಮೇಶ ಕರಿಯಪ್ಪ ಹುಲಿಕಟ್ಟಿ (32), ಶ್ರೀಕಾಂತ ಗಂಗಪ್ಪ ಹೆಬಸೂರ (22), ಹನುಮಂತ ದುರ್ಗಪ್ಪ ಹೊಸೂರು (18), ಗಂಗಪ್ಪ ಗಂಗಪ್ಪ ಹೆಬಸೂರ (40), ಗಂಗಪ್ಪ ದ್ಯಾಮಣ್ಣ ಬದಾಮಿ (24), ದ್ಯಾಮಪ್ಪ ಯಲ್ಲಪ್ಪ ಪೂಜಾರ (34).
ಜೂ. 30ರಂದು ಮಧ್ಯಾಹ್ನ ಇಂದಿರಾನಗರ ಬಳಿ ಮಹಾನಗರ ಪಾಲಿಕೆ ಸಿಬ್ಬಂದಿ, ಪೌರಕಾರ್ಮಿಕರು ಹಂದಿಗಳನ್ನು ಹಿಡಿಯಲು ತೆರಳಿದ್ದಾಗ ಹಂದಿಗಳ ಮಾಲೀಕರು ಕಲ್ಲು ತೂರಾಟ ನಡೆಸಿ, ಬಡಿಗೆಗಳಿಂದ ಹಲ್ಲೆ ಮಾಡಿದ್ದರು. ಈ ಕುರಿತು ಪಾಲಿಕೆ ಆರೋಗ್ಯಾಧಿಕಾರಿ ಡಾ. ಪಿ.ಎನ್. ಬಿರಾದಾರ ಕೇಶ್ವಾಪುರ ಠಾಣೆಯಲ್ಲಿ ದೂರು ನೀಡಿದ್ದರು. ಆರು ಆರೋಪಿಗಳನ್ನು ಬಂಧಿಸಿರುವ ಕೇಶ್ವಾಪುರ ಠಾಣೆ ಪೊಲೀಸರು, ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.